ADVERTISEMENT

ಕ್ರಿಕೆಟ್: ವೆಸ್ಟ್‌ಇಂಡೀಸ್ ನೆರವಿಗೆ ನಿಂತ ರಸೆಲ್

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 19:30 IST
Last Updated 11 ಜೂನ್ 2011, 19:30 IST

ಆ್ಯಂಟಿಗುವಾ: ವೆಸ್ಟ್‌ಇಂಡೀಸ್ ತಂಡ ಇಷ್ಟು ಮೊತ್ತ ಕಲೆಹಾಕಬಹುದು ಎಂದು ಖಂಡಿತ ಯಾರೂ ಊಹಿಸಿರಲಿಲ್ಲ. ಅದಕ್ಕೆ ಕಾರಣ ಕೆರಿಬಿಯನ್ ನಾಡಿನ ತಂಡ ಒಂದು ಹಂತದಲ್ಲಿ ಕೇವಲ 96 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು.

ಆದರೆ ಈ ಹಂತದಲ್ಲಿ ಕ್ರೀಸ್‌ಗೆ ಬಂದ ಆ್ಯಂಡ್ರೆ ರಸೆಲ್ (ಅಜೇಯ 92; 64 ಎಸೆತ, 8 ಬೌಂ. 5 ಸಿ.) ಪಂದ್ಯಕ್ಕೆ ಒಂದು ರೋಚಕ ತಿರುವು ನೀಡಿದರು. ಹಾಗಾಗಿ ಭಾರತದ ಬೌಲರ್‌ಗಳ ಯೋಜನೆ ಹಾಗೂ ಪ್ರಯತ್ನವೆಲ್ಲಾ ತಲೆಕೆಳಗಾಗಿ ಹೋದವು.

ಇದು ನಡೆದಿದ್ದು ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ. ರಸೆಲ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದಾಗಿ ಆತಿಥೇಯ ವಿಂಡೀಸ್ ತಂಡದವರು ಭಾರತ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಲು ಸಾಧ್ಯವಾಯಿತು.

ಈ ಗುರಿಯನ್ನು ಬೆನ್ನಟ್ಟಿರುವ ಭಾರತ ತಂಡ ಗೆಲುವಿಗಾಗಿ ಹೋರಾಟ ನಡೆಸಿದೆ. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ ಸುರೇಶ್ ರೈನಾ ಬಳಗ 32 ಓವರ್‌ಗಳಲ್ಲಿ 6 ವಿಕೆಟ್‌ಗೆ 129 ರನ್ ಗಳಿಸಿತ್ತು. ರೋಹಿತ್ ಶರ್ಮ (45) ಮತ್ತು ಹರಭಜನ್ ಸಿಂಗ್ (13) ಅವರು ಕ್ರೀಸ್‌ನಲ್ಲಿದ್ದರು. ರೋಹಿತ್ ಮೇಲೆ ತಂಡದ ಭರವಸೆ ನಿಂತಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆಹ್ವಾನ ಪಡೆದ ವಿಂಡೀಸ್ ಒಂದು ಹಂತದಲ್ಲಿ 14.4 ಓವರ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿತ್ತು. ಆದರೆ ಇದಕ್ಕೆ ಇನ್ನು 32 ರನ್ ಸೇರಿಸುವಷ್ಟರಲ್ಲಿ ಆರು ವಿಕೆಟ್‌ಗಳು ಉರುಳಿ ಹೋದವು.

ಈ ಹಂತದಲ್ಲಿ ಕಾರ್ಲಟನ್ ಬಾಗ್ (36) ಹಾಗೂ ರಸೆಲ್ ಎಂಟನೇ ವಿಕೆಟ್‌ಗೆ 78 ರನ್ ಸೇರಿಸಿದರು. ಕೊನೆಯಲ್ಲಿ ರಸೆಲ್ ಮತ್ತಷ್ಟು ಅಬ್ಬರಿಸಿದರು. ನಾಯಕ ರೈನಾ ಅವರ ಒಂದು ಓವರ್‌ನಲ್ಲಿ 22 ರನ್ ಸಿಡಿಸಿದರು. ಅಷ್ಟು ಮಾತ್ರವಲ್ಲದೇ, ಮುರಿಯದ 9ನೇ ವಿಕೆಟ್ ಜೊತೆಯಾಟದಲ್ಲಿ 51 ರನ್ ಸೇರಿಸಿದರು.
ಹಾಗಾಗಿ ಅಮಿತ್ ಮಿಶ್ರಾ (28ಕ್ಕೆ3) ಹಾಗೂ ಹರಭಜನ್ ಸಿಂಗ್ (24ಕ್ಕೆ1) ಅವರು ಆರಂಭದಲ್ಲಿ ಎದುರಾಳಿಯನ್ನು ನಿಯಂತ್ರಿಸಿದ್ದು ವ್ಯರ್ಥವಾಯಿತು.

ಸ್ಕೋರು ವಿವರ
ವೆಸ್ಟ್ ಇಂಡೀಸ್: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 225
ಲೆಂಡ್ಲ್ ಸಿಮನ್ಸ್ ಸಿ ವಿರಾಟ್ ಕೊಹ್ಲಿ ಬಿ ಅಮಿತ್ ಮಿಶ್ರಾ     45
ಕಿರ್ಕ್ ಎಡ್ವರ್ಡ್ಸ್ ಸಿ ಪಾರ್ಥಿವ್ ಪಾಟೀಲ್ ಬಿ ಮುನಾಫ್ ಪಟೇಲ್     00
ರಾಮನರೇಶ ಸರವಣ ರನೌಟ್ (ಪಾರ್ಥಿವ್/ರೈನಾ)     28

ಮಾರ್ಲೊನ್ ಸ್ಯಾಮುಯೆಲ್ಸ್ ಸ್ಟಂಪ್ಡ್ ಪಾರ್ಥಿವ್ ಪಟೇಲ್ ಬಿ ಅಮಿತ್ ಮಿಶ್ರಾ     01
ಡಾಂಜಾ ಹಯಾಟ್ ಬಿ ಅಮಿತ್ ಮಿಶ್ರಾ     01
ಕೀರನ್ ಪೊಲಾರ್ಡ್ ಸಿ ಪಾರ್ಥಿವ್ ಪಟೇಲ್ ಬಿ ಹರಭಜನ್ ಸಿಂಗ್     06
ಕಾರ್ಲಟನ್ ಬಾಗ್ ಸಿ ಶಿಖರ್ ಧವನ್ ಬಿ ಮುನಾಫ್ ಪಟೇಲ್     36

ಡೆರನ್ ಸಮಿ ಸಿ ಪಾರ್ಥಿವ್ ಪಟೇಲ್ ಬಿ ಮುನಾಫ್ ಪಟೇಲ್     03
ಆ್ಯಂಡ್ರೆ ರಸೆಲ್ ಔಟಾಗದೆ     92
ಕೆಮರ್ ರಾಚ್ ಔಟಾಗದೆ     07

ಇತರೆ (ಲೆಗ್‌ಬೈ-2, ವೈಡ್-4)     06

ವಿಕೆಟ್ ಪತನ: 1-0 (ಎಡ್ವರ್ಡ್ಸ್; 1.2); 2-65 (ಸರವಣ; 14.5); 3-70 (ಸ್ಯಾಮುಯೆಲ್ಸ್; 17.4); 4-74 (ಹಯಾಟ್; 19.5); 5-77 (ಸಿಮಾನ್ಸ್ ; 21.1); 6-85 (ಪೊಲಾರ್ಡ್; 24.4); 7-96 (ಸಮಿ; 29.3); 8-174 (ಬಾಗ್; 45.2).

ಬೌಲಿಂಗ್: ಪ್ರವೀಣ್ ಕುಮಾರ್ 10-1-46-0, ಮುನಾಫ್ ಪಟೇಲ್ 10-1-60-3 (ವೈಡ್-2), ಅಮಿತ್ ಮಿಶ್ರಾ 10-2-28-3, ಹರಭಜನ್ ಸಿಂಗ್ 10-2-24-1 (ವೈಡ್-2), ಯೂಸುಫ್ ಪಠಾಣ್ 5-0-27-0, ವಿರಾಟ್ ಕೊಹ್ಲಿ 1-0-7-0, ಸುರೇಶ್ ರೈನಾ 4-0-31-0
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.