ADVERTISEMENT

ಒಲಿಂಪಿಕ್ಸ್‌ನಲ್ಲಿ ಕುಸ್ತಿ: ನಿರ್ಧರಿಸಲು ಸಜ್ಜಾಗಿದೆ ‘ಅಖಾಡ’

ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ ಮಹಾ ಸಮ್ಮೇಳನ ಇಂದು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ಬ್ಯೂನಸ್‌ ಐರಿಸ್‌ (ಎಎಫ್‌ಪಿ/ಐಎಎನ್‌ಎಸ್‌): 2020ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ರಾಷ್ಟ್ರ ಯಾವುದು? ಈ ಒಲಿಂಪಿಕ್ಸ್‌ನಲ್ಲೂ ಕುಸ್ತಿ ಸ್ಥಾನ ಉಳಿಸಿಕೊಳ್ಳಲಿದೆಯೇ? ಹೀಗೆ ಹಲವು ಪ್ರಶ್ನೆಗಳಿಗೆ ಭಾನುವಾರ ಉತ್ತರ ಲಭಿಸಲಿದೆ. ಇದಕ್ಕಾಗಿ ‘ಅಖಾಡ’ ಸಜ್ಜಾಗಿದೆ.

ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿಯ 125ನೇ ಮಹಾ ಸಮ್ಮೇಳನ ಇಲ್ಲಿ ನಡೆಯಲಿದ್ದು, 2020ರ ಒಲಿಂಪಿಕ್ಸ್‌ನಲ್ಲಿ ಸೇರಲಿರುವ ಕ್ರೀಡೆಗಳ ಬಗ್ಗೆ ಮತದಾನ ನಡೆಯಲಿದೆ. ಭಾರತದ ಕೋಟಿ ಕೋಟಿ ಕುಸ್ತಿ ಪ್ರಿಯರು ‘ಕುಸ್ತಿ ಒಲಿಂಪಿಕ್ಸ್‌ನಲ್ಲಿ ಮುಂದುವರಿಯಲಿ’ ಎಂದು ಪ್ರಾರ್ಥಿಸುತ್ತಿದ್ದಾರೆ. ಆದರೆ, ಅವರಿಗೆ ಶುಭ ಸುದ್ದಿ ಸಿಗುವುದೇ ಎನ್ನುವುದನ್ನು ಕಾದು ನೋಡಬೇಕಿದೆ. ಕುಸ್ತಿಯ ಜೊತೆಗೆ ಸ್ಕ್ವಾಷ್‌, ಸಾಫ್ಟ್‌ಬಾಲ್‌ ಮತ್ತು ಬೇಸ್‌ ಬಾಲ್‌ ಸ್ಪರ್ಧಾ ಕಣದಲ್ಲಿವೆ. ಈ ಕ್ರೀಡೆಗಳಲ್ಲಿ ಒಂದು ಕ್ರೀಡೆ ಮಾತ್ರ 2020ರ ಒಲಿಂಪಿಕ್ಸ್‌ಗೆ ಸೇರ್ಪಡೆಯಾಗಲಿದೆ. ಮತದಾನ ಮಾಡುವ ಮೂಲಕ ಈ ಆಯ್ಕೆ ನಡೆಯಲಿದೆ.

ಸ್ಪರ್ಧೆಯಲ್ಲಿರುವ ಬೇರೆ ಕ್ರೀಡೆಗಳನ್ನು ಹಿಂದಿಕ್ಕಿ 2020ರ ಒಲಿಂಪಿಕ್ಸ್‌ನಲ್ಲಿ ಸ್ಕ್ವಾಷ್‌ ಸ್ಥಾನ ಗಳಿಸಲಿದೆ ಎಂದು ವಿಶ್ವ ಸ್ಕ್ವಾಷ್‌ ಫೆಡರೇಷನ್‌ ವಿಶ್ವಾಸ ವ್ಯಕ್ತಪಡಿಸಿದೆ.

‘ಬೇಸ್‌ಬಾಲ್‌ ಮತ್ತು ಸಾಫ್ಟ್‌ಬಾಲ್‌ ಎರಡೂ ಕ್ರೀಡೆಗಳು ಜಾಗತಿಕವಾಗಿ ಸಾಕಷ್ಟು ಖ್ಯಾತಿ ಪಡೆದಿವೆ. ಇವುಗಳಿಗೆ ಒಲಿಂಪಿಕ್ಸ್‌ನಲ್ಲಿ ಸ್ಥಾನ ಲಭಿಸುವಂತೆ ಮಾಡಲು ಆಂದೋಲನವನ್ನೇ ನಡೆಸಿದ್ದೇವೆ. ಈ ಸಲ ಒಲಿಂಪಿಕ್ಸ್‌ನಲ್ಲಿ ಸ್ಥಾನ ಲಭಿಸಲಿದೆ ಎನ್ನುವ ವಿಶ್ವಾಸವಿದೆ’ ಎಂದು ವಿಶ್ವ ಬೇಸ್‌ಬಾಲ್‌ ಮತ್ತು ಸಾಫ್ಟ್‌ಬಾಲ್‌ ಒಕ್ಕೂಟ ಭರವಸೆ ಹೊಂದಿದೆ.


ಕುಸ್ತಿ ಭಾರತಕ್ಕೆ ಮುಖ್ಯ...
2020ರ ಒಲಿಂಪಿಕ್ಸ್‌ನಲ್ಲಿ ಕುಸ್ತಿ ‘ಅಖಾಡ’ದಲ್ಲಿಯೇ ಉಳಿಯು­ವುದು ಬೇರೆ ರಾಷ್ಟ್ರಗಳಿಗಿಂತ ಭಾರತಕ್ಕೆ ಬಹುಮುಖ್ಯವಾಗಿದೆ. ಈ ಕ್ರೀಡೆ ಭಾರತದ ಜನರ ಜೊತೆ ಭಾವನಾತ್ಮಕ ಬೆಸುಗೆ ಹೊಂದಿದೆ. ಅಷ್ಟೇ ಅಲ್ಲ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ಆರು ಪದಕ ಜಯಿಸಿತ್ತು. ಅದರಲ್ಲಿ ಎರಡು ಪದಕ (ಸುಶೀಲ್‌ ಕುಮಾರ್‌ ಮತ್ತು ಯೋಗಿಶ್ವರ್‌ ದತ್‌) ಕುಸ್ತಿಯಲ್ಲಿಯೇ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT