ADVERTISEMENT

ಕೊಕ್ಕೊ: ಸೆಮಿಫೈನಲ್‌ಗೆ ಕರ್ನಾಟಕ ತಂಡಗಳು

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST

ಚಂದರಗಿ (ಬೆಳಗಾವಿ ಜಿಲ್ಲೆ): ನಿರೀಕ್ಷೆಯಂತೆ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡಗಳು ಇಲ್ಲಿ ನಡೆಯುತ್ತಿರುವ 17 ವರ್ಷದೊಳಗಿನವರ 58ನೇ ರಾಷ್ಟ್ರೀಯ ಕೊಕ್ಕೊ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿವೆ.

ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸ್ಕೂಲ್ ಗೇಮ್ಸ ಫೆಡರೇಷನ್ ಆಫ್ ಇಂಡಿಯಾ ಆಶ್ರಯದಲ್ಲಿ ಇಲ್ಲಿನ ಕ್ರೀಡಾ ಶಾಲೆಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಗುರುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ಬಾಲಕರು ಗೋವಾ ತಂಡವನ್ನು ಹಾಗೂ ಬಾಲಕಿಯರು ಹಿಮಾಚಲ ಪ್ರದೇಶ ತಂಡವನ್ನು ಮಣಿಸಿದರು.

ಲೀಗ್ ಹಂತದ ಎರಡನೇ ಪಂದ್ಯದಲ್ಲಿ ಒಡಿಶಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಆಲ್‌ರೌಂಡರ್ ಯಲ್ಲಪ್ಪ ಡಾನಕಶಿರೂರ ಮತ್ತೊಮ್ಮೆ ಮಿಂಚಿ ಮೂರೂವರೆ ನಿಮಿಷ ರಕ್ಷಣಾತ್ಮಕ ಆಟವಾಡಿದರು ಹಾಗೂ ಎದುರಾಳಿಗಳ ಇಬ್ಬರನ್ನು ಔಟ್ ಮಾಡಿದರು. ಇದರ ಫಲವಾಗಿ ಕರ್ನಾಟಕ ತಂಡ ಗೋವಾ ವಿರುದ್ಧ 5 ಪಾಯಿಂಟ್‌ಗಳ ಜಯ ಸಾಧಿಸಿತು. (ಸ್ಕೋರ್-15-10).

ಬಾಲಕಿಯರ ವಿಭಾಗದಲ್ಲಿ ಮಂಜುಳಾ ಹಾಗೂ ಮೇಘಾ ಅವರ ಉತ್ತಮ ಆಟದ ನೆರವಿನಿಂದ ಕರ್ನಾಟಕ ತಂಡ ಹಿಮಾಚಲ ಪ್ರದೇಶ ತಂಡವನ್ನು ಮಣಿಸಿತು. ಮಂಜುಳಾ ನಾಲ್ಕೂವರೆ ನಿಮಿಷ ರಕ್ಷಣಾತ್ಮಕ ಓಟ ಓಡಿದರೆ, ಮೇಘಾ ಮೂರುವರೆ ನಿಮಿಷ ಓಡಿ ಇಬ್ಬರನ್ನು ಔಟ್ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.