ADVERTISEMENT

ಕೈಕೊಟ್ಟ ಅಧಿಕಾರಿಗಳು; ಕ್ರೀಡಾಪಟುಗಳು ಅನಾಥ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 18:30 IST
Last Updated 11 ಮಾರ್ಚ್ 2011, 18:30 IST

ಬೆಂಗಳೂರು: ರಾಂಚಿಯಲ್ಲಿ ಮಾರ್ಚ್ 16ರಿಂದ 21ರವರೆಗೆ ನಡೆಯಲಿರುವ ಪೈಕಾ ರಾಷ್ಟ್ರೀಯ ಗ್ರಾಮೀಣ ಕ್ರೀಡಾಕೂಟಕ್ಕೆ ಕರ್ನಾಟಕದ ಕ್ರೀಡಾಪಟುಗಳನ್ನು ಕರೆದುಕೊಂಡು ಹೋಗುವುದಾಗಿ ಹೇಳಿ ಈಗ ಕೈಕೊಟ್ಟಿರುವ ಘಟನೆ ನಡೆದಿದೆ.ಮೈಸೂರಿನಲ್ಲಿ ನಡೆದ ಪೈಕಾ ರಾಜ್ಯ ಗ್ರಾಮೀಣ ಕ್ರೀಡಾಕೂಟದ ವೇಳೆ 12 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಇವರೆಲ್ಲಾ 16 ವರ್ಷ ವರ್ಷದೊಳಗಿನ ಹ್ಯಾಂಡ್‌ಬಾಲ್ ಆಟಗಾರರು. ಶನಿವಾರ ರಾಂಚಿಗೆ ತೆರಳಲು ಸಮಯ ಕೂಡ ನಿಗದಿಯಾಗಿತ್ತು.

‘ಆದರೆ ಕೊನೆ ಗಳಿಗೆಯಲ್ಲಿ ಈ ಕ್ರೀಡಾಪಟುಗಳಿಗೆ ಎನ್‌ಐಎಸ್ ಕೋಚ್ ಶ್ರೀನಿವಾಸ್ ಕೈಕೊಟ್ಟಿದ್ದಾರೆ. ಇದರಿಂದಾಗಿ ಕ್ರೀಡಾಪಟುಗಳು ವಾಪಸ್ ತೆರಳಬೇಕಾಯಿತು’ ಎಂದು ಕರ್ನಾಟಕ ಹ್ಯಾಂಡ್‌ಬಾಲ್ ಸಂಸ್ಥೆ ಜಂಟಿ ಕಾರ್ಯದರ್ಶಿ ಲೋಕೇಶ್ ಆರೋಪಿಸಿದ್ದಾರೆ.ರಾಂಚಿಗೆ ತೆರಳಲು ರಾಜ್ಯದ ವಿವಿಧ ಭಾಗಗಳಿಂದ 10 ಮಂದಿ ಕ್ರೀಡಾಪಟುಗಳು ಮೂರು ದಿನಗಳ ಹಿಂದೆಯೇ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಅದರಲ್ಲಿ ಬೆಳಗಾವಿ, ಬಾಗಲಕೋಟೆ, ಭದ್ರಾವತಿಯಿಂದ ತಲಾ ಇಬ್ಬರು ಹಾಗೂ ಚಿತ್ರದುರ್ಗದಿಂದ ನಾಲ್ಕು ಮಂದಿ ಇದ್ದಾರೆ.

‘ಪ್ರದರ್ಶನ ಮಟ್ಟ ಸರಿಯಿಲ್ಲದ ಕಾರಣ ಕ್ರೀಡಾಪಟುಗಳನ್ನು ಕರೆದುಕೊಂಡು ಹೋಗುತ್ತಿಲ್ಲ ಎಂದು ಶ್ರೀನಿವಾಸ್ ಅವರು ರಾಜ್ಯ ಯುವಜನ ಸೇವಾ ಇಲಾಖೆ ಉಪ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆದರೆ ರೈಲ್ವೆ ಟಿಕೆಟ್ ಸಮಸ್ಯೆಯಿಂದಾಗಿ ರಾಂಚಿಗೆ ತೆರಳಲು ಸಾಧ್ಯವಿಲ್ಲ ಎಂದು ಈ ಕ್ರೀಡಾಪಟುಗಳಿಗೆ ಹೇಳಿದ್ದಾರೆ. ಇದರಿಂದ ಕ್ರೀಡಾಪಟುಗಳಿಗೆ ತುಂಬಾ ಅನ್ಯಾಯವಾಗಿದೆ’ ಎಂದು ಲೋಕೇಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಾನೀಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೇನೆ. ಆದರೂ ಕ್ರೀಡಾಕೂಟಕ್ಕೆ ತೆರಳಲು ಶಿಕ್ಷಕರಲ್ಲಿ ಮನವಿ ಮಾಡಿಕೊಂಡು ಮೂರು ದಿನಗಳ ಹಿಂದೆಯೇ ಇಲ್ಲಿಗೆ ಬಂದಿದ್ದೆ. ಕೋಚಿಂಗ್ ಶಿಬಿರ ನಡೆಸುತ್ತೇವೆ ಎಂದಿದ್ದರು. ಆದರೆ ಮೂರು ದಿನಗಳಿಂದ ಯಾವುದೇ ತರಬೇತಿ ನೀಡಿಲ್ಲ. ರಾಂಚಿಗೂ ಕರೆದುಕೊಂಡು ಹೋಗುತ್ತಿಲ್ಲ. ನಮಗೀಗ ಅವಕಾಶ ತಪ್ಪಿಸಲಾಗಿದೆ. ಇದರಿಂದ ತುಂಬಾ ನಿರಾಶೆಯಾಗಿದೆ, ಪೋಷಕರು ಹಾಗೂ ಶಿಕ್ಷಕರಿಗೆ ಈಗ ಏನೆಂದು ಹೇಳುವುದು ಗೊತ್ತಾಗುತ್ತಿಲ್ಲ’ ಎಂದು ಕ್ರೀಡಾಪಟು ಕಾರ್ತಿಕ್ ಹೇಳಿದ್ದಾರೆ.

ಕಳೆದ ವರ್ಷ ಚಿತ್ರದುರ್ಗದಲ್ಲಿ ನಡೆದ ಪೈಕಾ ರಾಷ್ಟ್ರೀಯ ಗ್ರಾಮೀಣ ಕ್ರೀಡಾಕೂಟದಲ್ಲಿ ಕರ್ನಾಟಕದ ಬಾಲಕರು ಹ್ಯಾಂಡ್‌ಬಾಲ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ‘ಪೈಕಾ ಕ್ರೀಡಾಕೂಟಕ್ಕಾಗಿ ಕೇಂದ್ರ ಸರ್ಕಾರ 1600 ಕೋಟಿ ರೂ, ವ್ಯಯಿಸುತ್ತಿದೆ. ಅದರಲ್ಲಿ ರಾಜ್ಯಕ್ಕೆ 200 ಕೋಟಿ ಲಭಿಸುತ್ತಿದೆ. ಆದರೂ ಈ ಅಧಿಕಾರಿಗಳು ಮಕ್ಕಳನ್ನು ಅವಕಾಶ ವಂಚಿತರನ್ನಾಗಿ ಮಾಡುತ್ತಿದ್ದಾರೆ. ರಾಂಚಿಯಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ 12 ಮಂದಿಯನ್ನು ಕೋಚ್ ಶ್ರೀನಿವಾಸ್ ಅವರೇ ಆಯ್ಕೆ ಮಾಡಿದ್ದರು’ ಎಂದು ಲೋಕೇಶ್ ವಿವರಿಸಿದ್ದಾರೆ.ಆದರೆ ಹಾಕಿ ಹಾಗೂ ಇತರೆ ಕ್ರೀಡೆಗಳ ಆಟಗಾರರನ್ನು ರಾಂಚಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಅವರಿಗೆ ರೈಲ್ವೆ ಟಿಕೆಟ್ ಹೇಗೆ ಲಭಿಸಿತು ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.