ADVERTISEMENT

ಕ್ರಿಕೆಟ್ ಬಿಟ್ಟು ಹಾಕಿ ನೆರವಿಗೆ ನಿಂತ ಸಹರಾ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 6:55 IST
Last Updated 7 ಫೆಬ್ರುವರಿ 2012, 6:55 IST

ನವ ದೆಹಲಿ (ಪಿಟಿಐ): ಭಾರತದ ಕ್ರಿಕೆಟ್ ತಂಡದೊಂದಿಗಿನ ಒಪ್ಪಂದವನ್ನು ಕಡಿದುಕೊಂಡ ಸಹರಾ ಸಮೂಹವು, ಹಾಕಿ ತಂಡದೊಂದಿಗಿದ್ದ ತನ್ನ ಒಪ್ಪಂದವನ್ನು ಮುಂದಿನ ಐದು ವರ್ಷಗಳಿಗೆ ವಿಸ್ತರಿಸಿದೆ.

ಈ ಒಪ್ಪಂದದಿಂದ ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡ ಜತೆಗೆ ಹಿರಿಯ ಹಾಗೂ ಕಿರಿಯ ತಂಡದ ಸದಸ್ಯರಿಗೆ ಆರ್ಥಿಕ ಬೆಂಬಲವನ್ನು ಸಹರಾ ಸಮೂಹವು 2017ರವರೆಗೆ ನೀಡಲಿದೆ.

ಭಾರತೀಯ ಹಾಕಿ ತಂಡದೊಂದಿಗಿನ ಒಪ್ಪಂದ ಕುರಿತು ಹೆಚ್ಚಿನ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ. ಆದರೆ ಇದು ಈ ಹಿಂದಿನ ಒಪ್ಪಂದಕ್ಕೆ ಹೋಲಿಸಿದಲ್ಲಿ ಆಟಗಾರರಿಗೆ ಸಿಗುವ ಆರ್ಥಿಕ ಬೆಂಬಲ ಮೊತ್ತ ದ್ವಿಗುಣಗೊಂಡಿದೆ ಎಂದು ಮೂಲಗಳು ಹೇಳಿವೆ. ನೂತನ ಒಪ್ಪಂದದ ಅನ್ವಯ ಫೆ. 18ರಿಂದ 26ರವರೆಗೂ ನಡೆಯುವ ಒಲಂಪಿಕ್ ಅರ್ಹ ಸುತ್ತಿನಲ್ಲಿ ಆಟಗಾರರು ಸಹರಾ ಮೊಹರು ಇರುವ ಜರ್ಸಿಯನ್ನು ತೊಟ್ಟು ಆಡಲಿದ್ದಾರೆ.

ADVERTISEMENT

2003ರಲ್ಲಿ ಭಾರತೀಯ ಹಾಕಿ ಒಕ್ಕೂಟದೊಂದಿಗೆ ಮಾಡಿಕೊಂಡ ಒಪ್ಪಂದ 2011ಕ್ಕೆ ಕೊನೆಗೊಂಡಿತ್ತು. ಅಲ್ಲಿಂದ ಆರು ತಿಂಗಳಿಗೆ ಒಪ್ಪಂದವನ್ನು ವಿಸ್ತರಿಸಲಾಗಿತ್ತು. ಅದೂ ಸಹ ಕಳೆದ ತಿಂಗಳು ಕೊನೆಗೊಂಡಿತ್ತು.

ಇದೇ ವೇಳೆ ಸಹರಾ ಸಮೂಹವು ಭಾರತೀಯ ಕ್ರಿಕೆಟ್ ತಂಡದೊಂದಿಗಿನ ತನ್ನ ಒಪ್ಪಂದವನ್ನು ರದ್ದುಗೊಳಿಸಿದ್ದು, ಇದರಿಂದ ಉಳಿದ ಹಣವನ್ನು ಸಮೂಹವು ಭಾರತದಲ್ಲಿ ಇತರ ಕ್ರೀಡೆಗಳ ಅಭಿವೃದ್ಧಿಗೆ ವಿನಿಯೋಗಿಸಲಿದೆ ಎಂದು ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.