ADVERTISEMENT

ಕಿವೀಸ್‌ಗೆ ಮಣಿದ ಪಾಕ್

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 19:30 IST
Last Updated 22 ಜನವರಿ 2011, 19:30 IST
ಕಿವೀಸ್‌ಗೆ ಮಣಿದ ಪಾಕ್
ಕಿವೀಸ್‌ಗೆ ಮಣಿದ ಪಾಕ್   

ವೆಲಿಂಗ್ಟನ್ (ಎಎಫ್‌ಪಿ): ಟಿಮ್ ಸೌಥಿ (33ಕ್ಕೆ 5) ಅವರ ಪ್ರಭಾವಿ ಬೌಲಿಂಗ್ ನೆರವಿನಿಂದ ನ್ಯೂಜಿಲೆಂಡ್ ತಂಡ ಶನಿವಾರ ಇಲ್ಲಿ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು.

ವೆಸ್ಟ್‌ಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ಸೌಥಿ ಅವರ ಬೌಲಿಂಗ್ ಮುಂದೆ ನಲುಗಿ 37.3 ಓವರ್‌ಗಳಲ್ಲಿ 124 ರನ್‌ಗಳಿಗೆ ಆಲೌಟಾಯಿತು. ನ್ಯೂಜಿಲೆಂಡ್ ತಂಡ 17.2 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.

ಈ ಮೂಲಕ ಆರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ರಲ್ಲಿ ಮುನ್ನಡೆ ಸಾಧಿಸಿದೆ. ಮಾತ್ರವಲ್ಲ ಸತತ 11 ಏಕದಿನ ಪಂದ್ಯಗಳ ಸೋಲಿನ ನಿರಾಸೆಯಿಂದ ಹೊರಬಂದಿದೆ.ಸುಲಭ ಗುರಿ ಬೆನ್ನಟ್ಟಿದ ಕಿವೀಸ್ ತಂಡಕ್ಕೆ ಮಾರ್ಟಿನ್ ಗುಪ್ಟಿಲ್ (ಅಜೇಯ 40) ಮತ್ತು ಜೆಸ್ಸಿ ರೈಡರ್ (55, 34 ಎಸೆತ, 6 ಬೌಂ, 2 ಸಿಕ್ಸರ್) ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ನೀಡಿದರು.

ಟಾಸ್ ಗೆದ್ದ ಪಾಕ್ ತಂಡದ ನಾಯಕ ಶಾಹಿದ್ ಅಫ್ರಿದಿ ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡರು. ಆದರೆ 57 ರನ್ ಗಳಿಸುವಷ್ಟರಲ್ಲೇ ಐದು ವಿಕೆಟ್ ಕಳೆದುಕೊಂಡ ತಂಡ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಮಿಸ್ಬಾ ಉಲ್ ಹಕ್ (50, 88 ಎಸೆತ, 3 ಬೌಂ, 1 ಸಿಕ್ಸರ್) ಮಾತ್ರ ಅಲ್ಪ ಚೇತರಿಕೆಯ ಪ್ರದರ್ಶನ ನೀಡಿದರು.

ಸಂಕ್ಷಿಪ್ತ ಸ್ಕೋರ್: ಪಾಕಿಸ್ತಾನ: 37.3 ಓವರ್‌ಗಳಲ್ಲಿ 124 (ಯೂನಿಸ್ ಖಾನ್ 24, ಮಿಸ್ಬಾ ಉಲ್ ಹಕ್ 50, ಶಾಹಿದ್ ಅಫ್ರಿದಿ 15, ಟಿಮ್ ಸೌಥಿ 33ಕ್ಕೆ 5, ಹಾಮಿಷ್ ಬೆನೆಟ್ 26ಕ್ಕೆ 3). ನ್ಯೂಜಿಲೆಂಡ್: 17.2 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 125 (ಮಾರ್ಟಿನ್ ಗುಪ್ಟಿಲ್ ಔಟಾಗದೆ 40, ಜೆಸ್ಸಿ ರೈಡರ್ 55, ರಾಸ್ ಟೇಲರ್ ಔಟಾಗದೆ 23, ಸೊಹೇಲ್ ತನ್ವೀರ್ 39ಕ್ಕೆ 1).
ಫಲಿತಾಂಶ: ನ್ಯೂಜಿಲೆಂಡ್‌ಗೆ 9 ವಿಕೆಟ್ ಜಯ; ಪಂದ್ಯಶ್ರೇಷ್ಠ: ಟಿಮ್ ಸೌಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.