ADVERTISEMENT

ಕಳಪೆ ಪ್ರದರ್ಶನ: ಹಾಟ್ ಸ್ಪಾಟ್ಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ಮುಂಬೈ (ಪಿಟಿಐ): ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಅಂಪೈರ್ ತೀರ್ಪು ಪರಿಶೀಲನಾ ಪದ್ಧತಿಯಲ್ಲಿ (ಡಿಆರ್‌ಎಸ್) ಬಳಸುವ ತಂತ್ರಜ್ಞಾನಕ್ಕೆ ಬಿಸಿಸಿಐನ ವಿರೋಧ ಮುಂದುವರಿಯಲಿದೆ ಎಂದು ನೂತನ ಅಧ್ಯಕ್ಷ ಎನ್. ಶ್ರೀನಿವಾಸನ್ ಹೇಳಿದರು.

ಡಿಆರ್‌ಎಸ್‌ನಲ್ಲಿರುವ ಬಾಲ್ ಟ್ರ್ಯಾಕಿಂಗ್ ತಂತ್ರಜ್ಞಾನದ ಜೊತೆ `ಹಾಟ್ ಸ್ಪಾಟ್~ ತಂತ್ರಜ್ಞಾನವನ್ನೂ ಬಿಸಿಸಿಐ ವಿರೋಧಿಸಲಿದೆ ಎಂದು ಸ್ಪಷ್ಟಪಡಿಸಿದರು. ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ನಡೆದ ಕೆಲವೊಂದು ಘಟನೆಗಳಿಂದಾಗಿ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ.

`ಹಾಟ್ ಸ್ಪಾಟ್ ತಂತ್ರಜ್ಞಾನ ನಿಖರವಾಗಿ ತೀರ್ಪು ನೀಡಲು ಸಹಾಯ ಮಾಡುತ್ತದೆ ಎಂಬ ಲೆಕ್ಕಾಚಾರದಿಂದ ನಾವು ಇದರ ಬಳಕೆಗೆ ಒಪ್ಪಿಗೆ ಸೂಚಿಸಿದ್ದೆವು. ಆದರೆ ಐಸಿಸಿಯ ಮುಂದಿನ ಸಭೆಯಲ್ಲಿ ಇದನ್ನು ವಿರೋಧಿಸುವೆವು~ ಎಂದರು.

`ಪೋಸ್ಟ್ ಮಾರ್ಟಮ್~ ಇಲ್ಲ: ಇಂಗ್ಲೆಂಡ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಭಾರತ ತಂಡದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗೆ ಮುಂದಾಗುವುದಿಲ್ಲ ಎಂದು ನೂತನ ಅಧ್ಯಕ್ಷರು ಸ್ಪಷ್ಟಪಡಿಸಿದರು.

`ಈ ಪ್ರವಾಸ ನಮ್ಮ ಯೋಜನೆಯಂತೆ ನಡೆಯಲಿಲ್ಲ. ಅದೇ ರೀತಿ ಅತ್ಯುತ್ತಮ ತಂಡವನ್ನು ಕಣಕ್ಕಿಳಿಸಲು ಸಾಧ್ಯವಾಗಲಿಲ್ಲ. ಹಲವು ಆಟಗಾರರು ಗಾಯದ ಸಮಸ್ಯೆ ಎದುರಿಸಿದರು. ನಮಗೆ ತಂಡದ ಮೇಲೆ ಪೂರ್ಣ ವಿಶ್ವಾಸವಿದ್ದು, ಮತ್ತೆ ಅಗ್ರ ರ‌್ಯಾಂಕಿಂಗ್ ಪಡೆಯುವ ಸಾಮರ್ಥ್ಯ ಹೊಂದಿದೆ. ಇಂಗ್ಲೆಂಡ್‌ನಲ್ಲಿ ತೋರಿದ ಕಳಪೆ ಪ್ರದರ್ಶನದ ಬಗ್ಗೆ ತನಿಖೆ ನಡೆಸಲು ಯಾವುದೇ ಸಮಿತಿಯನ್ನು ನೇಮಿಸಿಲ್ಲ~ ಎಂದರು.

ಅಧಿಕೃತ ಆಹ್ವಾನ ಲಭಿಸಿರಲಿಲ್ಲ:
`ಟೀಮ್ ಇಂಡಿಯಾ~ಕ್ಕೆ ಅಧಿಕೃತ ಆಹ್ವಾನ ಲಭಿಸದ ಕಾರಣ ಭಾರತ ತಂಡದ ಆಟಗಾರರು ಲಂಡನ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾಗಲಿಲ್ಲ ಎಂದು ಶ್ರೀನಿವಾಸನ್ ಸ್ಪಷ್ಟಪಡಿಸಿದರು.

`ನನಗೆ ಮತ್ತು ಶಶಾಂಕ್ ಮನೋಹರ್ ಅವರಿಗೆ ಐಸಿಸಿ ಕೆಲವೊಂದು ಆಹ್ವಾನ ಪತ್ರಿಕೆ ಕಳುಹಿಸಿತ್ತು. ಆದರೆ ತಂಡಕ್ಕೆ ಅಧಿಕೃತವಾಗಿ ಆಹ್ವಾನ ದೊರೆತಿಲ್ಲ~ ಎಂದರು. ಭಾರತ ತಂಡದ ಆಟಗಾರರು ಸಮಾರಂಭಕ್ಕೆ ಗೈರುಹಾಜರಾದದ್ದು ವಿವಾದಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.