ಹೈದರಾಬಾದ್: ಹೈಜಂಪ್ ಸ್ಪರ್ಧಿ ಕರ್ನಾಟಕದ ಸಹನಾ ಕುಮಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಪಡೆದಿದ್ದಾರೆ. ಈ ಮೂಲಕ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ ಭಾರತದ 14ನೇ ಅಥ್ಲೀಟ್ ಎನಿಸಿದರು.
ಸಹನಾ ಶನಿವಾರ ಇಲ್ಲಿ ಆರಂಭವಾದ 52ನೇ ರಾಷ್ಟ್ರೀಯ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ. ಗಚ್ಚಿಬೌಳಿಯಲ್ಲಿರುವ ಜಿಎಂಜಿ ಬಾಲಯೋಗಿ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಅವರು 1.92 ಮೀಟರ್ ಎತ್ತರ ಜಗಿದರು.
2004ರಲ್ಲಿ ಕೇರಳದ ಬಾಬಿ ಅಲೋಷಿಯಸ್ 1.91 ಮೀ.ಎತ್ತರ ಜಿಗಿದು ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಸಹನಾ ಅಳಿಸಿ ಹಾಕಿದರು. ಅಲೋಷಿಯಸ್ ಹೆಸರಿನಲ್ಲಿದ್ದ ಕೂಟ ದಾಖಲೆಯನ್ನೂ ಅವರು ಅಳಿಸಿ ಹಾಕಿದರು. ಸಹನಾ ಒಲಿಂಪಿಕ್ಸ್‌ನ `ಬಿ~ ಅರ್ಹತೆ ಮಟ್ಟ ಮುಟ್ಟಿದರು.
`ಈ ಸಾಧನೆ ನನ್ನಲ್ಲಿ ಸಂತೋಷ ಉಂಟು ಮಾಡಿದೆ. ಆದರೆ 1.95 ಮೀ. ಎತ್ತರ ಜಿಗಿಯಬೇಕೆಂಬ ಗುರಿ ಇಟ್ಟುಕೊಂಡಿದ್ದೆ. ಸ್ಪರ್ಧೆ ತಡವಾಗಿ ಆರಂಭವಾಗಿದ್ದು ಬೇಸರ ಉಂಟು ಮಾಡಿತು. ಸ್ಪರ್ಧೆಗೆ ಸಿದ್ಧಳಾಗಿದ್ದ ನನಗೆ ಇದು ಕೊಂಚ ಕಸಿವಿಸಿ ಉಂಟುಮಾಡಿತು~ ಎಂದು 31 ವರ್ಷದ ಸಹನಾ ಪ್ರತಿಕ್ರಿಯಿಸಿದರು. ವಿದೇಶಿ ಕೋಚ್ ಉಕ್ರೇನ್‌ನ ಎವ್ಜೆನ್ ನಿಕಿಟಿನ್ ಜೊತೆಗಿದ್ದರು. ಸಹನಾ ಈ ಹಿಂದೆ 1.89 ಮೀ. ಎತ್ತರ ಜಿಗಿದಿದ್ದರು.
ಹರಿಯಾಣದ ಧರ್ಮವೀರ್ ಸಿಂಗ್ ಹಾಗೂ ಆಂಧ್ರಪ್ರದೇಶದ ಸತಿ ಗೀತಾ 100 ಮೀಟರ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ `ವೇಗದ ಓಟಗಾರರು~ ಎನಿಸಿದರು. ಧರ್ಮವೀರ್ 10.51 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. 200 ಮೀ. ಓಟದ ಪರಿಣತ ಎನಿಸಿರುವ ಅವರು ಇಲ್ಲಿ 100 ಮೀ.ನಲ್ಲಿ ಸ್ಪರ್ಧಿಸ್ದ್ದಿದು ವಿಶೇಷ.
ಗೀತಾ 12 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು. 2006ರಲ್ಲಿ ದೋಹಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದ 4್ಡ400 ಮೀ.ರಿಲೇನಲ್ಲಿ ಚಿನ್ನ ಗೆದ್ದ ಭಾರತ ತಂಡದ ತಂಡದಲ್ಲಿದ್ದ ಅವರಿಗೆ ಹರಿಯಾಣದ ಮನಿಷಾ ಅನರ್ಹರಾಗಿದ್ದು ವರವಾಗಿ ಪರಿಣಮಿಸಿತು.
ಪೋಲ್‌ವಾಲ್ಟ್‌ನಲ್ಲಿ ಕರ್ನಾಟಕದ ಎಸ್.ವಿ.ಖ್ಯಾತಿ (3.50 ಮೀ.) ಬೆಳ್ಳಿ ಪದಕ ಜಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.