ADVERTISEMENT

ಕರ್ನಾಟಕ ತಂಡಗಳ ಶುಭಾರಂಭ

58ನೇ ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ಬೆಂಗಳೂರು: ಕರ್ನಾಟಕ ತಂಡದವರು ಬಾಗಲಗುಂಟೆ ಎಇಐ ಕ್ರೀಡಾ ಸಂಸ್ಥೆ ಆಶ್ರಯದಲ್ಲಿ ಮತ್ತು ಕರ್ನಾಟಕ ಬಾಲ್‌ಬ್ಯಾಡ್ಮಿಂಟನ್‌ಸಂಸ್ಥೆಯ ವತಿಯಿಂದ ನಡೆಯುತ್ತಿರುವ 58ನೇ ಸೀನಿಯರ್ ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್ ಪುರುಷರ ಮತ್ತು ಮಹಿಳಾ ಚಾಂಪಿಯನ್‌ಷಿಪ್‌ನ ಎರಡೂ ವಿಭಾಗಗಳಲ್ಲಿ ಶುಭಾರಂಭ ಮಾಡಿದರು.

ಬಾಗಲಗುಂಟೆಯಲ್ಲಿರುವ ಕಾರ್ಪೋರೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಟೂರ್ನಿಯ ಪುರುಷರ ವಿಭಾಗದಲ್ಲಿ ಕರ್ನಾಟಕದ ಆಟಗಾರರು ತಾವು ಆಡಿದ ಮೊದಲ ಪಂದ್ಯದಲ್ಲಿ ಒಡಿಶಾ ವಿರುದ್ಧ 29-05, 29-08ರಿಂದ ಸುಲಭ ಜಯ ಗಳಿಸಿದರು. ಇನ್ನೊಂದು ಪಂದ್ಯದಲ್ಲಿ 29-12, 29-14ರಿಂದ ಆಂಧ್ರ ಪ್ರದೇಶ ತಂಡವನ್ನು ಸೋಲಿಸಿ ತವರಿನ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಕರ್ನಾಟಕದ ಪರ `ಫ್ರಂಟ್'ನಲ್ಲಿ ಗಿರಿ ಪ್ರಸಾದ್ ಮತ್ತು `ಬ್ಯಾಕ್'ನಲ್ಲಿ ವೆಂಕಟರಾಮ್ ಉತ್ತಮ ಸಾಮರ್ಥ್ಯ ತೋರಿದರು.

ಮಹಿಳಾ ವಿಭಾಗದಲ್ಲಿ ಕರ್ನಾಟಕದ ವನಿತೆಯರು ತಮ್ಮ ಮೊದಲ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು 29-04, 29-05ರಿಂದ ಸುಲಭವಾಗಿ ಸೋಲಿಸಿಅದರು. ಈ ವಿಭಾಗದಲ್ಲಿ ಬಿಹಾರ ಮತ್ತು ಪಂಜಾಬ್ ನಡುವಣ ಪಂದ್ಯ ರೋಚಕ ತಿರುವು ಕಂಡಿದ್ದು, ಮೂರು ಸೆಟ್‌ಗಳ ಹೋರಾಟ ನಡೆಯಿತು. ಕೊನೆಗೂ ಬಿಹಾರ 19-29, 29-21, 29-17ರಿಂದ ಗೆಲುವಿನ ನಗೆ ಚೆಲ್ಲಿತು.

ಪುರುಷರ ವಿಭಾಗದ ಇತರ ಪಂದ್ಯಗಳಲ್ಲಿ ಬಿಹಾರ 29-3, 29-15ರಿಂದ ಮಣಿಪುರವನ್ನು, ಒಡಿಶಾ 29-09, 29-16ರಿಂದ ಅಸ್ಸಾಮ್ ತಂಡವನ್ನು, ಆಂಧ್ರಪ್ರದೇಶ 29-16, 29-06ರಿಂದ ಜಾರ್ಖಂಡ್ ತಂಡವನ್ನು, ಹೈದರಾಬಾದ್ 29-12, 29-10ರಿಂದ ಪಶ್ಚಿಮ ಬಂಗಾಳವನ್ನು, ಕೇರಳ 29-0, 29-2ರಿಂದ ಉತ್ತರ ಪ್ರದೇಶವನ್ನು, ಛತ್ತೀಸ್‌ಗಡ 29-5, 29-17ರಿಂದ ಗುಜರಾತ್ ತಂಡವನ್ನು, ಒಡಿಶಾ 29-25, 29-23 ರಿಂದ ಡಿಎಇ ತಂಡವನ್ನು ಸೋಲಿಸಿತು. ಮೊದಲ ಪಂದ್ಯದಲ್ಲಿ ಸೋತಿದ್ದ ಜಾರ್ಖಂಡ್ ಇನ್ನೊಂದು ಪಂದ್ಯದಲ್ಲಿ ಹರಿಯಾಣದ ವಿರುದ್ಧ 29-18, 29-14ರಿಂದ ಗೆದ್ದಿತು. ಪಶ್ಚಿಮ ಬಂಗಾಳ 29-11, 29-9ರಿಂದ ಪಂಜಾಬ್ ತಂಡವನ್ನು, ತಮಿಳುನಾಡು 29-2, 29-1ರಿಂದ ಗೋವಾ ತಂಡವನ್ನು ಸೋಲಿಸಿತು. ಮೊದಲ ಪಂದ್ಯದಲ್ಲಿ ಛತ್ತೀಸ್‌ಗಡದ ಎದುರು ಸೋತಿದ್ದ ಗುಜರಾತನ್ನು  ಕೇರಳದ ಆಟಗಾರರು 29-9, 29-6ರಿಂದ ಲೀಲಾಜಾಲವಾಗಿ ಮಣಿಸಿದರು.

ಛತ್ತೀಸ್‌ಗಡ 29-1, 29-1ರಿಂದ ಎನ್‌ಸಿಆರ್ ತಂಡವನ್ನು ಮಣಿಸುವ ಮೂಲಕ ಸತತ ಎರಡನೇ ಗೆಲುವು ದಾಖಲಿಸಿತು. ಚಂಡಿಗಡ ತಂಡವು 29-7, 29-6ರಿಂದ ಹಿಮಾಚಲ ಪ್ರದೇಶವನ್ನು ಸೋಲಿಸಿದರೆ, ಇನ್ನೊಂದು ಏಕಪಕ್ಷೀಯ ಪಂದ್ಯದಲ್ಲಿ ಆಂಧ್ರವು 29-00, 29-02ರಿಂದ ಗುಜರಾತನ್ನು ಮಣಿಸಿತು. ಕೇರಳಕ್ಕೆ 29-01, 2902ರಿಂದ ಡಿಯು ಮತ್ತು ಡಮನ್ ತಂಡವನ್ನು ಸೋಲಿಸಲು ಏನೇನೂ ಪ್ರಯಾಸವಾಗಲಿಲ್ಲ. ಮಹಾರಾಷ್ಟ್ರ 29-04, 29-02ರಿಂದ ದೆಹಲಿಯನ್ನು, ಮಧ್ಯಪ್ರದೇಶವು 29-12, 29-24ರಿಂದ ಒಡಿಶಾವನ್ನು, ಪುದುಚೇರಿಯು 29-02, 29-00ಯಿಂದ ಜಮ್ಮು ಕಾಶ್ಮೀರವನ್ನು ಸೋಲಿಸಿತು.

ಮಹಿಳಾ ವಿಭಾಗದಲ್ಲಿ ಒಡಿಶಾ ತಂಡವು 29-10, 29-11ರಿಂದ ಮಧ್ಯಪ್ರದೇಶವನ್ನು, ಛತ್ತೀಸ್‌ಗಡವು 29-01, 29-03ರಿಂದ ಪಶ್ಚಿಮ ಬಂಗಾಳವನ್ನು, ಆಂಧ್ರವು 29-02, 29-01ರಿಂದ ತ್ರಿಪುರವನ್ನು, ಕೇರಳವು 29-01, 29-05ರಿಂದ ಬಿಹಾರವನ್ನು, ಮುಂಬೈ 29-04, 29-01ರಿಂದ ಉತ್ತರಪ್ರದೇಶವನ್ನು, ಛತ್ತೀಸ್‌ಗಡವು 29-02, 29-07ರಿಂದ ಮಣಿಪುರವನ್ನು, ತಮಿಳುನಾಡು 29-00, 29-00ಯಿಂದ ಗೋವಾ ತಂಡವನ್ನು ಕೇರಳವು 29-04, 29-04ರಿಂದ ತ್ರಿಪುರಾವನ್ನು ಮಣಿಸಿತು. ಕೇರಳ ಇನ್ನೊಂದು ಪಂದ್ಯದಲ್ಲಿ 29-03, 29-07ರಿಂದ ಪುದುಚೇರಿಯನ್ನು ಸೋಲಿಸಿತು. ದೆಹಲಿ ಕೂಡಾ 29-09, 29-08ರಿಂದ ಸುಲಭವಾಗಿ ಪಶ್ಚಿಮ ಬಂಗಾಳ ತಂಡವನ್ನು ಸೋಲಿಸಿತು.

ಈ ಟೂರ್ನಿಯನ್ನು ರಾಜ್ಯ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವ ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಭಾರತ ಬಾಲ್‌ಬ್ಯಾಡ್ಮಿಂಟನ್ ಫೆಡರೇಷನ್ ಕಾರ್ಯದರ್ಶಿ ವೈ.ರಾಜಾರಾವ್, ಉಪಾಧ್ಯಕ್ಷರಾದ ದಿನೇಶ್ ಮತ್ತು ಸುರೇಶ್ ಬಂಗಾಡಿ, ಜಂಟಿ ಕಾರ್ಯದರ್ಶಿ ವೆಂಕಟರಾವ್ ಮತ್ತು ಸ್ಥಳೀಯ ಶಾಸಕ ಮುನಿರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.