ADVERTISEMENT

ಒಲಿಂಪಿಕ್ ಕ್ರೀಡಾಕೂಟದ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 27 ಜುಲೈ 2012, 19:05 IST
Last Updated 27 ಜುಲೈ 2012, 19:05 IST
ಒಲಿಂಪಿಕ್ ಕ್ರೀಡಾಕೂಟದ ಸಂಕ್ಷಿಪ್ತ ಸುದ್ದಿಗಳು
ಒಲಿಂಪಿಕ್ ಕ್ರೀಡಾಕೂಟದ ಸಂಕ್ಷಿಪ್ತ ಸುದ್ದಿಗಳು   

ಹೈಜಂಪ್ ಸ್ಪರ್ಧಿ ಡಿ ಮಾರ್ಟಿನೊ ಗಾಯಾಳು
ಲಂಡನ್ (ಐಎಎನ್‌ಎಸ್):
ಇಟಲಿಯ ಹೈಜಂಪ್ ಸ್ಪರ್ಧಿ ಅಂಟೊನಿಯೆಟ್ಟಾ ಡಿ ಮಾರ್ಟಿನೊ ಅವರು ಗಾಯಗೊಂಡಿದ್ದು ಅವರು ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸುವುದಿಲ್ಲ.

ಮೊಣಕಾಲು ನೋವಿನಿಂದ ಬಳಲಿರುವ 34 ವರ್ಷ ವಯಸ್ಸಿನ ಮಾರ್ಟಿನೊ ಅವರು ಸ್ಪರ್ಧಿಸುವ ಮಟ್ಟದಲ್ಲಿ ದೈಹಿಕ ಸಾಮರ್ಥ್ಯ ಹೊಂದಿಲ್ಲ. ಆದ್ದರಿಂದ ಅವರು ಹಿಂದೆ ಸರಿದಿದ್ದಾರೆಂದು ಇಟಲಿ ಅಥ್ಲೆಟಿಕ್ ಫೆಡರೇಷನ್ (ಐಎಎಫ್) ಶುಕ್ರವಾರ ಪ್ರಕಟಿಸಿದೆ.

ವಿಶ್ವ ಒಳಾಂಗಣ ಚಾಂಪಿಯನ್‌ಷಿಪ್‌ನಲ್ಲಿ ಇತ್ತೀಚೆಗೆ ಬೆಳ್ಳಿಯ ಪದಕ ಗೆದ್ದಿದ್ದ ಈ ಹೈಜಂಪ್ ಸ್ಪರ್ಧಿಯು ಒಲಿಂಪಿಕ್ ಕೂಟದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾಗ ಗಾಯಗೊಂಡಿದ್ದರು. ಕಳೆದ ಬುಧವಾರ ಅವರು ರೋಮ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಟರ್ಕಿಯ ಬಾಕ್ಸಿಂಗ್ ರೆಫರಿ ಸಾವು
ಲಂಡನ್ (ಐಎಎನ್‌ಎಸ್):
ಟರ್ಕಿಯ ಬಾಕ್ಸಿಂಗ್ ರೆಫರಿ ಗಾರಿಪ್ ಎರ್ಕುಯುಮಸು (73) ಅವರು ಇಲ್ಲಿನ ಹೋಟೆಲ್‌ವೊಂದರಲ್ಲಿ ಮೃತಪಟ್ಟಿದ್ದಾರೆ.

ಗುರುವಾರ ಅವರು ನಿದ್ರೆ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಇಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಸೌದಿ ಅರೇಬಿಯಾ: ಹಿಂದೆ ಸರಿಯುವ ಬೆದರಿಕೆ
ಲಂಡನ್ (ಐಎಎನ್‌ಎಸ್):
ಸೌದಿ ಅರೇಬಿಯಾದ ತಂಡವು ಲಂಡನ್ ಒಲಿಂಪಿಕ್ ಕ್ರೀಡಾಕೂಟದಿಂದ ಹಿಂದೆ ಸರಿಯುವುದಾಗಿ            ಬೆದರಿಕೆ ಹಾಕಿದೆ.

ತಮ್ಮ ದೇಶದ ಮಹಿಳಾ ಜೂಡೊ ಸ್ಪರ್ಧಿಗಳು ತಲೆಯ ವಸ್ತ್ರ ಧರಿಸುವುದಕ್ಕೆ ರೆಫರಿ ಅವಕಾಶ ನೀಡಬೇಕು. ಮುಸ್ಲಿಂ ಮಹಿಳೆಯು ಸೂಕ್ತ ವಸ್ತ್ರ ತೊಡುವುದಕ್ಕೆ ಅಡ್ಡ ಮಾಡಬಾರದು. ಇಲ್ಲದಿದ್ದರೆ ಸಂಪೂರ್ಣ ತಂಡವೇ ಕೂಟದಿಂದ ಹಿಂದೆ ಸರಿಯುತ್ತದೆಂದು ಎಚ್ಚರಿಸಿದೆ.

ತಲೆಯ ವಸ್ತ್ರವನ್ನು ಧರಿಸಿಕೊಂಡು ಸ್ಪರ್ಧಿಸಲು ಅವಕಾಶ ನೀಡುವುದಿಲ್ಲವೆಂದು ಗುರುವಾರವಷ್ಟೇ ಅಂತರರಾಷ್ಟ್ರೀಯ       ಜೂಡೊ ಫೆಡರೇಷನ್ ಅಧ್ಯಕ್ಷ ಮಾರಿಯಸ್ ವಿಜೆರ್ ಅವರು ಪ್ರಕಟಿಸಿದ್ದರು. ಸೌದಿ ಅರೇಬಿಯಾದ ಜೂಡೊಕಾ ವುಜ್ದಾನ್         ಶರ್ಹ್‌ಖಾನಿ        ಅವರಿಗೆ ತಲೆಯ ವಸ್ತ್ರ ಕಟ್ಟಿಕೊಳ್ಳಲು ಅವಕಾಶ ನೀಡುವುದಿಲ್ಲವೆಂದು ಕೂಡ ಸ್ಪಷ್ಟಪಡಿಸಿದ್ದರು. ಇದನ್ನು ಸೌದಿ ಅರೇಬಿಯಾ ಆಕ್ಷೇಪಿಸಿದೆ.

ಒಲಿಂಪಿಕ್ಸ್‌ಗೆ ಸಿದ್ಧವಾಗಿದ್ದೇವೆ: ಕ್ಯಾಮರಾನ್
ಲಂಡನ್ (ಐಎಎನ್‌ಎಸ್):
`ವಿಶ್ವದ ಅತ್ಯಂತ ಅದ್ಭುತವಾದ ಪ್ರದರ್ಶನ~ಕ್ಕೆ ಸಿದ್ಧವಾಗಿದ್ದೇವೆ ಎಂದು ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಹೇಳಿದ್ದಾರೆ.

`ಇಂಗ್ಲೆಂಡ್ ಸಿದ್ಧವಾಗಿದೆ. ವಿಶ್ವವೇ ಬ್ರಿಟನ್ ಶ್ರೇಷ್ಠವೆಂದು ಒಪ್ಪಬೇಕು ಆ ರೀತಿಯಲ್ಲಿ ಕೂಟವನ್ನು ಸಂಘಟಿಸುತ್ತೇವೆ~ ಎಂದು ಅವರು ಕೂಟದ ಉದ್ಘಾಟನೆಗೆ ಕೆಲವೇ ತಾಸು ಇರುವಾಗ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.