ADVERTISEMENT

ಕ್ರಿಕೆಟ್: ಭಾರತಕ್ಕೆ ರೋಚಕ ಗೆಲುವು

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 20:45 IST
Last Updated 18 ಜನವರಿ 2011, 20:45 IST

ಕೇಪ್‌ಟೌನ್: ದಕ್ಷಿಣ ಆಫ್ರಿಕಾ ನೆಲದಲ್ಲಿ ಏಕದಿನ ಕ್ರಿಕೆಟ್ ಸರಣಿ ಗೆಲ್ಲುವ ಕನಸನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ಕೇಪ್‌ಟೌನ್‌ನ ನ್ಯೂಲೆಂಡ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಎರಡು ವಿಕೆಟ್‌ಗಳ ರೋಚಕ ಗೆಲುವು ಪಡೆದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-1 ಅಂತರದ ಮಹತ್ವದ ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವನ್ನು 49.2 ಓವರುಗಳಲ್ಲಿ 220 ರನ್‌ಗಳಿಗೆ ನಿಯಂತ್ರಿಸಿದ ‘ಮಹಿ’ ಬಳಗ, 48.2 ಓವರ್‌ಗಳಲ್ಲಿ 8 ವಿಕೆಟ್‌ಗೆ 223 ರನ್ ಗಳಿಸಿ ಗೆಲುವಿನ ನಗು ಬೀರಿತು.

ಆಕರ್ಷಕ ಆಟವಾಡಿದ ಯೂಸುಫ್ ಪಠಾಣ್ (59, 50 ಎಸೆತ, 6 ಬೌಂ, 3 ಸಿಕ್ಸರ್) ಭಾರತದ ವಿಜಯಶಿಲ್ಪಿ ಎನಿಸಿದರು. ಕೊನೆಯಲ್ಲಿ ಒತ್ತಡವನ್ನು ಸಮರ್ಥವಾಗಿ ಮೆಟ್ಟಿನಿಂತು ಭಾರತವನ್ನು ಗೆಲುವಿನ ಗಡಿ ದಾಟಿಸಿದ ಹರಭಜನ್ ಸಿಂಗ್ (23, 25 ಎಸೆತ) ಅವರ ಕೊಡುಗೆಯನ್ನೂ ಮರೆಯಬಾರದು.

ADVERTISEMENT

ಜೊತೆಗೆ ಪ್ರಭಾವಿ ಬೌಲಿಂಗ್ ಪ್ರದರ್ಶನ ನೀಡಿದ ಜಹೀರ್ ಖಾನ್ (43ಕ್ಕೆ 3), ಹರಭಜನ್ ಸಿಂಗ್ (23ಕ್ಕೆ 2) ಮತ್ತು ಮುನಾಫ್ ಪಟೇಲ್ (42ಕ್ಕೆ 2) ಅವರಿಗೂ ಗೆಲುವಿನ ಕ್ರೆಡಿಟ್ ಸಲ್ಲಬೇಕು.

ಸಾಧಾರಣ ಗುರಿ ಬೆನ್ನಟ್ಟಿದ ಭಾರತ ಮುರಳಿ ವಿಜಯ್ (1) ಅವರನ್ನು ಎರಡನೇ ಓವರ್‌ನಲ್ಲೇ ಕಳೆದುಕೊಂಡಿತು. ರೋಹಿತ್ ಶರ್ಮ (45 ಎಸೆತಗಳಲ್ಲಿ 23) ಮತ್ತು ವಿರಾಟ್ ಕೊಹ್ಲಿ (41 ಎಸೆತಗಳಲ್ಲಿ 28) ಎರಡನೇ ವಿಕೆಟ್‌ಗೆ 52 ರನ್‌ಗಳ ಜೊತೆಯಾಟ ನೀಡಿದರು. ಆದರೆ ಆರು ರನ್‌ಗಳ ಅಂತರದಲ್ಲಿ ಇಬ್ಬರೂ ಪೆವಿಲಿಯನ್‌ಗೆ ಮರಳಿದರು.

ಬಳಿಕ ಬಂದ ಮಹೇಂದ್ರ ಸಿಂಗ್ ದೋನಿ ಮತ್ತು ಯುವರಾಜ್ ಸಿಂಗ್ ಔಟ್ ಆದಾಗ ಭಾರತದ ಮೊತ್ತ ಐದು ವಿಕೆಟ್‌ಗೆ 93. ಈ ಹಂತದಲ್ಲಿ ಗೆಲುವು ಕಠಿಣ ಎಂದು ಭಾವಿಸಲಾಗಿತ್ತು. ಆದರೆ ಯೂಸುಫ್ ಪಠಾಣ್ ಮತ್ತು ಸುರೇಶ್ ರೈನಾ (37, 47 ಎಸೆತ; 4 ಬೌಂ) ಆರನೇ ವಿಕೆಟ್‌ಗೆ 75 ರನ್‌ಗಳ ಜೊತೆಯಾಟ ನೀಡಿ ಭಾರತದ ಗೆಲುವಿನ ಕನಸಿಗೆ ಜೀವ ತುಂಬಿದರು.
ಬೋಥಾ ಎಸೆದ 30ನೇ ಓವರ್‌ನಲ್ಲಿ ಮೂರು ಸಿಕ್ಸರ್ ಸಿಡಿಸಿದ ಯೂಸುಫ್ ಪಠಾಣ್ ಪಂದ್ಯದ ಗತಿಯನ್ನು ಬದಲಿಸಿದರು. ಪಠಾಣ್ ಔಟಾದಾಗ ಭಾರತದ ಗೆಲುವಿಗೆ 39 ರನ್‌ಗಳ ಅಗತ್ಯವಿತ್ತು.

ಡುಮಿನಿ- ಪ್ಲೆಸ್ಸಿಸ್ ಆಸರೆ: ಇದಕ್ಕೂ ಮೊದಲು ಜೆನ್ ಪಾಲ್ ಡುಮಿನಿ ಮತ್ತು ಚೊಚ್ಚಲ ಏಕದಿನ ಪಂದ್ಯದಲ್ಲೇ ಅರ್ಧಶತಕ ಗಳಿಸಿದ ಫಾಫ್ ಡು ಪ್ಲೆಸ್ಸಿಸ್ ಅವರ ಉತ್ತಮ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ಸವಾಲಿನ ಮೊತ್ತ ಪೇರಿಸಿತ್ತು.

ಟಾಸ್ ಗೆದ್ದ ಗ್ರೇಮ್ ಸ್ಮಿತ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಐವತ್ತು ರನ್‌ಗಳ ಗಡಿ ದಾಟುವಷ್ಟರಲ್ಲಿ ಹಾಶೀಮ್ ಆಮ್ಲಾ ಹಾಗೂ ಕಾಲಿನ್ ಇನ್‌ಗ್ರಾಮ್ ನಿರ್ಗಮಿಸಿಯಾಗಿತ್ತು.

ಅಬ್ರಹಾಮ್ ಡಿ ವೀಲಿಯರ್ಸ್ ಕೂಡ ಇಪ್ಪತ್ತು ಎಸೆತಗಳಲ್ಲಿ ಗಳಿಸಿದ್ದು ಕೇವಲ 16 ರನ್. ಇಂಥ ಆತಂಕದ ಪರಿಸ್ಥಿತಿಯಲ್ಲಿ ಆರಂಭಿಕ ಆಟಗಾರ ಹಾಗೂ ನಾಯಕ ಗ್ರೇಮ್ ಸ್ಮಿತ್ (43; 102 ನಿ., 79 ಎ., 3 ಬೌಂಡರಿ) ಜಿಗುಟುತನ ತೋರಿದರು. ಅವರು ನಿರ್ಗಮಿಸುವ ಹೊತ್ತಿಗೆ ಆತಿಥೇಯ ತಂಡದ ಒಟ್ಟು ಮೊತ್ತ 90 ರನ್.

ನಾಲ್ಕು ವಿಕೆಟ್‌ಗಳು ಪತನಗೊಂಡ ನಂತರ ಇನ್ನೇನು ದಕ್ಷಿಣ ಆಫ್ರಿಕಾದ ಬಾಕಿ ಬ್ಯಾಟ್ಸ್‌ಮನ್‌ಗಳನ್ನು ಭಾರತದವರು ಬಹು ಬೇಗ ಕಟ್ಟಿಹಾಕುತ್ತಾರೆ ಎನ್ನುವ ನಿರೀಕ್ಷೆಯನ್ನೇ ಡುಮಿನಿ (52; 111 ನಿ., 59 ಎ., 2 ಬೌಂಡರಿ) ಮತ್ತು ಪ್ಲೆಸ್ಸಿಸ್ (60; 94 ನಿ., 78 ಎ., 2 ಬೌಂಡರಿ) ಹುಸಿಯಾಗಿಸಿದರು. ಐದನೇ ವಿಕೆಟ್‌ಗೆ ಬೆಲೆಯುಳ್ಳ ಜೊತೆಯಾಟವನ್ನು ನೂರರ ಗಡಿಯಾಚೆ (110 ರನ್) ವಿಸ್ತರಿಸಿದರು.

ಸ್ಮಿತ್ ಪೆವಿಲಿಯನ್‌ಗೆ ನಡೆದಾಗ ಮೊಟ್ಟ ಮೊದಲ ಏಕದಿನ ಪಂದ್ಯ ಆಡುವ ಉತ್ಸಾಹದಲ್ಲಿ ಕ್ರೀಸ್‌ಗೆ ಬಂದ ಪ್ಲೆಸ್ಸಿಸ್ ಪ್ರಭಾವಿ ಬ್ಯಾಟ್ಸ್‌ಮನ್ ಆಗಿ ಬೆಳೆಯುವ ಭರವಸೆಯ ಪ್ರಖರ ಕಿರಣ ಮೂಡುವಂತೆ ಮಾಡಿದರು. ಆಕ್ರಮಣಕಾರಿ ಆಟವಾಡದಿದ್ದರೂ, ಭಾರತದ ಬೌಲರ್‌ಗಳು ಚಡಪಡಿಸುವಂತೆ ಮಾಡುವಲ್ಲಿ ಯಶಸ್ವಿಯಾದರು. ಪ್ಲೆಸ್ಸಿಸ್ ಮತ್ತು ಡುಮಿನಿ ಜೊತೆಯಾಟಕ್ಕೆ ಅಂತ್ಯ ಹಾಡಲು ಪ್ರವಾಸಿ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ತಂಡದಲ್ಲಿದ್ದ ಪರಿಣತ ಹಾಗೂ ಸಾಂದರ್ಭಿಕ ಬೌಲರ್‌ಗಳನ್ನೆಲ್ಲಾ ಪ್ರಯೋಗಿಸಿದರು. ಆದರೆ ಯಶಸ್ಸು ಸಿಕ್ಕಿದ್ದು 45ನೇ ಓವರ್‌ನಲ್ಲಿ ದಾಳಿ ನಡೆಸಿದ ಮುನಾಫ್ ಪಟೇಲ್ ಎಸೆತದಲ್ಲಿ. ಡುಮಿನಿ ಕೂಡ ನಂತರದ ಓವರ್‌ನಲ್ಲಿ ಜಹೀರ್ ಖಾನ್‌ಗೆ ಬಲಿಯಾದರು.   

ಸ್ಕೋರ್  ವಿವರ

ದಕ್ಷಿಣ ಆಫ್ರಿಕಾ: 49.2  ಓವರುಗಳಲ್ಲಿ 220
ಗ್ರೇಮ್ ಸ್ಮಿತ್ ಸಿ ವಿರಾಟ್ ಕೊಹ್ಲಿ ಬಿ ಹರಭಜನ್ ಸಿಂಗ್     43
ಹಾಶೀಮ್ ಆಮ್ಲಾ ಬಿ ಜಹೀರ್ ಖಾನ್     16
ಕಾಲಿನ್ ಇನ್‌ಗ್ರಾಮ್ ಸಿ  ಕೊಹ್ಲಿ ಬಿ ಹರಭಜನ್ ಸಿಂಗ್     10
ಎಬಿ ಡಿವಿಲಿಯರ್ಸ್ ಸಿ ಜಹೀರ್ ಬಿ ಯೂಸುಫ್ ಪಠಾಣ್     16
ಜೆನ್ ಪಾಲ್ ಡುಮಿನಿ ಬಿ ಜಹೀರ್ ಖಾನ್     52
ಫಾಫ್ ಡು ಪ್ಲೆಸ್ಸಿಸ್ ಸಿ ಕೊಹ್ಲಿ ಬಿ ಮುನಾಫ್ ಪಟೇಲ್     60
ಜಾನ್ ಬೋಥಾ ಬಿ ಜಹೀರ್ ಖಾನ್     09
ವಯ್ನೆ ಪರ್ನೆಲ್ ರನ್‌ಔಟ್      05
ಡೆಲ್ ಸ್ಟೇನ್ ಸಿ ಸುರೇಶ್ ರೈನಾ ಬಿ ಮುನಾಫ್ ಪಟೇಲ್     05
ಮಾರ್ನ್ ಮಾರ್ಕೆಲ್ ಔಟಾಗದೆ     00
ಲಾನ್‌ವಾಬೊ ತ್ಸೊತ್ಸೊಬೆ ರನ್‌ಔಟ್      00

ಇತರೆ: (ವೈಡ್-4)     04
ವಿಕೆಟ್ ಪತನ: 1-31 (ಆಮ್ಲಾ; 6.5), 2-49 (ಇನ್‌ಗ್ರಾಮ್; 13.1), 3-83 (ವಿಲಿಯರ್ಸ್; 20.3), 4-90 (ಗ್ರೇಮ್ ಸ್ಮಿತ್; 23.2), 5-200 (ಪ್ಲೆಸ್ಸಿಸ್; 44.5), 6-202 (ಡುಮಿನಿ; 45.2), 7-207 (ಪರ್ನೆಲ್; 45.5), 8-216 ( ಸ್ಟೇನ್; 48.1), 9-219 (ಬೋಥಾ; 49.1), 10-220 (ತ್ಸೊತ್ಸೊಬೆ; 49.2).

ಬೌಲಿಂಗ್: ಜಹೀರ್ ಖಾನ್ 9.2-0-43-3, ಮುನಾಫ್ ಪಟೇಲ್ 10-1-42-2, ಆಶಿಶ್ ನೆಹ್ರಾ 7-0-42-0, ಹರಭಜನ್ ಸಿಂಗ್ 9-1-23-2, ಯೂಸುಫ್ ಪಠಾಣ್ 6-0-27-1, ಯುವರಾಜ್ ಸಿಂಗ್ 6-0-30-0, ರೋಹಿತ್ ಶರ್ಮ 1-0-5-0, ಸುರೇಶ್ ರೈನಾ 1-0-8-0

ಭಾರತ: 48.2 ಓವರ್‌ಗಳಲ್ಲಿ 8 ವಿಕೆಟ್‌ಗೆ 223
ರೋಹಿತ್ ಶರ್ಮ ಬಿ ಮಾರ್ನ್ ಮಾರ್ಕೆಲ್     23
ಮುರಳಿ ವಿಜಯ್ ಸಿ ಮತ್ತು ಬಿ ಡೆಲ್ ಸ್ಟೇನ್     01
ವಿರಾಟ್ ಕೊಹ್ಲಿ ಸಿ ವಿಲಿಯರ್ಸ್ ಬಿ ಮಾರ್ನ್ ಮಾರ್ಕೆಲ್     28
ಯುವರಾಜ್ ಸಿಂಗ್ ಎಲ್‌ಬಿಡಬ್ಲ್ಯು ಬಿ ಡುಮಿನಿ     16
ಮಹೇಂದ್ರ ಸಿಂಗ್ ದೋನಿ ಸಿ ವಿಲಿಯರ್ಸ್ ಬಿ ಜಾನ್ ಬೋಥಾ 05
ಸುರೇಶ್ ರೈನಾ ಸಿ ಡಿವಿಲಿಯರ್ಸ್ ಬಿ ಮಾರ್ನ್ ಮಾರ್ಕೆಲ್     37
ಯೂಸುಫ್ ಪಠಾಣ್ ಸಿ ಮಾರ್ಕೆಲ್ ಬಿ ಡೆಲ್ ಸ್ಟೇನ್     59
ಹರಭಜನ್ ಸಿಂಗ್ ಔಟಾಗದೆ     23
ಜಹೀರ್ ಖಾನ್ ಸಿ ಸ್ಮಿತ್ ಬಿ ಲಾನ್‌ವಾಬೊ ತ್ಸೊತ್ಸೊಬೆ     14
ಆಶೀಶ್ ನೆಹ್ರಾ ಔಟಾಗದೆ     06

ಇತರೆ: (ಲೆಗ್ ಬೈ-5, ವೈಡ್-6)     11
ವಿಕೆಟ್ ಪತನ: 1-4 (ವಿಜಯ್; 2.2), 2-56 (ಕೊಹ್ಲಿ; 14.6), 3-61 (ರೋಹಿತ್; 16.3), 4-69 (ದೋನಿ; 19.5), 5-93 (ಯುವರಾಜ್; 24.3), 6-168 (ರೈನಾ; 36.4), 7-182 (ಪಠಾಣ್; 39.5), 8-208 (ಜಹೀರ್; 45.5).
ಬೌಲಿಂಗ್: ಡೆಲ್ ಸ್ಟೇನ್ 10-1-31-2, ಲಾನ್‌ವಾಬೊ ತ್ಸೊತ್ಸೊಬೆ 10-0-41-1, ವಯ್ನೆ ಪರ್ನೆಲ್ 8-0-53-0, ಮಾರ್ನ್ ಮಾರ್ಕೆಲ್ 10-0-28-3, ಜಾನ್ ಬೋಥಾ 7.2-1-48-1, ಜೆಪಿ ಡುಮಿನಿ 2-0-9-1, ಫಾಫ್ ಡು ಪ್ಲೆಸ್ಸಿಸ್ 1-0-8-0
ಫಲಿತಾಂಶ: ಭಾರತಕ್ಕೆ 2 ವಿಕೆಟ್ ಜಯ; ಸರಣಿಯಲ್ಲಿ 2-1ರ ಮುನ್ನಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.