ನಾಗಪುರ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಣ ವಿಶ್ವ ಕಪ್ ಕ್ರಿಕೆಟ್ ಪಂದ್ಯ ನೋಡಲು ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ, ಮದ್ಯದೊರೆ  ವಿಜಯ್ ಮಲ್ಯ ಅವರ ಪುತ್ರ ಸಿದ್ದಾರ್ಥ್ ಜೊತೆ ರೋಲ್ಸ್ ರಾಯ್ಸ್ ಕಾರಲ್ಲಿ ಬಂದಿದ್ದರು. ಈ ಶನಿವಾರ ಅಂದರೆ ಮಾರ್ಚ್ 12 ರಂದು, ನಾಗಪುರದ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯುವ ಭಾರತ-ದಕ್ಷಿಣ ಆಫ್ರಿಕ ಪಂದ್ಯ ನೋಡಲು ದೀಪಿಕಾ ನಟ ಅಭಿಷೇಕ್ ಬಚ್ಚನ್ ಜೊತೆ ಬರಲಿದ್ದಾರೆ. ಯಾವ ಕಾರಲ್ಲಿ ಬರುತ್ತಾರೆಂಬುದನ್ನು ಕಾಯ್ದುನೋಡಬೇಕು.
ದೀಪಿಕಾ ಈ ಸಲ ಬರೀ ಆಟ ನೋಡಲು ಬರುವುದಿಲ್ಲ. ಅಂದು ಕ್ರಿಕೆಟ್ ತಾರೆಗಳ ಜೊತೆ ಮೈದಾನದಲ್ಲಿ ಸಿನೇಮಾ ತಾರೆಗಳೂ ಮಿಂಚಲಿವೆ. ರೋಹನ್ ಸಿಪ್ಪಿ ನಿರ್ದೇಶನದ ‘ದಮ್ ಮಾರೋ ದಮ್’ ಚಿತ್ರ ಏಪ್ರಿಲ್ 22 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ಅಭಿಷೇಕ್ ಜೊತೆ ಬಿಪಾಶಾ ಬಸು, ದೀಪಿಕಾ ನಟಿಸಿದ್ದಾರೆ. ದೀಪಿಕಾ ನೃತ್ಯ ಮತ್ತು ಹಾಡಿನ ಬಿಡುಗಡೆ ಕಾರ್ಯಕ್ರಮ 12 ರಂದು ಸಂಜೆ ಕ್ರಿಕೆಟ್ ಪಂದ್ಯದ ಊಟದ ಸಮಯದಲ್ಲಿ ನಡೆಯಲಿದೆ. 
ಕ್ರಿಕೆಟ್ ಪಂದ್ಯದ ಜೊತೆ ದೀಪಿಕಾ ನೃತ್ಯ ಜನರ ಹುಚ್ಚನ್ನು ಇನ್ನಷ್ಟು ಕೆರಳಿಸಲಿದೆ ಎಂದು ನಿರ್ದೇಶಕ ರೋಹನ್ ಸಿಪ್ಪಿ ಹೇಳಿದ್ದಾರೆ. ಕ್ರೀಡಾಂಗಣದಲ್ಲಿಯ 45 ಸಾವಿರ ಜನರಷ್ಟೇ ಅಲ್ಲ, ಟಿವಿಯಲ್ಲಿ ನೋಡಲಿರುವ ಕೋಟ್ಯಂತರ ಜನರೂ ಈ ಹಾಡಿನ ಬಿಡುಗಡೆಗೆ ಕಾಯುತ್ತಿದ್ದಾರೆ ಎಂದು ಸಿಪ್ಪಿ ಹೇಳಿದ್ದಾರೆ. ಹಾಡಿನ ಬಿಡುಗಡೆಗೆ ಭಾರತ ಆಡುವ ಕ್ರಿಕೆಟ್ ಪಂದ್ಯದಂಥ ಉತ್ತಮ ದಿನ ಮತ್ತೊಂದಿಲ್ಲ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.