ADVERTISEMENT

ಕ್ರಿಕೆಟ್: ದಕ್ಷಿಣ ಆಫ್ರಿಕಾಕ್ಕೆ ವಿಜಯ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2012, 19:30 IST
Last Updated 29 ಫೆಬ್ರುವರಿ 2012, 19:30 IST
ಕ್ರಿಕೆಟ್: ದಕ್ಷಿಣ ಆಫ್ರಿಕಾಕ್ಕೆ ವಿಜಯ
ಕ್ರಿಕೆಟ್: ದಕ್ಷಿಣ ಆಫ್ರಿಕಾಕ್ಕೆ ವಿಜಯ   

ನೇಪಿಯರ್ (ಎಎಫ್‌ಪಿ): ಆರಂಭಿಕ ಬ್ಯಾಟ್ಸ್‌ಮನ್ ಹಾಶಿಮ್ ಆಮ್ಲಾ (92, 107 ಎಸೆತ, 12 ಬೌಂಡರಿ) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ದಕ್ಷಿಣಆಫ್ರಿಕಾ ತಂಡದವರು ಇಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಆರು ವಿಕೆಟ್‌ಗಳ ಭರ್ಜರಿ ಗೆಲುವು ಪಡೆದರು.

ಮೆಕ್‌ಲಿನ್ ಪಾರ್ಕ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ನೀಡಿದ್ದ 231 ರನ್‌ಗಳ ಗುರಿ ಮುಟ್ಟಲು ಪ್ರವಾಸಿ ತಂಡಕ್ಕೆ ಕಷ್ಟವಾಗಲಿಲ್ಲ. 38.2 ಓವರ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ಪ್ರವಾಸಿ ತಂಡ ಈ ಗುರಿ ಮುಟ್ಟಿತು.

ಇದಕ್ಕೆ ಆಮ್ಲಾ ಉತ್ತಮ ಬ್ಯಾಟಿಂಗ್ ಕಾರಣವಾಯಿತು. ಈ ಗೆಲುವಿನ ಮೂಲಕ ಪ್ರವಾಸಿ ತಂಡ ಮೂರು ಪಂದ್ಯಗಳ ಸರಣಿಯಲ್ಲಿ 2-0ರಲ್ಲಿ ಸರಣಿ ಗೆಲುವಿನ ಮುನ್ನಡೆ ಸಾಧಿಸಿತು.

ಗೆಲುವಿನ ದಡ ಮುಟ್ಟಲು ಇನ್ನೂ 39 ರನ್ ಅಗತ್ಯವಿದ್ದಾಗ ಶತಕದ ಹೊಸ್ತಿಲಲ್ಲಿದ್ದ ಬಲಗೈ ಬ್ಯಾಟ್ಸ್‌ಮನ್ ಆಮ್ಲಾ ಔಟಾದರು. ನಂತರ  ಜಾನ್ ಪಾಲ್ ಡುಮಿನಿ (43, 39ಎಸೆತ, 6ಬೌಂ) ಎ.ಬಿ. ಡಿವಿಲಿಯರ್ಸ್ (ಔಟಾಗದೇ 31, 35 ಎಸೆತ, 2ಬೌಂ) ತಂಡಕ್ಕೆ ನೆರವಾದರು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಆರಂಭಿಕ ಆಘಾತ ಅನುಭವಿಸಿತು. ಈ ಸಂಕಷ್ಟದಿಂದ ಚೇತರಿಸಿಕೊಳ್ಳಲು ಬಹಳ ಹೊತ್ತು ಹಿಡಿಯಲಿಲ್ಲ. ಇದಕ್ಕೆ ಮಾರ್ಟಿನ್ ಗುಪ್ಟಿಲ್ (58, 73ಎಸೆತ, 8 ಬೌಂ) ಹಾಗೂ ಬ್ರೆಂಡನ್ ಮೆಕ್ಲಮ್  (85, 96ಎಸೆತ, 11ಬೌ. 2 ಸಿಕ್ಸರ್) ಜೊತೆಯಾಟ ಕಾರಣವಾಯಿತು.

ಈ ಜೋಡಿ ಎರಡನೇ ವಿಕೆಟ್‌ಗೆ 107 ರನ್ ಕಲೆ ಹಾಕಿತು. ಮುಖ್ಯವಾಗಿ ಕ್ರೀಸ್‌ಗೆ ಕಚ್ಚಿಕೊಂಡು ನಿಂತು ವಿಕೆಟ್ ಬೀಳದಂತೆ ಎಚ್ಚರಿಕೆ ವಹಿಸಿತು. ಇವರ ಆಟದ ನೆರವಿನಿಂದ ಆತಿಥೇಯ ತಂಡಕ್ಕೆ 200ರ ಗಡಿ ದಾಟಲು ಸಾಧ್ಯವಾಯಿತು. ಐದು ವಿಕೆಟ್ ಪಡೆದ ಮಾರ್ನ್ ಮಾರ್ಕೆಲ್ ನ್ಯೂಜಿಲೆಂಡ್‌ನ ಕುಸಿತಕ್ಕೆ ಕಾರಣರಾದರು. ಆದ್ದರಿಂದ `ಪಂದ್ಯ ಶ್ರೇಷ್ಠ~ ಗೌರವಕ್ಕೂ ಪಾತ್ರರಾದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್ 47.3 ಓವರ್‌ಗಳಲ್ಲಿ 230. (ಮಾರ್ಟಿನ್ ಗುಪ್ಟಿಲ್ 58, ಬ್ರೆಂಡನ್ ಮೆಕ್ಲಮ್ 85, ಟಿಮ್ ಸೌಥೀ 28; ಲೊನ್ವಾಬೊ ಸೊಸೊಬೆ 43ಕ್ಕೆ3, ಡೇಲ್ ಸ್ಟೇನ್ 37ಕ್ಕೆ1, ಮಾರ್ನ್ ಮಾರ್ಕೆಲ್ 38ಕ್ಕೆ5, ಜಾಕ್ ಕಾಲಿಸ್ 35ಕ್ಕೆ1).

ದಕ್ಷಿಣ ಆಫ್ರಿಕಾ: 38.2 ಓವರ್‌ಗಳಲ್ಲಿ 4 ವಿಕೆಟ್‌ಗೆ 231. (ಹಾಶಿಮ್ ಆಮ್ಲಾ 92, ಜಾನ್ ಪಾಲ್ ಡುಮಿನಿ 43, ಎ.ಬಿ. ಡಿವಿಲಿಯರ್ಸ್ ಔಟಾಗದೇ 31; ಕೇಲ್ ಮಿಲ್ಸ್ 41ಕ್ಕೆ1, ತರುಣ್ ನೆತುಲಾ 60ಕ್ಕೆ2). ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 6 ವಿಕೆಟ್ ಗೆಲುವು. 2-0ರಲ್ಲಿ ಸರಣಿ ಗೆಲುವಿನ ಮುನ್ನಡೆ. ಪಂದ್ಯ ಶ್ರೇಷ್ಠ: ಮಾರ್ನ್ ಮಾರ್ಕೆಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.