ADVERTISEMENT

ಕೊಚ್ಚಿಯಲ್ಲಿ ಪಂದ್ಯ: ತಜ್ಞರ ಅಭಿಪ್ರಾಯಕ್ಕೆ ಮನ್ನಣೆ

ಪಿಟಿಐ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST

ಕೊಚ್ಚಿ: ಇಲ್ಲಿನ ಜವಾಹರಲಾಲ್ ನೆಹರು ಫುಟ್‌ಬಾಲ್‌ ಕ್ರೀಡಾಂಗಣವನ್ನು ಅಗೆಯದೇ ಕ್ರಿಕೆಟ್ ಪಂದ್ಯಗಳಿಗೆ ಬಳಸಲು ಸಾಧ್ಯವೇ ಎಂಬುದರ ಬಗ್ಗೆ ತಜ್ಞರ ಅಭಿಪ್ರಾಯ ಕೋರಲು ಬುಧವಾರ ನಿರ್ಧರಿಸಲಾಗಿದೆ.

ನವೆಂಬರ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯವನ್ನು ತಿರುವನಂತಪುರದಿಂದ ಇಲ್ಲಿಗೆ ಸ್ಥಳಾಂತರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

ಸಂಸದ ಶಶಿ ತರೂರ್‌, ಫುಟ್‌ಬಾಲ್ ಆಟಗಾರರಾದ ಸಿ.ಕೆ.ವಿನೀತ್, ಐ.ಎಂ.ವಿಜಯನ್ ಮತ್ತಿತರರು ಕೇರಳ ಕ್ರಿಕೆಟ್ ಸಂಸ್ಥೆಯ ನಡೆಯನ್ನು ಪ್ರಶ್ನಿಸಿ ಟ್ವಿಟರ್ ಮೂಲಕ ಆಂದೋಲನ ನಡೆಸಿದ್ದರು.

ADVERTISEMENT

ಕೊಚ್ಚಿ ಕ್ರೀಡಾಂಗಣದ ಆಡಳಿತ ವಹಿಸುತ್ತಿರುವ ಗ್ರೇಟರ್ ಕೊಚ್ಚಿನ್ ಡೆವಲಪ್‌ಮೆಂಟ್ ಅಥಾರಿಟಿಯ ಮುಖ್ಯಸ್ಥ ಸಿ.ಎನ್‌.ಮೋಹನನ್‌ ಬುಧವಾರ ಕೇರಳ ಕ್ರಿಕೆಟ್ ಸಂಸ್ಥೆ ಮತ್ತು ಕೇರಳ ಫುಟ್‌ಬಾಲ್‌ ಸಂಸ್ಥೆಯ ಪದಾಧಿಕಾರಿಗಳ ಜೊತೆ ಚರ್ಚಿಸಿ ತಜ್ಞರ ಅಭಿಪ್ರಾಯ ಪಡೆಯಲು ನಿರ್ಧರಿಸಿದ್ದಾರೆ.

ಕೊಚ್ಚಿ ಕ್ರೀಡಾಂಗಣಕ್ಕೆ ಅಂತರರಾಷ್ಟ್ರೀಯ ಫುಟ್‌ಬಾಲ್ ಫೆಡರೇಷನ್‌ (ಫಿಫಾ) ಮಾನ್ಯತೆ ನೀಡಿದೆ.

19 ವರ್ಷದೊಳಗಿನವರ ಫುಟ್‌ಬಾಲ್‌ ವಿಶ್ವಕಪ್‌ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದ ಇಲ್ಲಿ ಕ್ರಿಕೆಟ್ ಪಂದ್ಯ ನಡೆಸಬೇಕಾದರೆ ಹೊಸದಾಗಿ ಪಿಚ್ ಸಿದ್ಧಪಡಿಸಬೇಕು. ಇದರಿಂದ ಫುಟ್‌ಬಾಲ್ ಅಂಗಣಕ್ಕೆ ಧಕ್ಕೆಯಾಗಲಿದೆ ಎಂದು ಶಶಿ ತರೂರ್‌ ಮತ್ತು ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.