ADVERTISEMENT

ಕೆಎಎ ಅಧ್ಯಕ್ಷರಾಗಿ ಸುನಿಲ್ ಶೆಟ್ಟಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2018, 19:56 IST
Last Updated 8 ಏಪ್ರಿಲ್ 2018, 19:56 IST

ಬೆಂಗಳೂರು: ಕರ್ನಾಟಕ ಅಥ್ಲೆಟಿಕ್‌ ಸಂಸ್ಥೆಗೆ (ಕೆಎಎ) ಭಾನುವಾರ ಚುನಾವಣೆ ನಡೆದಿದ್ದು ಸುನಿಲ್‌ ಕುಮಾರ್ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾದರು.

ಜಿಲ್ಲಾ ನೊಂದಣಾಧಿಕಾರಿಗಳು ಚುನಾವಣೆ ನಡೆಸದಂತೆ ಶನಿವಾರ ತಡೆಯಾಜ್ಞೆ ನೀಡಿದ್ದರು. ಆದರೂ ಭಾನುವಾರ ಚುನಾವಣೆ ನಡೆಸಲಾಯಿತು. ಕಳೆದ ತಿಂಗಳು ಚುನಾವಣೆ ನಡೆಸಲು ಸೂಚನೆ ನೀಡಿದ್ದ ಉಪಾಧ್ಯಕ್ಷ ಸುನಿಲ್ ಕುಮಾರ್ ಅವರ ನಡೆಯನ್ನು ವಿರೋಧಿಸಿ ಮತ್ತೊಬ್ಬರು ಉಪಾಧ್ಯಕ್ಷರಾದ ಅಶ್ವಿನಿ ನಾಚಪ್ಪ ಮತ್ತು ಜಿಲ್ಲಾ ಘಟಕಗಳ ಅತೃಪ್ತ ಪ್ರತಿನಿಧಿಗಳು ಹೋರಾಟ ನಡೆಸಿದ್ದರು.

ಶನಿವಾರ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಗೆ ತೆರಳಿದ್ದ ಅವರು ನಿಯಮಬದ್ಧವಾಗಿ ಚುನಾವಣೆ ನಡೆಸಲು ಆದೇಶ ಹೊರಡಿಸುವಂತೆ ಕೋರಿದ್ದರು. ಇದನ್ನು ಮನ್ನಿಸಿದ ನೋಂದಣಾಧಿಕಾರಿಗಳು ತಾತ್ಕಾಲಿಕ ತಡೆಯೊಡ್ಡಿ ಮೇ 30ರ ಒಳಗೆ ನಿಯಮಬದ್ಧವಾಗಿ ಚುನಾವಣೆ ನಡೆಸುವಂತೆ ಸೂಚಿಸಿದ್ದರು.

ADVERTISEMENT

ಆದರೆ ತನ್ನ ನಿರ್ಧಾರದಿಂದ ಹಿಂದೆ ಸರಿಯದ ಕೆಎಎ ನಿಗದಿ ಮಾಡಿದ ದಿನವಾದ ಭಾನುವಾರವೇ ಚುನಾವಣೆ ನಡೆಸಿತು. ‘ಎಲ್ಲ ಸಿದ್ಧತೆಗಳನ್ನು ಮಾಡಲಾಗಿತ್ತು. ಆದ್ದರಿಂದ ಚುನಾವಣೆಯನ್ನು ಮುಂದೂಡಲು ಆಗಲಿಲ್ಲ. 20 ಜಿಲ್ಲಾ ಘಟಕಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಭಾರತ ಅಥ್ಲೆಟಿಕ್ ಫೆಡರೇಷನ್‌ನಿಂದ ಪ್ರತಿನಿಧಿಯಾಗಿ ಸಿ.ಲತಾ ಬಂದಿದ್ದರು’ ಎಂದು ಸುನಿಲ್ ಕುಮಾರ್‌ ಶೆಟ್ಟಿ ತಿಳಿಸಿದರು.

ಎಚ್‌.ಟಿ.ಮಹಾದೇವ ಹಿರಿಯ ಉಪಾಧ್ಯಕ್ಷರಾಗಿಯೂ ತಿಮ್ಮಾ ರೆಡ್ಡಿ, ಎಸ್‌.ಎಸ್‌.ಹಿರೇಮಠ, ಬಿ.ಎಲ್‌.ಭಾರತಿ ಮತ್ತು ಸದಾನಂದ ನಾಯಕ್‌ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಎ.ರಾಜವೇಲು ಕಾರ್ಯದರ್ಶಿಯಾಗಿಯೂ ಎ.ಎನ್‌.ಪ್ರಭಾಕರ್‌ ಕೋಶಾಧಿಕಾರಿಯಾಗಿಯೂ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.