ADVERTISEMENT

ಕ್ರಿಕೆಟ್: ಭಾರತಕ್ಕೆ ಮಣಿದ ಆಸ್ಟ್ರೇಲಿಯಾ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST

ಡಾರ್ವಿನ್, ಆಸ್ಟ್ರೇಲಿಯಾ (ಪಿಟಿಐ): ಉತ್ತಮ ಆಲ್‌ರೌಂಡ್ ಪ್ರದರ್ಶನ ತೋರಿದ ಭಾರತ ತಂಡದವರು (19 ವರ್ಷದೊಳಗಿನವರು) ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 47 ರನ್‌ಗಳ ಗೆಲುವು ಸಾಧಿಸಿದರು.

ಮರಾರಾ ಓವಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವಿಜಯ್ ಜೋಲ್ ನೇತೃತ್ವದ ಭಾರತ 49.3 ಓವರ್‌ಗಳಲ್ಲಿ 221 ರನ್‌ಗಳನ್ನು ಕಲೆ ಹಾಕಿತು. ಈ ಮೊತ್ತವನ್ನು ಮುಟ್ಟುವ ಹಾದಿಯಲ್ಲಿ ಪರದಾಡಿದ ಆತಿಥೇಯ ತಂಡ 47.1 ಓವರ್‌ಗಳಲ್ಲಿ 174 ರನ್ ಕಲೆ ಹಾಕುವಷ್ಟರಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ಉತ್ತಮ ಆರಂಭ ಪಡೆದಿದ್ದ ಭಾರತ ಕೊನೆಯಲ್ಲಿ ಮುಗ್ಗರಿಸಿತು. ಆಸೀಸ್ ದಾಳಿಯನ್ನು ಎದುರಿಸಿ ನಿಲ್ಲುವಲ್ಲಿ ಎಡವಿದ ತಂಡ ಕೊನೆಯ ಹತ್ತು ಓವರ್‌ಗಳಲ್ಲಿ ಎಳು ವಿಕೆಟ್ ಕಳೆದುಕೊಂಡಿತು. ಆದರೆ, ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್ ಚಾಂಪಿಯನ್ ಭಾರತ ಬಿಗುವಿನ ಬೌಲಿಂಗ್ ಮಾಡಿ, ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿತು. ಗುರುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ಎದುರು ಪೈಪೋಟಿ ನಡೆಸಲಿದೆ.

ಸಂಕ್ಷಿಪ್ತ ಸ್ಕೋರು: ಭಾರತ 49.3 ಓವರ್‌ಗಳಲ್ಲಿ 221. (ಅಂಕುಶ್ ಬೈನ್ಸ್ 64, ಅಖಿಲ್ ಹರ್ವಾಡ್ಕರ್ 25, ವಿಜಯ್ ಜೋಲ್ 46, ಸಂಜು ಸ್ಯಾಮ್ಸನ್ 34, ದೀಪಕ್ ಹೂಡಾ 22; ಮ್ಯಾಥ್ಯೂ ಕೆಲ್ಲಿ 45ಕ್ಕೆ2, ಕ್ಯಾಮರೂನ್ ವಾಲೆಂಟೆ 39ಕ್ಕೆ3, ಗಾಬೆ ಬೆಲ್ 34ಕ್ಕೆ3, ಮ್ಯಾಥ್ಯೂ ಫೋತಿಯಾ 46ಕ್ಕೆ2).

ಆಸ್ಟ್ರೇಲಿಯಾ 47.1 ಓವರ್‌ಗಳಲ್ಲಿ 174. (ಮ್ಯಾಥ್ಯೂ ಶಾರ್ಟ್ 30, ಬೆನ್ ಮೆಕ್‌ಡರ್ಮೆಟ್ 50, ಜಾಕೆ ಡೊರನ್ 21; ಕುಲದೀಪ್ ಯಾದವ್ 19ಕ್ಕೆ3, ಸರ್ಫ್‌ರಾಜ್ ಖಾನ್ 18ಕ್ಕೆ1). ಫಲಿತಾಂಶ: ಭಾರತಕ್ಕೆ 47 ರನ್ ಗೆಲುವು. ಪಂದ್ಯ ಶ್ರೇಷ್ಠ: ಅಂಕುಶ್  ಬೈನ್ಸ್  (ಭಾರತ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.