ADVERTISEMENT

ಕಹಿನೆನಪುಗಳ ಪೊರೆ ಕಳಚಲು ವಕಾರ್ ಆಶಯ!

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 18:25 IST
Last Updated 14 ಫೆಬ್ರುವರಿ 2011, 18:25 IST

ಕೊಲಂಬೊ (ಎಎಫ್‌ಪಿ): ಬೆಂಗ ಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣ. 1996 ವಿಶ್ವ ಕಪ್ ಟೂರ್ನಿಯ ಭಾರತ- ಪಾಕಿಸ್ತಾನದ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ನೆನಪಿಸಿಕೊಂಡು ರೋಮಾಂಚನಗೊಳ್ಳುವ ಜನರಿಗೆ ಲೆಕ್ಕವಿಲ್ಲ. ಆದರೆ, ಪಾಕಿಸ್ತಾನದ ‘ವೇಗದ ರಾಜ’ ವಕಾರ್ ಯೂನಿಸ್‌ಗೆ  ಆ ಪಂದ್ಯ ಇಂದಿಗೂ ದುಃಸ್ವಪ್ನವಾಗಿ ಕಾಡುತ್ತಿದೆ! ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತದ ಆಲ್‌ರೌಂಡರ್ ಅಜಯ್ ಜಡೇಜಾ ಸ್ಲಾಗ್ ಓವರ್‌ಗಳಲ್ಲಿ ವಕಾರರ ಒಂದೇ ಓವರ್‌ನಲ್ಲಿ 22 ರನ್ನುಗಳನ್ನು ಚಚ್ಚಿದ್ದನ್ನು ವಕಾರ್ ಇಂದಿಗೂ ಮರೆತಿಲ್ಲ.

ಸದ್ಯ ಪಾಕ್ ತಂಡದ ಕೋಚ್ ಆಗಿರುವ ವಕಾರ್ ಪಾಲಿಗೆ ಅವರು ಆಡಿದ ಎಲ್ಲ ವಿಶ್ವಕಪ್ ಟೂರ್ನಿ ಗಳಲ್ಲಿಯೂ ಇಂತಹ ಹಲವು ಕಹಿನೆನಪುಗಳಿವೆ. ಅವುಗಳಿಂದ ಹೊರ ಬರಲು ಈ ವಿಶ್ವಕಪ್ ಟೂರ್ನಿಯಲ್ಲಿ ಸಾಧ್ಯವಾಗಲಿದೆ ಎನ್ನುವ ಆಶಯವೂ ಅವರಿಗಿದೆ.

ಸುದ್ದಿಸಂಸ್ಥೆಯೊಂದಿಗೆ ಮನದಾಳದ ಮಾತುಗಳನ್ನು ಬಿಚ್ಚಿಟ್ಟ ಅವರು, ‘1992ರಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಪಾಕ್ ತಂಡದಲ್ಲಿ ನಾನಿದ್ದೆ. ಆದರೆ ಗಾಯದ ಸಮಸ್ಯೆಯಿಂದಾಗಿ ಸ್ವದೇಶಕ್ಕೆ ಮರಳಬೇಕಾಯಿತು. ಒಂದೂ ಪಂದ್ಯ ಆಡದೇ ಮರಳಿದ್ದು ಮನಸ್ಸಿಗೆ ತುಂಬಾ ನೋವಾಗಿತ್ತು. 1996ರಲ್ಲಿ ಕಟ್ಟಾ ಎದುರಾಳಿ ಭಾರತದ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಅನುಭವಿಸಿದ ಸೋಲು. 1999ರಲ್ಲಿ ಬಾಂಗ್ಲಾ ಎದುರು ಅನುಭವಿಸಿದ ಹೀನಾಯ ಸೋಲು, 2003ರಲ್ಲಿ ನಾಯಕನಾಗಿದ್ದಾಗ ಟೂರ್ನಿಯ ಮೊದಲ ಸುತ್ತಿನಲ್ಲಿಯೇ ಹೊರಬಿದ್ದಿದ್ದು” ಎಂದು ಪಟ್ಟಿ ಮಾಡುತ್ತಾರೆ.

ನಿಖರವಾದ ಯಾರ್ಕರ್‌ಗಳ ಮೂಲಕ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ವಕಾರ್, ಹೊಸ ಚೆಂಡಿನೊಂದಿಗೆ ಯಾವುದೇ ಪಿಚ್‌ನಲ್ಲಿ ವಿಕೆಟ್ ಪಡೆಯಬಲ್ಲ ಪರಿಣಿತರಾಗಿದ್ದರು. ಆದರೆ, ವಿಶ್ವಕಪ್ ಟೂರ್ನಿಗಳಲ್ಲಿ ಆದ ಕಹಿನೆನಪುಗಳು ಮಾತ್ರ ಅವರನ್ನು ಬೆನ್ನು ಬಿಟ್ಟಿಲ್ಲ.
ಈ ಬಾರಿ ತಮ್ಮ ತಂಡ ಉತ್ತಮ ಪ್ರದರ್ಶನ ನೀಡಿದರೆ ಆ ಕೆಟ್ಟ ಕನಸುಗಳಿಂದ ಹೊರಬರುವ ಆಸೆ ಅವರದ್ದು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.