ADVERTISEMENT

ಒಲಿಂಪಿಕ್ಸ್ ಅರ್ಹತೆ ವಿಶ್ವಾಸದಲ್ಲಿ ಶರತ್ ಕಮಲ್

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2011, 19:30 IST
Last Updated 4 ಆಗಸ್ಟ್ 2011, 19:30 IST

ನವದೆಹಲಿ (ಪಿಟಿಐ): ಲಂಡನ್‌ನಲ್ಲಿ ನಡೆಯಲಿರುವ 2012ರ ಒಲಿಂಪಿಕ್ಸ್‌ಗೆ ನೇರ ಪ್ರವೇಶ ಪಡೆಯಲು ವಿಫಲರಾದ  ಟೇಬಲ್ ಟೆನಿಸ್ ಆಟಗಾರ ಭಾರತ ಅಚಂತ ಶರತ್ ಕಮಲ್ ಅರ್ಹತಾ ಸುತ್ತಿನ ಮೂಲಕ ಪ್ರವೇಶ ಪಡೆಯುವ ವಿಶ್ವಾಸ ಹೊಂದಿದ್ದಾರೆ.

`ಲಂಡನ್ ಕ್ರೀಡಾಕೂಟ ಪ್ರವೇಶಕ್ಕೆ ನನಗೆ ಇನ್ನೂ ಎರಡು ಅವಕಾಶಗಳಿವೆ. ಮುಂದಿನ ಏಪ್ರಿಲ್‌ನಲ್ಲಿ ಹಾಂಕಾಂಗ್‌ನಲ್ಲಿ ನಡೆಯಲಿರುವ ಏಷ್ಯಾ ವಲಯದ ಒಲಿಂಪಿಕ್ ಅರ್ಹತಾ ಸುತ್ತು ಹಾಗೂ ಮೇ ನಲ್ಲಿ ನಡೆಯಲಿರುವ ವಿಶ್ವ ತಂಡ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಅವಕಾಶಗಳಿವೆ. ಏಷ್ಯಾ ಸುತ್ತಿನ ಟೂರ್ನಿಯಲ್ಲೇ ಅರ್ಹತೆ ಗಿಟ್ಟಿಸುವ ವಿಶ್ವಾಸ ನನ್ನದು~ ಎಂದು ಚೈಲ್ ಪ್ರೊ ಟೇಬಲ್ ಟೆನಿಸ್ ಟೂರ್ನಿಗಾಗಿ ಜರ್ಮನಿಯಲ್ಲಿ ತರಬೇತಿ ಪಡೆಯುತ್ತಿರುವ ಶರತ್ ಕಮಲ್ ತಿಳಿಸಿದರು.

`ಕಳೆದೆರಡು ಒಲಿಂಪಿಕ್ಸ್‌ನಲ್ಲಿ ನನ್ನ ಸಾಧನೆ ಗಮನಿಸಿ ಹೇಳುವುದಾದರೆ, ನಾನು ಏಷ್ಯನ್ ಸುತ್ತಿನಲ್ಲೇ ಅರ್ಹತೆ ಪಡೆಯಲಿದ್ದೇನೆ ಎನ್ನಬಲ್ಲೆ~  ಎಂದು ಅವರು ನುಡಿದರು.

ಎರಡು ಬಾರಿಯ ಒಲಿಂಪಿಯನ್ ಶರತ್ (ಅಥೆನ್ಸ್ -2004 ಹಾಗೂ ಬೀಜಿಂಗ್-2008) ಅವರು 2010ರ ಈಜಿಪ್ಟ್ ಓಪನ್ ಗೆಲ್ಲುವ ಮೂಲಕ ಐಟಿಟಿಎಫ್ ಟೂರ್ನಿ ಗೆದ್ದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದ್ದರು. ಆದರೆ ಲಂಡನ್ ಒಲಿಂಪಿಕ್ಸ್‌ಗೆ ನೇರ ಪ್ರವೇಶ ಗಿಟ್ಟಿಸಲು ವಿಫಲರಾಗಿದ್ದರು.

ಶರತ್ ಇದೇ ತಿಂಗಳ 10ರಿಂದ 14ರವರೆಗೆ ಸ್ಯಾಂಟಿಯಾಗೊನಲ್ಲಿ ನಡೆಯಲಿರುವ ಚೈಲ್ ಪ್ರೊ ಟೂರ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ ತನ್ನ 18 ಆಟಗಾರರನ್ನು ಕಣಕ್ಕೆ ಇಳಿಸುತ್ತಿದೆ. ಶರತ್ ಪುರುಷರ ವಿಭಾಗದಲ್ಲಿ 3ನೇ ಶ್ರೇಯಾಂಕ ಪಡೆದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.