ಚೆನ್ನೈ (ಪಿಟಿಐ): ಕಳೆದ ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಏಳು ರನ್‌ಗಳಿಂದ ಮಣಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಯಿತು.
ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಶನಿವಾರ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 156 ರನ್ ಪೇರಿಸಿತು. ಆ ಬಳಿಕ ಎದುರಾಳಿ ತಂಡವನ್ನು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 149 ರನ್‌ಗಳಿಗೆ ಕಟ್ಟಿಹಾಕಿ ಜಯ ಸಾಧಿಸಿತು.
ಅಜರ್ ಮಹಮೂದ್ (25ಕ್ಕೆ 3) ಮತ್ತು ಪಿಯೂಷ್ ಚಾವ್ಲಾ (20ಕ್ಕೆ 2) ಅವರ ಅತ್ಯುತ್ತಮ ಬೌಲಿಂಗ್ ದಾಳಿ ಕಿಂಗ್ಸ್ ಇಲೆವೆನ್ ಗೆಲುವಿಗೆ ಕಾರಣವಾಯಿತು. `ಪಂದ್ಯಶ್ರೇಷ್ಠ~ ಮನ್‌ದೀಪ್ ಸಿಂಗ್ (56, 50 ಎಸೆತ, 5 ಬೌಂ, 1 ಸಿಕ್ಸರ್) ಗೆಲುವಿಗೆ ನೀಡಿದ ಕೊಡುಗೆಯನ್ನೂ ಮರೆಯುವಂತಿಲ್ಲ.
ಸಾಧಾರಣ ಗುರಿ ಬೆನ್ನಟ್ಟಿದ ಮಹೇಂದ್ರ ಸಿಂಗ್ ದೋನಿ ಬಳಗದ ಜಯಕ್ಕೆ ಅಂತಿಮ ಓವರ್‌ನಲ್ಲಿ 17 ರನ್‌ಗಳು ಬೇಕಿದ್ದವು. ಮಹಮೂದ್ ಈ ಓವರ್‌ನಲ್ಲಿ ಕೇವಲ ಒಂಬತ್ತು ವಿಕೆಟ್ ಬಿಟ್ಟುಕೊಟ್ಟರಲ್ಲದೆ, ಆಲ್ಬಿ ಮಾರ್ಕೆಲ್ (8) ಅವರ ಮಹತ್ವದ ವಿಕೆಟ್‌ನ್ನೂ ಪಡೆದರು.
ಫಾಫ್ ಡು ಪ್ಲೆಸಿಸ್ (29) ಮತ್ತು ಎಸ್. ಬದರೀನಾಥ್ (25) ತಂಡಕ್ಕೆ ಉತ್ತಮ ಆರಂಭ ನೀಡಿದ್ದರು. ಆ ಬಳಿಕ ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಂಡ ಕಾರಣ ಸೋಲಿನ ಹಾದಿ ಹಿಡಿಯಿತು. ದೋನಿ ಕೇವಲ ಒಂದು ರನ್ ಗಳಿಸಿ ಔಟಾದರು. ಬ್ರಾವೊ (30, 21 ಎಸೆತ, 2 ಸಿಕ್ಸರ್) ಕೊನೆಯಲ್ಲಿ ಗೆಲುವಿಗಾಗಿ ನಡೆಸಿದ ಪ್ರಯತ್ನ ಯಶ ಕಾಣಲಿಲ್ಲ.
ಉತ್ತಮ ಆರಂಭ: ಇದಕ್ಕೂ ಮುನ್ನ ಮನ್‌ದೀಪ್ ಮತ್ತು ಶಾನ್ ಮಾರ್ಷ್ (32, 22 ಎಸೆತ, 4 ಬೌಂ, 1 ಸಿಕ್ಸರ್) ಮೊದಲ ವಿಕೆಟ್‌ಗೆ ಸೇರಿಸಿದ 68 ರನ್‌ಗಳ ನೆರವಿನಿಂದ ಕಿಂಗ್ಸ್ ಇಲೆವೆನ್ ಉತ್ತಮ ಮೊತ್ತವನ್ನೇ ಕಲೆಹಾಕಿತು.
ಅಜರ್ ಮಹಮೂದ್ (18) ಮತ್ತು ಡೇವಿಡ್ ಮಿಲ್ಲರ್ (19) ತಂಡದ ಮೊತ್ತ ಹೆಚ್ಚಿಸಲು ನೆರವಾದರು.
ಆದರೆ ಬಳಿಕ ಬಂದ ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಮೊತ್ತ ತಲುಪಲಿಲ್ಲ. ಈ ಕಾರಣ ಕೊನೆಯ ಓವರ್‌ಗಳಲ್ಲಿ ರನ್‌ರೇಟ್ ಹೆಚ್ಚಿಸಲು ಕಿಂಗ್ಸ್ ಇಲೆವೆನ್ ವಿಫಲವಾಯಿತು. 29 ರನ್‌ಗಳಿಗೆ ಮೂರು ವಿಕೆಟ್ ಪಡೆದ ಅಲ್ಬಿ ಮಾರ್ಕೆಲ್ ಸೂಪರ್ ಕಿಂಗ್ಸ್ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.
.jpg)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.