ನವದೆಹಲಿ (ಪಿಟಿಐ): ಬೆಟ್ಟಿಂಗ್ ವಿವಾದದಲ್ಲಿ ಸಿಲುಕಿರುವ ರಾಜಸ್ತಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ತಮ್ಮ ಪತ್ನಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹುಟ್ಟುಹಬ್ಬಕ್ಕೆ ಶುಭ ಹಾರೈಸುವ ಜತೆಗೆ ಕ್ಷಮೆ ಕೋರಿದ್ದಾರೆ !
ಶನಿವಾರ 38ನೇ ವರ್ಷಕ್ಕೆ ಕಾಲಿಟ್ಟ ಶಿಲ್ಪಾ ಅವರಿಗೆ ಕುಂದ್ರಾ ಶುಭಾಶಯ ಪತ್ರ ಮತ್ತು ಹೂಗುಚ್ಛವನ್ನು ಕಳುಹಿಸಿದರು. ಇದರ ಜತೆಗೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಿಂದ ಆದ ಕಹಿ ಘಟನೆಗಳ ಹಿನ್ನೆಲೆಯಲ್ಲಿ ಕುಂದ್ರಾ ಅವರು ಪತ್ನಿಯ ಕ್ಷಮೆ ಕೋರಿದ್ದಾರೆ.
`ಪ್ರೀತಿಪಾತ್ರಳಾದ ಶಿಲ್ಪಾ ನಿನಗೆ ಜನ್ಮದಿನದ ಶುಭಾಶಯಗಳು. ಈಚೆಗಿನ ಬೆಳವಣಿಗೆಗಳಿಂದ ಬೇಸರವಾಗಿದೆ ಎಂಬುದು ನನಗೆ ತಿಳಿದಿದೆ. ಶೀಘ್ರದಲ್ಲಿಯೇ ಸತ್ಯ ಏನೆಂಬುದು ಹೊರ ಬರಲಿದೆ' ಎಂದೂ ಕುಂದ್ರಾ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಶಿಲ್ಪಾ ಜನ್ಮದಿನಕ್ಕೆ ಅಮಿತಾಭ್ ಬಚ್ಚನ್ ಮತ್ತು ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಕೂಡಾ ಶುಭಾಶಯ ಕೋರಿದ್ದಾರೆ. `ಶಿಲ್ಪಾ ಮೇಡಮ್ ನಿಮಗೆ ಹುಟ್ಟುಹಬ್ಬದ ಶುಭಾಶಯ. ದೇವರು ಒಳ್ಳೆಯದು ಮಾಡಲಿ' ಎಂದು ರಹಾನೆ ಟ್ವಿಟ್ ಮಾಡಿದ್ದಾರೆ.
ಪೊಲೀಸ್ ವಶಕ್ಕೆ ರಮೇಶ್
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಬುಕ್ಕಿ ರಮೇಶ್ ವೈಶ್ಯನನ್ನು ನ್ಯಾಯಾಲಯ ಹತ್ತು ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.