ADVERTISEMENT

ಕ್ರಿಕೆಟ್: ಭಾರತದ ಮೇಲೆ ಬೃಹತ್ ಮೊತ್ತದ ಹೊರೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 19:30 IST
Last Updated 25 ಜನವರಿ 2012, 19:30 IST
ಕ್ರಿಕೆಟ್: ಭಾರತದ ಮೇಲೆ ಬೃಹತ್ ಮೊತ್ತದ ಹೊರೆ
ಕ್ರಿಕೆಟ್: ಭಾರತದ ಮೇಲೆ ಬೃಹತ್ ಮೊತ್ತದ ಹೊರೆ   

ಅಡಿಲೇಡ್: ಕಾಂಗರೂಗಳ ಓಟದಷ್ಟೇ ಉತ್ಸಾಹದಾಯಕ ಆಟ ಆಸ್ಟ್ರೇಲಿಯಾ ತಂಡದ್ದು. ಮೊದಲ ಟೆಸ್ಟ್‌ನಿಂದ ಕೊನೆಯ ಟೆಸ್ಟ್‌ವರೆಗೂ ಉತ್ತಮ ಗತಿಯನ್ನು ಕಾಯ್ದುಕೊಂಡು ಬಂದಿದೆ. ಅಡಿಲೇಡ್ ಓವಲ್‌ನಲ್ಲಿ ಗಳಿಸಿದ್ದು ಆರನೂರಕ್ಕೂ ಅಧಿಕ ರನ್. ಇದೇ ಭಾರತ ತಂಡದ ಮೇಲೆ ಬಿದ್ದಿರುವ ದೊಡ್ಡ `ಹೊರೆ~.

ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಶತಕ ಸಾಧನೆ ಕೈಗೆಟುಕದ ಹಣ್ಣಾಗಿದ್ದರೆ; ಆತಿಥೇಯ ಆಟಗಾರರಿಗೆ ದ್ವಿಶತಕವೂ ಕಷ್ಟದ್ದಾಗಿಲ್ಲ. ಸಿಡ್ನಿ    ಟೆಸ್ಟ್‌ನಲ್ಲಿ ತ್ರಿಶತಕ ಗಳಿಸಿದ್ದ ಮೈಕಲ್ ಕ್ಲಾರ್ಕ್ ಇಲ್ಲಿ ಇನ್ನೂರರ ಗಡಿ ದಾಟಿ ಬೆಳೆದರು. ಈ ಹಾಲಿ ನಾಯಕನಿಗೆ ತಕ್ಕ ಜೊತೆಗಾರರಾಗಿ ನಿಂತ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರದ್ದೂ ದ್ವಿಶತಕದಾಟ. ಆದರೆ ಎದುರಾಳಿ ಭಾರತದ್ದು ಮಾತ್ರ ಕೊನೆಗೊಳ್ಳದ ಪರಿದಾಟ.

ಕೇವಲ ಏಳು ವಿಕೆಟ್ ಕಳೆದುಕೊಂಡು 604 ರನ್ ಪೇರಿಸಿ ಪ್ರಥಮ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಕ್ಲಾರ್ಕ್ ನೇತೃತ್ವದ ತಂಡವು ಮತ್ತೊಂದು ಇನಿಂಗ್ಸ್ ಗೆಲುವಿನ ಕನಸು ಕಂಡಿದೆ. `ವೀರೂ~ ನಾಯಕತ್ವದ ಪಡೆಯ ಮನಸ್ಸು ಮಾತ್ರ ಹಾಗೆಯೇ ಮುದುಡಿಕೊಂಡಿದೆ. ಎರಡು ವಿಕೆಟ್‌ಗಳು ಬೇಗ ಪತನವಾಗಿದ್ದೇ ಭಾರತಕ್ಕೆ ಸಹಿಸದ ಆಘಾತ.
 
ಎರಡನೇ ದಿನದಾಟಕ್ಕೆ ತೆರೆ ಬೀಳುವ ಹೊತ್ತಿಗೆ ಗಳಿಸಿದ್ದು ಕೇವಲ 61 ರನ್. ಆಸ್ಟ್ರೇಲಿಯಾದ ಬಾಕಿ ಚುಕ್ತಾ ಮಾಡಲು ಇನ್ನೂ 543 ರನ್‌ಗಳು ಬೇಕು. ಇನಿಂಗ್ಸ್ ಬೆನ್ನಟ್ಟುವ ಒತ್ತಡದಿಂದ ತಪ್ಪಿಸಿಕೊಳ್ಳುವುದೇ ಈಗಿರುವ ಸವಾಲು. ನಂತರ ಇನಿಂಗ್ಸ್ ಮುನ್ನಡೆಯ ಅಸಾಧ್ಯವೆನಿಸುವ ಆಸೆಯು ಚಿಗುರೊಡೆಯಲು ಸಾಧ್ಯ.

ಮಂಗಳವಾರದ ಆಟದಲ್ಲಿ ಮೂರು ವಿಕೆಟ್ ಕಳೆದುಕೊಂಡು 335 ರನ್ ಗಳಿಸಿದ್ದ ಆಸ್ಟ್ರೇಲಿಯಾ ದೊಡ್ಡ ಮೊತ್ತದ ಸವಾಲನ್ನು ಭಾರತದ ಮುಂದಿಡುವಲ್ಲಿ ಯಶಸ್ವಿ. ಪಾಂಟಿಂಗ್ (221; 516 ನಿಮಿಷ, 404 ಎಸೆತ, 21 ಬೌಂಡರಿ) ಹಾಗೂ ಕ್ಲಾರ್ಕ್ (210; 380 ನಿ., 275 ಎ., 26 ಬೌಂಡರಿ, 1 ಸಿಕ್ಸರ್) ನಡುವಣ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 386 ರನ್ ಹರಿದು ಬಂದಾಗಲೇ ಆಸೀಸ್ ವಿಜಯದ ಆಸೆಯ ಹಕ್ಕಿಯ ರೆಕ್ಕೆ ಬಲಿತಿವೆ.

ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸ ಕಂಡ ನಾಲ್ಕನೇ ವಿಕೆಟ್‌ನಲ್ಲಿನ ಎರಡನೇ ಅದ್ಭುತ ಜೊತೆಯಾಟ ರಿಕಿ-ಮೈಕಲ್ ಅವರದ್ದು. ಇನ್ನು ಮೂರು ರನ್ ಕಲೆಹಾಕಿದ್ದರೆ ಸರ್ ಡಾನ್ ಬ್ರಾಡ್ಮನ್ ಮತ್ತು ಬಿಲ್ ಪೊನ್ಸ್‌ಫೋರ್ಡ್ (388 ರನ್; ಇಂಗ್ಲೆಂಡ್ ವಿರುದ್ಧ ಹೆಡಿಂಗ್ಲೆಯಲ್ಲಿ; 1934) ಅವರ ದಾಖಲೆ ಮುರಿಯಬಹುದಿತ್ತು.

ಆದರೆ ಉಮೇಶ್ ಯಾದವ್ ಎಸೆತದಲ್ಲಿ  ಕ್ಲಾರ್ ಬೌಲ್ಡ್ ಆದರು. ಅಲ್ಲಿಗೆ ಮಹತ್ವದ ಜೊತೆಯಾಟಕ್ಕೂ ತೆರೆ. ಆದರೆ ಪಾಂಟಿಂಗ್ ತಮ್ಮ ತಂಡವನ್ನು ಐನೂರರ ಗಡಿ ದಾಟಿಸುವವರೆಗೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತರು.

ಚೆಂಡನ್ನು ಎತ್ತರದಲ್ಲಿ ಹೊಡೆಯುವುದೇ ಇಲ್ಲವೆಂದು ಪಣತೊಟ್ಟವರಂತೆ ಆಡಿದ ಪಾಂಟಿಂಗ್ ಇನಿಂಗ್ಸ್ ಬೆಳೆಸಿದ ರೀತಿ ಮೆಚ್ಚುವಂಥದು. ಸಿಕ್ಸರ್ ಸಿಡಿಸುವ ಸಾಹಸ ಮಾಡದಿದ್ದರೂ ಅವರು ಕವರ್, ಸ್ಕ್ವೇರ್ ಲೆಗ್, ಮಿಡ್‌ವಿಕೆಟ್‌ನಲ್ಲಿದ್ದ ಕ್ಷೇತ್ರ ರಕ್ಷಕರ ಮೇಲಿಂದ ಚೆಂಡನ್ನು ಬೌಂಡರಿಗೆ ಅಟ್ಟಿದ್ದು ವಿಶೇಷ.

ಪುಟಿದೆದ್ದ ಚೆಂಡನ್ನು ಬಹಳ ಎಚ್ಚರಿಕೆಯಿಂದಲೇ ಕೆಣಕುತ್ತಿದ್ದ `ಪಂಟರ್~ ಪುಲ್ ಶಾಟ್ ಪ್ರಯೋಗಿಸುವಾಗ ಕಷ್ಟಪಟ್ಟರು. ಇಂಥದೇ ಪ್ರಯತ್ನದಲ್ಲಿ ಅವರು ಡೀಪ್ ಮಿಡ್‌ವಿಕೆಟ್‌ನಲ್ಲಿದ್ದ ಸಚಿನ್ ತೆಂಡೂಲ್ಕರ್‌ಗೆ ಕ್ಯಾಚಿತ್ತರು. ಆ ಹೊತ್ತಿಗಾಗಲೇ ಆಸ್ಟ್ರೇಲಿಯಾದ ಒಟ್ಟು ಮೊತ್ತ 530 ರನ್.

ಔಟಾಗದೆ ಉಳಿದ ಬ್ರಾಡ್ ಹಡ್ಡಿನ್ (42; 92 ನಿ., 66 ಎ., 1 ಬೌಂಡರಿ, 2 ಸಿಕ್ಸರ್) ಹಾಗೂ ರ‌್ಯಾನ್ ಹ್ಯಾರಿಸ್ (35; 64 ನಿ., 51 ಎ., 2 ಬೌಂಡರಿ, 1 ಸಿಕ್ಸರ್) ತಮ್ಮ ತಂಡವನ್ನು ಆರನೂರು ರನ್‌ಗಳ ಗಡಿ ದಾಟಿಸಿದರು. ಆಗಲೇ ನಾಯಕ ಕ್ಲಾರ್ಕ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ನಿರ್ಧಾರ ಪ್ರಕಟಿಸಿದರು. ಅಷ್ಟು ಹೊತ್ತಿಗಾಗಲೇ ಭಾರತದ ಬೌಲರ್‌ಗಳು ಬೆವರಿ ಸುಸ್ತು. ಕಾಂಗರೂಗಳನ್ನು ಆಲ್‌ಔಟ್ ಮಾಡುವ ಕನಸು ಕನಸಾಗಿಯೇ ಉಳಿಯಿತು.

ಬೌಲಿಂಗ್‌ನಲ್ಲಿ ಆದ ನಿರಾಸೆಯನ್ನು ಬ್ಯಾಟಿಂಗ್‌ನಲ್ಲಿ ಚೇತರಿಸಿಕೊಂಡು ಮರೆಯುವ ಆಸೆ ಹೊಂದಿದ್ದ ಭಾರತಕ್ಕೆ ಆರಂಭದಲ್ಲಿಯೇ ಆಘಾತ. ಸೆಹ್ವಾಗ್ ನೇರವಾಗಿ ಆಡುವ ಯತ್ನದಲ್ಲಿ ಪೀಟರ್ ಸಿಡ್ಲ್ ಎಸೆತದಲ್ಲಿ ಅವರಿಗೇ ಕ್ಯಾಚಿತ್ತರು. ರಾಹುಲ್ ದ್ರಾವಿಡ್ ವಿಕೆಟ್ ಒಪ್ಪಿಸಿದ ರೀತಿ ಮಾತ್ರ ಆಘಾತಕಾರಿ.

ಬೆನ್ ಹಿಲ್ಫೆನ್ಹಾಸ್ ಎಸೆದ ಚೆಂಡನ್ನು ಕೆಣಕದೆಯೇ ಸುಮ್ಮನೇ ಹೋಗಲು ಬಿಟ್ಟರು. ಆಗಲೇ ನಡೆಯಿತೊಂದು ದುರಂತ. ಚೆಂಡು ಅವರ ಮೊಣಕೈಗೆ ತಾಗಿ ಕೆಲಮುಖವಾಗಿ ನುಗ್ಗಿ ಸ್ಟಂಪ್‌ಗೆ ಅಪ್ಪಳಿಸಿತು. ತಮ್ಮನ್ನು ತಾವೇ ಹಳಿದುಕೊಳ್ಳುತ್ತಾ ರಾಹುಲ್ ಪೆವಿಲಿಯನ್ ಕಡೆಗೆ ನಡೆದರು.

ಆರಂಭಿಕ ಆಟಗಾರ ಗೌತಮ್ ಗಂಭೀರ್ (30; 56 ಎ., 4 ಬೌಂಡರಿ) ಜೊತೆಗೂಡಿದ ಅನುಭವಿ ಬ್ಯಾಟ್ಸ್‌ಮನ್ ಸಚಿನ್ (12; 43 ಎ., 1 ಬೌಂಡರಿ) ಅವರು ವಿಕೆಟ್ ಕಾಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಿದರು. ದಿನದ ಕೊನೆಯಲ್ಲಿ ಮತ್ತೊಂದು ವಿಕೆಟ್ ಒಪ್ಪಿಸಬಾರದೆಂದು ನಿರ್ಧರಿಸಿಕೊಂಡು ಆಡಿದ ಗಂಭೀರ್ ಮತ್ತು ಸಚಿನ್ ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ ಮೂವತ್ತು ರನ್ ಕಲೆಹಾಕಿದರು.

ಸ್ಕೋರ್ ವಿವರ:
ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್ 157 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 604 ಡಿಕ್ಲೇರ್ಡ್‌
(ಮಂಗಳವಾರದ ಆಟದಲ್ಲಿ: 90 ಓವರುಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 335)
ರಿಕಿ ಪಾಂಟಿಂಗ್ ಸಿ ಸಚಿನ್ ತೆಂಡೂಲ್ಕರ್ ಬಿ ಜಹೀರ್ ಖಾನ್  221
ಮೈಕಲ್ ಕ್ಲಾರ್ಕ್ ಬಿ ಉಮೇಶ್ ಯಾದವ್  210
ಮೈಕಲ್ ಹಸ್ಸಿ ರನ್‌ಔಟ್ (ಗೌತಮ್ ಗಂಭೀರ್)  25
ಬ್ರಾಡ್ ಹಡ್ಡಿನ್ ಔಟಾಗದೆ  42
ಪೀಟರ್ ಸಿಡ್ಲ್ ಸಿ ವೃದ್ಧಿಮಾನ್ ಸಹಾ ಬಿ ರವಿಚಂದ್ರನ್ ಅಶ್ವಿನ್  02
ರ‌್ಯಾನ್ ಹ್ಯಾರಿಸ್ ಔಟಾಗದೆ  35
ಇತರೆ: (ಬೈ-3, ಲೆಗ್‌ಬೈ-17, ವೈಡ್-8)  28
ವಿಕೆಟ್ ಪತನ: 1-26 (ಡೇವಿಡ್ ವಾರ್ನರ್; 6.5), 2-31 (ಶಾನ್ ಮಾರ್ಷ್; 9.6), 3-84 (ಎಡ್ ಕೋವನ್; 25.5), 4-470 (ಮೈಕಲ್ ಕ್ಲಾರ್ಕ್; 120.3), 5-520 (ಮೈಕಲ್ ಹಸ್ಸಿ; 133.6), 6-530 (ರಿಕಿ ಪಾಂಟಿಂಗ್; 136.1), 7-533 (ಪೀಟರ್ ಸಿಡ್ಲ್; 139.6).
ಬೌಲಿಂಗ್: ಜಹೀರ್ ಖಾನ್ 31-4-96-2 (ವೈಡ್-2), ಉಮೇಶ್ ಯಾದವ್ 26-1-136-1 (ವೈಡ್-1), ರವಿಚಂದ್ರನ್ ಅಶ್ವಿನ್ 53-6-194-3, ಇಶಾಂತ್ ಶರ್ಮ 30-6-100-0, ವೀರೇಂದ್ರ ಸೆಹ್ವಾಗ್ 16-0-55-0, ವಿರಾಟ್ ಕೊಹ್ಲಿ 1-0-3-0
ಭಾರತ: ಪ್ರಥಮ ಇನಿಂಗ್ಸ್ 21 ಓವರುಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 61
ಗೌತಮ್ ಗಂಭೀರ್ ಬ್ಯಾಟಿಂಗ್  30
ವೀರೇಂದ್ರ ಸೆಹ್ವಾಗ್ ಸಿ ಮತ್ತು ಬಿ ಪೀಟರ್ ಸಿಡ್ಲ್  18
ರಾಹುಲ್ ದ್ರಾವಿಡ್ ಬಿ ಬೆನ್ ಹಿಲ್ಫೆನ್ಹಾಸ್  01
ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್  12
ವಿಕೆಟ್ ಪತನ: 1-26 (ವೀರೇಂದ್ರ ಸೆಹ್ವಾಗ್; 5.1), 2-31 (ರಾಹುಲ್ ದ್ರಾವಿಡ್; 6.6).
ಬೌಲಿಂಗ್: ರ‌್ಯಾನ್ ಹ್ಯಾರಿಸ್ 6-2-18-0, ಬೆನ್ ಹಿಲ್ಫೆನ್ಹಾಸ್ 6-1-21-1, ಪೀಟರ್ ಸಿಡ್ಲ್ 3-0-13-1, ನಥಾನ್ ಲಿಯಾನ್ 5-2-9-0, ಮೈಕಲ್ ಕ್ಲಾರ್ಕ್ 1-1-0-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.