ADVERTISEMENT

ಕೊನೆಯ ಪಂದ್ಯದಲ್ಲಿ ಕಿವೀಸ್‌ಗೆ ಸೋಲು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2010, 13:25 IST
Last Updated 31 ಡಿಸೆಂಬರ್ 2010, 13:25 IST
ಕೊನೆಯ ಪಂದ್ಯದಲ್ಲಿ ಕಿವೀಸ್‌ಗೆ ಸೋಲು
ಕೊನೆಯ ಪಂದ್ಯದಲ್ಲಿ ಕಿವೀಸ್‌ಗೆ ಸೋಲು   

ಕ್ರೈಸ್ಟ್‌ಚರ್ಚ್ (ಎಎಫ್‌ಪಿ): ಶಾಹೀದ್ ಆಫ್ರಿದಿ (14ಕ್ಕೆ4) ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಆತಿಥೇಯ ನ್ಯೂಜಿಲೆಂಡ್ ತಂಡ ಇಲ್ಲಿ ಮುಕ್ತಾಯವಾದ ಮೂರು ಪಂದ್ಯಗಳ ಟ್ವೆಂಟಿ-20 ಕ್ರಿಕೆಟ್ ಸರಣಿಯ ಕೊನೆಯ ಪಂದ್ಯದಲ್ಲಿ ಗುರುವಾರ ಪಾಕಿಸ್ತಾನ ಎದುರು 103 ರನ್‌ಗಳ ಅಂತರದಿಂದ ಸೋಲು ಅನುಭವಿಸಿತು.

ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ನಿರಾಸೆ ಹೊಂದಿದರೂ ನ್ಯೂಜಿಲೆಂಡ್ 2-1ರಲ್ಲಿ ಈ ಸರಣಿಯನ್ನು ತನ್ನದಾಗಿಸಿಕೊಂಡಿತು. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕಿವೀಸ್ ಪಡೆ ಪಾಕಿಸ್ತಾನ ತಂಡವನ್ನು ಮಣಿಸಿತ್ತು.

ಕೊನೆಯ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತನ್ನ ಪಾಲಿನ ಇಪ್ಪತ್ತು ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿತು. ಸವಾಲಿನ ಮೊತ್ತಕ್ಕೆ ತಿರುಗೇಟು ನೀಡಲು ಪರದಾಡಿದ ನ್ಯೂಜಿಲೆಂಡ್ ತಂಡವು 15.5 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಗಳಿಸಿದ್ದು 80 ರನ್ ಮಾತ್ರ.

ಪಾಕ್ ನೀಡಿದ ಸವಾಲಿನ ಮೊತ್ತಕ್ಕೆ ದಿಟ್ಟ ಉತ್ತರ ನೀಡುವಲ್ಲಿ ಎಡವಿದ ಕಿವೀಸ್ ಪಡೆಯ ನಾಲ್ವರು ಆರಂಭಿಕ ಬ್ಯಾಟ್ಸ್‌ಮನ್‌ಗಳು ಖಾತೆ ತೆಗೆಯದೆಯೇ ಒಬ್ಬರನ್ನೊಬ್ಬರು ಹಿಂಬಾಲಿಸಿ ಪವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಸ್ಕಾಟ್ ಸ್ಟೈರಿಸ್ ಅವರು 45 ರನ್ ಗಳಿಸಿ ನ್ಯೂಜಿಲೆಂಡ್ ತಂಡದ ಗೆಲುವಿನ ಆಸೆಯ ಕನಸು ನನಸು ಮಾಡಲು ಹೋರಾಟ ನಡೆಸಿದರು. ಆದರೆ ಇವರ ಆಸೆಗೆ ಅಡ್ಡಿಯಾಗಿದ್ದು ಶಾಹೀದ್ ಆಫ್ರಿದಿ. ಅಪಾಯಕಾರಿ ಆಗುವ ಸಂಕೇತ ನೀಡಿದ್ದ ಸ್ಟೈರಿಸ್ ವಿಕೆಟ್ ಪಡೆಯುವ ಮೂಲಕ ಆಫ್ರಿದಿ ಅವರು ಪಂದ್ಯವು ತಮ್ಮ ತಂಡದ ಬಿಗಿಹಿಡಿತಕ್ಕೆ ಬರುವಂತೆ ಮಾಡಿದರು.

ಸಂಕ್ಷಿಪ್ತ ಸ್ಕೋರು:
ಪಾಕಿಸ್ತಾನ: 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 183 (ಅಹ್ಮದ್ ಶೆಹ್ಜಾದ್ 54, ಮೊಹಮ್ಮದ್ ಹಫೀಜ್ 34, ಅಬ್ದುಲ್ ರಜಾಕ್ ಔಟಾಗದೇ 34; ಜೇಮ್ಸ್ ಫ್ರಾಂಕ್ಲಿನ್ 12ಕ್ಕೆ2); ನ್ಯೂಜಿಲೆಂಡ್ 15.5 ಓವರ್‌ಗಳಲ್ಲಿ 80 (ಸ್ಕಾಟ್ ಸ್ಟೈರಿಸ್ 45, ನಥಾನ್ ಮೆಕ್ಲಮ್ 8; ಅಬ್ದುಲ್ ರಜಾಕ್ 13ಕ್ಕೆ3, ಶಾಹೀದ್ ಆಫ್ರಿದಿ 14ಕ್ಕೆ4); ಫಲಿತಾಂಶ: ಪಾಕಿಸ್ತಾನಕ್ಕೆ 103 ರನ್‌ಗಳ ಗೆಲುವು; ನ್ಯೂಜಿಲೆಂಡ್‌ಗೆ 2-1ರಲ್ಲಿ ಸರಣಿ ವಿಜಯ; ಪಂದ್ಯ ಶ್ರೇಷ್ಠ: ಅಬ್ದುಲ್ ರಜಾಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.