ADVERTISEMENT

ಕೀನ್ಯಾದ ಕೆಂಬೊಯ್‌ಗೆ ಬಂಗಾರ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 19:30 IST
Last Updated 6 ಆಗಸ್ಟ್ 2012, 19:30 IST

ಲಂಡನ್: ಕೀನ್ಯಾದ ಎಜೆಕೆಲ್ ಕೆಂಬೊಯ್ ಲಂಡನ್ ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನ ಪುರುಷರ 3,000 ಮೀ. ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಭಾನುವಾರ ನಡೆದ ಸ್ಪರ್ಧೆಯಲ್ಲಿ ಕೆಂಬೊಯ್ ಎಂಟು ನಿಮಿಷ 18.56 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು.

2004ರ ಅಥೆನ್ಸ್ ಕೂಟದಲ್ಲಿ ಚಾಂಪಿಯನ್ ಆಗಿದ್ದ ಕೆಂಬೊಯ್ ನಾಲ್ಕು ವರ್ಷಗಳ ಹಿಂದೆ ಬೀಜಿಂಗ್‌ನಲ್ಲಿ ಏಳನೇ ಸ್ಥಾನಕ್ಕೆ ಕುಸಿತ ಕಂಡಿದ್ದರು. ಇದೀಗ ಎಂಟು ವರ್ಷಗಳ ಬಿಡುವಿನ ಬಳಿಕ ಮತ್ತೊಂದು ಚಿನ್ನ ಗೆದ್ದು ಅಮೋಘ ಸಾಧನೆ ಮಾಡಿದರು.

ಫ್ರಾನ್ಸ್‌ನ ಮೆಹಿದಿನ್ ಮೆಖಿಸ್ಸಿ (8:19.08) ಎರಡನೇ ಸ್ಥಾನ ಪಡೆದರೆ, ಕೀನ್ಯಾದ ಅಬೆಲ್ ಕಿಪ್ರಪ್ (8:19.73) ಕಂಚು ತಮ್ಮದಾಗಿಸಿಕೊಂಡರು. ಬೀಜಿಂಗ್‌ನಲ್ಲಿ ಚಾಂಪಿಯನ್ ಆಗಿದ್ದ ಕೀನ್ಯಾದ ಕಿಪ್ರುಟೊ ಪದಕ ಗೆಲ್ಲುವಲ್ಲಿ ವಿಫಲರಾದರು.

ಮಹಿಳೆಯರ 400 ಮೀ. ಓಟದಲ್ಲಿ ಅಮೆರಿಕದ ಸಾನ್ಯಾ ರಿಚರ್ಡ್ಸ್ ರಾಸ್ ಚಿನ್ನ ಗೆದ್ದರಲ್ಲದೆ, ಬೀಜಿಂಗ್‌ನಲ್ಲಿ ಎದುರಾಗಿದ್ದ ನಿರಾಸೆಯನ್ನು ಮರೆತರು. ಸಾನ್ಯಾ 49.55 ಸೆಕೆಂಡ್‌ಗಳಲ್ಲಿ ನಿಗದಿತ ಗುರಿಯನ್ನು ತಲುಪಿದರು. ಬೀಜಿಂಗ್ ಕೂಟದ ಚಾಂಪಿಯನ್ ಬ್ರಿಟನ್‌ನ ಕ್ರಿಸ್ಟಿನ್ ಉರೊಗು (49.70) ಬೆಳ್ಳಿ ಗೆದ್ದರೆ, ಕಂಚಿನ ಪದಕ ಅಮೆರಿಕದ ಡಿಡೀ ಟ್ರಾಟೆರ್ (49.72) ಪಾಲಾಯಿತು.

ಮಹಿಳೆಯರ ಟ್ರಿಪಲ್ ಜಂಪ್‌ನಲ್ಲಿ ಕಜಕಸ್ತಾನದ ಓಲ್ಗಾ ರಿಪಕೋವಾ (14.98 ಮೀ.), ಕೊಲಂಬಿಯದ ಕ್ಯಾಥರಿನ್ ಇಬರ್‌ಗುನ್ (14.80) ಮತ್ತು ಉಕ್ರೇನ್‌ಕ ಒಲಾ ಸಹಾದುಹ (14.79) ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.