ADVERTISEMENT

‘ಕ್ರಿಕೆಟ್‌ನತ್ತ ಹೆಚ್ಚು ಗಮನಹರಿಸಬೇಕು’

ಪಿಟಿಐ
Published 5 ಜೂನ್ 2018, 19:30 IST
Last Updated 5 ಜೂನ್ 2018, 19:30 IST

ಡೆಹ್ರಾಡೂನ್‌: ‘ನಮ್ಮ ದೇಶದಲ್ಲಿ ಬಾಂಬ್‌ ಸ್ಫೋಟ ಹಾಗೂ ಗುಂಡಿನ ದಾಳಿಗಳು ನಡೆಯುವುದು ಸಾಮಾನ್ಯ ಸಂಗತಿ. ಪ್ರತಿ ತಿಂಗಳೂ ಇಂತಹ ಭಯೋತ್ಪಾದಕ ಕೃತ್ಯಗಳು ನಡೆಯುತ್ತವೆ. ಆದರೆ, ನಾವು ಕ್ರಿಕೆಟ್‌ನತ್ತ ಗಮನಹರಿಸಬೇಕು. ಯುದ್ಧ ಪೀಡಿತ ರಾಷ್ಟ್ರದವರು ಎಂಬ ಮಾತ್ರಕ್ಕೆ ಕ್ರೀಡೆಯಲ್ಲಿ ಪಾಲ್ಗೊಳ್ಳದೇ ಇರಲು ಸಾಧ್ಯವಿಲ್ಲ’ ಎಂದು ಅಫ್ಗಾನಿಸ್ತಾನ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಶಾಪೂರ್‌ ಜದ್ರಾನ್‌ ಹೇಳಿದ್ದಾರೆ.

‘ನಮ್ಮ ರಾಷ್ಟ್ರಗಳಲ್ಲಿ ಸಂಭವಿಸುವ ಉಗ್ರರ ಚಟುವಟಿಕೆಗಳ ಕುರಿತು ನಾವು ಹೆಚ್ಚು ತಲೆಕೆಡಿಸಿಕೊಳ್ಳಲಾಗುವುದಿಲ್ಲ. ಹಾಗೇ ಮಾಡಿದರೆ, ನಾವು ಕ್ರಿಕೆಟ್‌ ಆಡಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಅಫ್ಗಾನಿಸ್ತಾನ ತಂಡವು ಬಾಂಗ್ಲಾದೇಶದ ವಿರುದ್ಧದ ಟ್ವೆಂಟಿ–20 ಕ್ರಿಕೆಟ್‌ ಸರಣಿ ಆಡುತ್ತಿದೆ. ಅಫ್ಗಾನಿಸ್ತಾನ ತಂಡವು ಭಾರತ ವಿರುದ್ಧ ತನ್ನ ಮೊದಲ ಟೆಸ್ಟ್‌ ಪಂದ್ಯವನ್ನು ಜೂನ್‌ 14ರಂದು ಬೆಂಗಳೂರಿನಲ್ಲಿ ಆಡಲಿದೆ. ಆದರೆ, ಈ ಐತಿಹಾಸಿಕ ಟೆಸ್ಟ್‌ ಪಂದ್ಯದಲ್ಲಿ ಆಡುವ ತಂಡದಲ್ಲಿ ಶಾಪೂರ್‌ ಅವರಿಗೆ ಅವಕಾಶ ಸಿಕ್ಕಿಲ್ಲ.

ADVERTISEMENT

‘ಅಫ್ಗಾನಿಸ್ತಾನದ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ನಾನು ಆಡಿದ್ದೇನೆ. ನನಗೆ ಆದ ಗಾಯಗಳ ಕಾರಣದಿಂದ ಈ ಹಿಂದೆ ನಾಲ್ಕು ದಿನಗಳ ಕ್ರಿಕೆಟ್‌ ಪಂದ್ಯಗಳನ್ನು ಆಡಲಾಗಿಲ್ಲ. ಆದರೆ, ಈಗ ನಾನು ಫಿಟ್‌ ಆಗಿದ್ಧೇನೆ. ಆದರೆ ಅವಕಾಶ ಸಿಗದಿರುವುದು ನನ್ನ ದುರಾದೃಷ್ಠ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.