ADVERTISEMENT

ಕೆಎಎ ಚುನಾವಣೆಗೆ ತಾತ್ಕಾಲಿಕ ತಡೆ

ಮೇ 30ರೊಳಗೆ ಕಾರ್ಯಕಾರಿ ಸಮಿತಿ ಆಯ್ಕೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 19:30 IST
Last Updated 7 ಏಪ್ರಿಲ್ 2018, 19:30 IST

ಬೆಂಗಳೂರು: ಕುತೂಹಲ ಕೆರಳಿಸಿದ್ದ ರಾಜ್ಯ ಅಥ್ಲೆಟಿಕ ಸಂಸ್ಥೆಯ (ಕೆಎಎ) ಚುನಾವಣೆ ಗೊಂದಲಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ಕೆಎಎ ಉಪಾಧ್ಯಕ್ಷರಲ್ಲಿ ಒಬ್ಬರಾಗಿರುವ ಸುನಿಲ್ ಕುಮಾರ್ ಶೆಟ್ಟಿ ಆದೇಶಕ್ಕೆ ಜಿಲ್ಲಾ ನೊಂದಾಣಾಧಿಕಾರಿಗಳು ತಡೆ ನೀಡಿದ್ದು ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ.

ಸುನಿಲ್ ಕುಮಾರ್ ಶೆಟ್ಟಿ ಅವರು ಏಪ್ರಿಲ್ ಎಂಟರಂದು ಚುನಾವಣೆ ನಡೆಸುವುದಾಗಿ ಕಳೆದ ತಿಂಗಳ ಮಧ್ಯದಲ್ಲಿ ಆದೇಶ ಹೊರಡಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮತ್ತೊಬ್ಬರು ಉಪಾಧ್ಯಕ್ಷೆ ಅಶ್ವಿನಿ ನಾಚಪ್ಪ ಮತ್ತು ಇತರರು ಈ ಆದೇಶ ನಿಯಮಬಾಹಿರವಾಗಿದ್ದು ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

ಮತದಾನಕ್ಕೆ ಅರ್ಹತೆ ಪಡೆದಿರುವ ಸದಸ್ಯ ಸಂಸ್ಥೆಗಳ ಪಟ್ಟಿ ಸಿದ್ಧಪಡಿಸುವ ಸಂದರ್ಭದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಏಳು ಜಿಲ್ಲೆಗಳ ಪ್ರತಿನಿಧಿಗಳು ದೂರಿದ್ದರು. ಅವರು ಅಶ್ವಿನಿ ನಾಚಪ್ಪ ಅವರ ಬೆಂಬಲಕ್ಕೆ ನಿಂತಿದ್ದರು.

ADVERTISEMENT

ಚುನಾವಣೆಗೆ ಒಂದು ದಿನ ಬಾಕಿ ಇರುವಂತೆ ಶನಿವಾರ, ಮಲ್ಲೇಶ್ವರಂನಲ್ಲಿರುವ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಗೆ ತೆರಳಿದ ಅತೃಪ್ತ ಜಿಲ್ಲೆಗಳ ಪ್ರತಿನಿಧಿಗಳು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಲಿಖಿತ ದೂರನ್ನೂ ಸಲ್ಲಿಸಿದರು. ಚುನಾವಣೆಯ ಆದೇಶ, ಈ ಹಿಂದೆ ಹೈಕೋರ್ಟ್ ನೀಡಿದ ಆದೇಶ ಮತ್ತು ಅತೃಪ್ತ ಸಂಸ್ಥೆಗಳ ಮನವಿಯನ್ನು ಪರಿಶೀಲಿಸಿದ ನೋಂದಣಾಧಿಕಾರಿಗಳು ಚುನಾವಣೆ ಮುಂದೂಡುವ ನಿರ್ಧಾರ ಕೈಗೊಂಡರು.

ಚುನಾವಣೆಗೆ ಆದೇಶ ಹೊರಡಿಸುವಾಗ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಹೈಕೋರ್ಟ್‌ನ ಆದೇಶಕ್ಕೂ ಮನ್ನಣೆ ನೀಡಲಿಲ್ಲ. ಮತದಾರರ ಪಟ್ಟಿಯಲ್ಲಿ ಏಳು ಜಿಲ್ಲೆಗಳ ಪ್ರತಿನಿಧಿಗಳನ್ನು ಸೇರಿಸದೇ ಲೋಪ ಎಸಗಲಾಗಿದೆ ಎಂದು ಆದೇಶ ಪ್ರತಿಯಲ್ಲಿ ನೋಂದಣಾಧಿಕಾರಿಗಳು ಉಲ್ಲೇಖಿಸಿದ್ದಾರೆ.

ಒಂದು ತಿಂಗಳ ಕಾಲಾವಕಾಶ: ಭಾನುವಾರ ನಡೆಸಲು ಉದ್ದೇಶಿಸಿದ್ದ ಚುನಾವಣೆಗೆ ತಡೆ ನೀಡಿರುವ ನೋಂದಣಾಧಿಕಾರಿಗಳು ಮೇ 30ರ ಒಳಗೆ ಚುನಾವಣೆ ನಡೆಸುವಂತೆ ಕೆಎಎಗೆ ಸೂಚಿಸಿದ್ದಾರೆ. ಈ ಅವಧಿಯಲ್ಲಿ ಚುನಾವಣೆ ನಡೆಸದಿದ್ದರೆ ಹೈಕೋರ್ಟ್‌ ಆದೇಶದ ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

**

ಕೊನೆಗೂ ಸತ್ಯಕ್ಕೆ ಗೆಲುವಾಗಿದೆ. ನ್ಯಾಯ ನಮ್ಮ ಹೋರಾಟ ಗೆದ್ದಿದೆ. ಇದು ಸಂತಸ ತಂದ ಸಂಗತಿ
- ಅಶ್ವಿನಿ ನಾಚಪ್ಪ, ಹಿರಿಯ ಅಥ್ಲೀಟ್‌, ಕೆಎಎ ಉಪಾಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.