ADVERTISEMENT

ಒಲಿಂಪಿಕ್ಸ್ ಪದಕ ವಿಜೇತರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2012, 19:30 IST
Last Updated 16 ಆಗಸ್ಟ್ 2012, 19:30 IST

ಅವ್ಯವಸ್ಥೆಯಲ್ಲಿ ಮುಗಿದು ಹೋದ ಕಾರ್ಯಕ್ರಮ, ಕುಸ್ತಿ ಫೆಡರೇಷನ್ ಆಕ್ರೋಶ
ನವದೆಹಲಿ (ಪಿಟಿಐ): ಸಾನಿಯಾ ನೆಹ್ವಾಲ್, ಯೋಗೇಂದರ್ ದತ್, ಆರ್ಚರಿ ಸ್ಪರ್ಧಿ ಜೈದೀಪ್ ಕರ್ಮಾಕರ್...!
-ಈ ರೀತಿಯ ಅವಾಂತರಗಳು ನಡೆದಿದ್ದು ಕ್ರೀಡಾ ಸಚಿವಾಲಯ ಗುರುವಾರ ಒಲಿಂಪಿಕ್ಸ್ ಸಾಧಕರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ. ಕಾರ್ಯಕ್ರಮ ನಿರೂಪಕರು ಸೈನಾ ಅವರನ್ನು ಸಾನಿಯಾ, ಕುಸ್ತಿಪಟು ಯೋಗೀಶ್ವರ್ ಅವರನ್ನು ಯೋಗೇಂದರ್, ಶೂಟರ್ ಜೈದೀಪ್ ಅವರನ್ನು ಆರ್ಚರಿ ಸ್ಪರ್ಧಿ ಎಂದು ಕರೆದು ನಗೆಪಾಟಲಿಗೆ ಗುರಿಯಾದರು.

ಅಷ್ಟೇ ಅಲ್ಲ, ಸಮಾರಂಭದಲ್ಲಿ ಅಧಿಕಾರಿಗಳದ್ದೇ ಕಾರುಬಾರು. ಇದ್ದಬದ್ದವರೆಲ್ಲಾ ವೇದಿಕೆ ಮೇಲೆ ನುಗ್ಗುತ್ತಿದ್ದರು. ಶಾಲೆಯ ಮಕ್ಕಳು, ಅಭಿಮಾನಿಗಳು ತಮ್ಮ ಹೀರೊಗಳನ್ನು ನೋಡಲು ಆಗಮಿಸಿದ್ದರು. ಆದರೆ ನೂಕುನುಗ್ಗಲು ಸಂಭವಿಸಿತು. ಸಮಾರಂಭದಲ್ಲಿ ಕಾಲ್ತುಳಿತ ಘಟನೆ ನಡೆಯದ್ದು ಅದೃಷ್ಟ. ಈ ಕಾರ್ಯಕ್ರಮ ನಡೆದಿದ್ದು ಮೇಜರ್ ಧ್ಯಾನ್‌ಚಂದ್ ರಾಷ್ಟ್ರೀಯ ಹಾಕಿ ಕ್ರೀಡಾಂಗಣದ ಹೊರ ಆವರಣದಲ್ಲಿ.

ಪದಕ ವಿಜೇತ ಶೂಟರ್‌ಗಳಾದ ವಿಜಯ್ ಕುಮಾರ್, ಗಗನ್ ನಾರಂಗ್, ಕುಸ್ತಿಪಟುಗಳಾದ ಸುಶೀಲ್ ಕುಮಾರ್, ಯೋಗೀಶ್ವರ್ ದತ್, ಬಾಕ್ಸರ್ ಮೇರಿ ಕೋಮ್ ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ಅವರಿಗೆ ಕ್ರೀಡಾ ಸಚಿವ ಅಜಯ್ ಮಾಕನ್ ಬಹುಮಾನದ ಹಣ ನೀಡಿ ಸನ್ಮಾನಿಸಿದರು.

ಟಿವಿ ಹಾಗೂ ಫೋಟೊದಲ್ಲಿ ಕಾಣಿಸಿಕೊಳ್ಳುವ ಉದ್ದೇಶದಿಂದ ಕೆಲವರು ಸುಖಾಸುಮ್ಮನೇ ವೇದಿಕೆ ಹತ್ತುತ್ತಿದ್ದರು. ಈ ಸಮಾರಂಭಕ್ಕೆ ಉಳಿದ ಕ್ರೀಡಾಪಟುಗಳನ್ನು ಆಹ್ವಾನಿಸಲಾಗಿತ್ತು. ಆದರೆ ಜನರ ಮಧ್ಯೆ ಅವರು ಮರೆಯಾಗಿದ್ದರು.
ಈ ಅವ್ಯವಸ್ಥೆ ಬಗ್ಗೆ ಭಾರತ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.
 
`ಕ್ರೀಡಾ ಫೆಡರೇಷನ್‌ಗಳ ಅಧಿಕಾರಿಗಳು ಹಾಗೂ ಕ್ರೀಡಾಪಟುಗಳನ್ನು ಆಹ್ವಾನಿಸಿ ಕ್ರೀಡಾ ಸಚಿವಾಲಯ ಅವಮಾನಿಸಿದೆ. ಈ ರೀತಿಯ ಅವ್ಯವಸ್ಥೆ ಇರುವ ಕಾರ್ಯಕ್ರಮವನ್ನು ನಾವೆಂದೂ ಕಂಡಿರಲಿಲ್ಲ~ ಎಂದು ಅವರು ನುಡಿದಿದ್ದಾರೆ.

`ನನ್ನ ಹೆಸರು ಬರೆಯಿರಿ. ನನಗೇನು ಭಯವಿಲ್ಲ. ಈ ಅವ್ಯವಸ್ಥೆ ಕಂಡು ಹೆಚ್ಚಿನ ಕ್ರೀಡಾಪಟುಗಳು ಅರ್ಧಕ್ಕೆ ಎದ್ದು ಹೋದರು. ಕಾರ್ಯಕ್ರಮದಲ್ಲಿ ಕೊಂಚವೂ ಶಿಸ್ತು ಇರಲಿಲ್ಲ. ನಮ್ಮ ಫೆಡರೇಷನ್ ಈ ಬಾರಿ ಎರಡು ಪದಕ ಗೆದ್ದುಕೊಟ್ಟಿದೆ. ಆದರೆ ಕ್ರೀಡಾ ಸಚಿವಾಲಯ ನಮ್ಮ ಫೆಡರೇಷನ್ ಹೆಸರನ್ನೇ ಪ್ರಸ್ತಾಪಿಸಲಿಲ್ಲ. ಎಲ್ಲಾ ಶ್ರೇಯವನ್ನು ಅವರೇ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ~ ಎಂದು ಭೂಷಣ್ ಹೇಳಿದರು.

ಈ ಕಾರ್ಯಕ್ರಮಕ್ಕೆ ವಿಜೇಂದರ್ ಸಿಂಗ್, ಕೃಷ್ಣಾ ಪೂನಿಯಾ, ಕೋಚ್‌ಗಳಾದ ಬಹದ್ದೂರ್ ಸಿಂಗ್ ಹಾಗೂ ಪಿ.ಟಿ.ಉಷಾ ಕೂಡ ಆಗಮಿಸಿದ್ದರು. ಆದರೆ ವೇದಿಕೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ವೀಕ್ಷಿಸಲು ಅವರಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಅವರಿಗೆ ಅಡ್ಡಲಾಗಿ ಜನ ನಿಂತಿದ್ದರು.

ವಿಜೇಂದರ್ ಕಾರ್ಯಕ್ರಮದ ಮಧ್ಯದಲ್ಲೇ ಹೊರಬಂದರು. ವೇಟ್‌ಲಿಫ್ಟರ್ ರವಿಕುಮಾರ್ ಕೂಡ ಕಾರ್ಯಕ್ರಮದಿಂದ ಜನರ ಮಧ್ಯ ನುಸುಳಿ ಹೊರಬಂದರು.

ಈ ಕಾರ್ಯಕ್ರಮಕ್ಕೆ ಬರಬಾರದಿತ್ತು ಎಂದು ಪದಕ ವಿಜೇತ ಕುಟುಂಬದ ವ್ಯಕ್ತಿಯೊಬ್ಬರು ನುಡಿದರು. `ಇಂತಹ ಕಾರ್ಯಕ್ರಮಕ್ಕೆ ನಾವು ಬರಬಾರದಿತ್ತು. ಇಷ್ಟು ಅಸ್ತವ್ಯಸ್ತದ ಕಾರ್ಯಕ್ರಮ ಬೇಕಿತ್ತಾ? ಇದರಿಂದ ನಮಗೆ ಮುಜುಗರವಾಗಿದೆ~ ಎಂದರು.

ಮಾಧ್ಯಮದವರೂ ಮುಜುಗರಕ್ಕೆ ಒಳಗಾಗಬೇಕಾಯಿತು. ಪೊಲೀಸರು ಅನುಚಿತವಾಗಿ ವರ್ತಿಸಿದರು. `ನೀವು ಮಾಧ್ಯಮದವರಾದರೇನು? ನಮ್ಮ ತಲೆಯ ಮೇಲೆ ಕೂರಲು ಅವಕಾಶ ನೀಡಬೇಕೇ? ಮೊದಲೇ ನೂಕುನುಗ್ಗುಲು ಸಂಭವಿಸಿದೆ. ಅದರಲ್ಲಿ ನಿಮಗೆ ಇಲ್ಲಿ ಜಾಗಬೇಕೇ~ ಎಂದು ಮಾಧ್ಯಮದವರನ್ನು ತಡೆಗಟ್ಟಿದ ಪೊಲೀಸರು ಹೇಳಿದರು.

ಈ ಅವ್ಯವಸ್ಥೆಯ ಮಧ್ಯದಲ್ಲೇ ಕ್ರೀಡಾ ಸಚಿವ ಮಾಕನ್ ಭಾಷಣ ಶುರು ಮಾಡಿದರು. `ಈಗಲೇ ಮುಂದಿನ ಒಲಿಂಪಿಕ್ಸ್‌ಗೆ ಯೋಜನೆ ರೂಪಿಸಲು ಶುರು ಮಾಡುತ್ತೇವೆ. 2020ರ ಒಲಿಂಪಿಕ್ಸ್‌ನಲ್ಲಿ 25 ಪದಕ ಗೆಲ್ಲಬೇಕು. ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯ, ಉತ್ತಮ ಕೋಚ್ ಹಾಗೂ ವಿದೇಶಿ ತರಬೇತಿ ನೀಡಲು ಸರ್ಕಾರ ಸಿದ್ಧವಿದೆ~ ಎಂದರು.

`ಒಲಿಂಪಿಯನ್‌ಗಳ ನಮ್ಮ ದೇಶದ ಹೀರೊಗಳು. ಅವರು ನಮ್ಮ ಸಂಪತ್ತು. ಅವರ ಸಾಧನೆಗೆ ಇಡೀ ದೇಶ ಹೆಮ್ಮೆಪಡುತ್ತದೆ~ ಎಂದೂ ಮಾಕನ್ ಹೇಳಿದರು.

ಬಳಿಕ ಪದಕ ವಿಜೇತ ಕ್ರೀಡಾಪಟುಗಳನ್ನು ಐತಿಹಾಸಿಕ ಇಂಡಿಯಾ ಗೇಟ್ ಬಳಿ ಕರೆದುಕೊಂಡು ಹೋಗಲಾಯಿತು. ಈ ಕ್ರೀಡಾಪಟುಗಳು ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.