ADVERTISEMENT

ಕದನ ಕಣಕ್ಕೆ ಪೈಲ್ವಾನರು

ಪಿಟಿಐ
Published 11 ಏಪ್ರಿಲ್ 2018, 19:32 IST
Last Updated 11 ಏಪ್ರಿಲ್ 2018, 19:32 IST
ಸುಶೀಲ್‌ ಕುಮಾರ್‌
ಸುಶೀಲ್‌ ಕುಮಾರ್‌   

ಗೋಲ್ಡ್ ಕೋಸ್ಟ್: ಕಾಮನ್‌ವೆಲ್ತ್ ಕೂಟದ ಕುಸ್ತಿ ಕಣ ಗುರುವಾರದಿಂದ ರಂಗೇರಲಿದೆ. ಪೈಲ್ವಾನರ ಕದನಕ್ಕೆ ವೇದಿಕೆ ಸಜ್ಜುಗೊಂಡಿದ್ದು ಭಾರತದ ಕುಸ್ತಿಪಟುಗಳು ಪದಕಗಳನ್ನು ಗೆಲ್ಲುವ ಭರವಸೆ ಮೂಡಿಸಿದ್ದಾರೆ.

ಮೊದಲ ದಿನ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ತಲಾ ಎರಡು ಫೈನಲ್‌ ಸ್ಪರ್ಧೆಗಳು ನಡೆಯಲಿವೆ. ಪುರುಷರ 74 ಮತ್ತು  57 ಕೆ.ಜಿ, ಮಹಿಳೆಯರ 76 ಮತ್ತು 53 ಕೆ.ಜಿ ವಿಭಾಗಗಳಲ್ಲಿ ಪದಕದ ಬೇಟೆಯಾಡುವ ನಿರೀಕ್ಷೆ ಇದೆ.

ಭಾರತಕ್ಕೆ ಪದಕಗಳ ಕಾಣಿಕೆ ನೀಡಿದ ವೇಟ್‌ಲಿಫ್ಟಿಂಗ್‌ ನಡೆದ ಸ್ಥಳದಲ್ಲೇ ಕುಸ್ತಿ ಕೂಡ ನಡೆಯಲಿದೆ.

ADVERTISEMENT

ಭಾರತದ ಸುಶೀಲ್‌ ಕುಮಾರ್, ರಾಹುಲ್‌ ಅವಾರೆ, ಕಿರಣ್‌ ಮತ್ತು ಬಬಿತಾ ಕುಮಾರಿ ಮೊದಲ ದಿನ ಕಣಕ್ಕಿಳಿಯಲಿದ್ದಾರೆ. ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ ಬಬಿತಾ ಫೈನಲ್‌ನಲ್ಲಿ ಸೆಣಸಲಿದ್ದಾರೆ.

’ಕುಸ್ತಿಯಲ್ಲಿ ಚಿನ್ನ ಗೆಲ್ಲಬೇಕು ಎಂಬುದು ಭಾರತದ ಪ್ರತಿಯೊಬ್ಬ ಕ್ರೀಡಾ ಭಿಮಾನಿಯ ಮನದ ಇಂಗಿತವಾಗಿದೆ. ಈ ಆಸೆಯನ್ನು ಈಡೇರಿಸಲು ನಮ್ಮ ಪೈಲ್ವಾನರು ಪಣತೊಟ್ಟಿದ್ದಾರೆ. ಅವರು ಖಂಡಿತವಾಗಿಯೂ ಪದಕಗಳನ್ನು ಗೆಲ್ಲಲಿದ್ದಾರೆ’ ಎಂದು ಕೋಚ್‌ ಕುಲದೀಪ್‌ ಸಿಂಗ್ ಭರವಸೆ ವ್ಯಕ್ತಪಡಿಸಿದರು.

‘ಭಾರತದ ಭರವಸೆಯಾಗಿರುವ ಸುಶೀಲ್‌ ಕುಮಾರ್ ಮೊದಲ ದಿನವೇ ಕಣಕ್ಕೆ ಇಳಿಯಲಿದ್ದಾರೆ. ಅವರು ಸ್ಪರ್ಧೆಗೆ ಪೂರ್ಣ ರೀತಿಯಲ್ಲಿ ಸಜ್ಜಾಗಿದ್ದು ಸುಲಭವಾಗಿ ಗೆಲ್ಲಲಿದ್ದಾರೆ’ ಎಂದು ಸಿಂಗ್ ಹೇಳಿದರು.

ಸುಶೀಲ್ ಕುಮಾರ್‌ಗೆ ಈ ಕೂಟ ಸವಾಲಿನದ್ದಾಗಿದೆ. ಅವರನ್ನು ಕೂಟಕ್ಕೆ ಆಯ್ಕೆ ಮಾಡಿದಾಗ ಪ್ರವೀಣ್ ರಾಣಾ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ನಂತರ ಎರಡೂ ಬಣದವರು ಹೊಡೆದಾಡಿಕೊಂಡಿದ್ದರು.

ಹೀಗಾಗಿ ‍ಪದಕ ಗೆದ್ದು ತೋರಿಸಬೇಕಾದ ಒತ್ತಡ ಸುಶೀಲ್ ಮೇಲೆ ಇದೆ. ಅವರು 74 ಕೆ.ಜಿ ವಿಭಾಗದಲ್ಲಿ ಕೆನಡಾದ ಜೆವೋನ್ ಬಲ್ಫೋರ್‌ ಎದುರು ಸ್ಪರ್ಧಿಸಲಿದ್ದಾರೆ. ಈ ವಿಭಾಗದ ಫೈನಲ್ ಕೂಡ ಗುರುವಾರವೇ ನಡೆಯಲಿದೆ. ರಾಹುಲ್‌ ಅವಾರೆ 57 ಕೆ.ಜಿ ವಿಭಾಗದಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಕಳೆದ ಬಾರಿಯ ಕಾಮನ್‌ವೆಲ್ತ್ ಕೂಟದಲ್ಲಿ ಭಾರತ ಕುಸ್ತಿಯಲ್ಲಿ ಐದು ಚಿನ್ನ ಸೇರಿದಂತೆ ಒಟ್ಟು 13 ಪದಕಗಳನ್ನು ಗೆದ್ದಿತ್ತು. ಹೀಗಾಗಿ ಕೋಚ್‌ಗಳು ಈ ಬಾರಿಯೂ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.