ADVERTISEMENT

ಕೊಹ್ಲಿ- ನೈಕಿ ವಿವಾದ: ಅರ್ಜಿ ವಜಾ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಬೆಂಗಳೂರು: `ನಾನು ನೈಕಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ರಾಯಭಾರಿ ಆಗಿದ್ದಾಗ ಒಂದು ಜೊತೆ ಶೂ ಬೇಕು ಎಂದು ಕೇಳಿದ್ದೆ. ಆದರೆ ಆರು ತಿಂಗಳ ಕಾಲ ಕಾಯಿಸಿದ ಕಂಪೆನಿ, ನಂತರ ಒಂದೇ ಕಾಲಿನ ಎರಡು ಶೂಗಳನ್ನು ನೀಡಿತು!' ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದ್ದಾರೆ.

ನೈಕಿ ಕಂಪೆನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅವರ ಪೀಠಕ್ಕೆ ಕೊಹ್ಲಿ ಪರ ಹಿರಿಯ ವಕೀಲ ಉದಯ ಹೊಳ್ಳ ಈ ಸಂಗತಿ ವಿವರಿಸಿದರು. `ನೈಕಿ ಜೊತೆ ಮಾಡಿಕೊಂಡ ಒಪ್ಪಂದ ಉಲ್ಲಂಘಿಸಿಲ್ಲ. ಆದರೆ ಅವರ ಜೊತೆ ಒಪ್ಪಂದ ಮುಂದುವರಿಸುವ ಇರಾದೆ ಇಲ್ಲ' ಎಂದು ಅವರು ಸ್ಪಷ್ಟನೆ ನೀಡಿದರು.

`ಕೊಹ್ಲಿ ಜೊತೆ ತಾನು 2008ರಿಂದ 2013ರವರೆಗೆ ಅನ್ವಯ ಆಗುವಂತೆ ಒಪ್ಪಂದ ಮಾಡಿಕೊಂಡಿದ್ದೇನೆ. ಇದನ್ನು 2014ವರೆಗೂ ವಿಸ್ತರಿಸಲು ಅವಕಾಶ ಇದೆ. ಒಪ್ಪಂದ 2014ರವರೆಗೂ ಇರುತ್ತದೆ ಎಂಬ ಆದೇಶ ನೀಡಬೇಕು' ಎಂದು ಕಂಪೆನಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ಇತ್ಯರ್ಥಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.