ADVERTISEMENT

ಕ್ರಿಕೆಟ್: ಶಮಿ ಅಹ್ಮದ್, ರಾಹುಲ್ ಪ್ರಭಾವಿ ಬೌಲಿಂಗ್;ವೆಸ್ಟ್ ಇಂಡೀಸ್ ಎ ಸಾಧಾರಣ ಮೊತ್ತ

​ಪ್ರಜಾವಾಣಿ ವಾರ್ತೆ
Published 3 ಜೂನ್ 2012, 19:30 IST
Last Updated 3 ಜೂನ್ 2012, 19:30 IST

ಬ್ರಿಜ್‌ಟೌನ್ (ಪಿಟಿಐ): ಶಮಿ ಅಹ್ಮದ್ (43ಕ್ಕೆ 3) ಮತ್ತು ರಾಹುಲ್ ಶರ್ಮ (73ಕ್ಕೆ 3) ತೋರಿದ ಸಮರ್ಥ ಬೌಲಿಂಗ್ ನೆರವಿನಿಂದ ಭಾರತ `ಎ~ ತಂಡ ಇಲ್ಲಿ ಆರಂಭವಾದ ನಾಲ್ಕು ದಿನಗಳ    ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ `ಎ~ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದೆ.

ಬ್ರಿಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಮೊದಲ ದಿನವಾದ ಶನಿವಾರ ವೆಸ್ಟ್ ಇಂಡೀಸ್ 87.3 ಓವರ್‌ಗಳಲ್ಲಿ 252 ರನ್‌ಗಳಿಗೆ ಆಲೌಟಾಯಿತು. ನಾಯಕ ವೀರಸ್ವಾಮಿ ಪೆರುಮಾಳ್ (66) ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಡೆವೊನ್ ಥಾಮಸ್ (57) ಅವರ ಆಟ ಇಲ್ಲದೇ ಇರುತ್ತಿದ್ದಲ್ಲಿ, ಆತಿಥೇಯ ತಂಡ ಅಲ್ಪ ಮೊತ್ತಕ್ಕೆ ಕುಸಿಯುವ ಸಾಧ್ಯತೆಯಿತ್ತು.

ಟಾಸ್ ಗೆದ್ದ ಭಾರತ ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಕಳುಹಿಸಿತು. 36 ರನ್ ಗಳಿಸುವಷ್ಟರಲ್ಲಿ ಈ ತಂಡ ಮೂರು ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕ್ರೆಗ್ ಬ್ರಾಥ್‌ವೈಟ್ (11) ಮತ್ತು ಲೆಂಡ್ಲ್ ಸಿಮಾನ್ಸ್ (11) ಹೆಚ್ಚು ಹೊತ್ತು ನಿಲ್ಲಲಿಲ್ಲ. ಇವರು ಕ್ರಮವಾಗಿ ಶಮಿ ಮತ್ತು ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು.

ಎನ್. ಬಾನೆರ್ ಹಾಗೂ ಜೊನಾಥನ್ ಕಾರ್ಟರ್ ನಾಲ್ಕನೇ ವಿಕೆಟ್‌ಗೆ 44 ರನ್‌ಗಳನ್ನು ಸೇರಿಸಿದರಾದರೂ ತಂಡ ಆ ಬಳಿಕ ಕುಸಿತದ ಹಾದಿ ಹಿಡಿಯಿತು. ತಂಡ ಮೊತ್ತ 126 ಆಗಿದ್ದಾಗ ಏಳು ವಿಕೆಟ್‌ಗಳು ಉರುಳಿದ್ದವು. ಆದರೆ ವೀರಸ್ವಾಮಿ ಮತ್ತು ಥಾಮಸ್ ಎಂಟನೇ ವಿಕೆಟ್‌ಗೆ 92 ರನ್ ಸೇರಿಸಿ ಭಾರತದ ಬೌಲರ್‌ಗಳನ್ನು ಕಾಡಿದರು.

ಸಂಕ್ಷಿಪ್ತ ಸ್ಕೋರ್: ವೆಸ್ಟ್ ಇಂಡೀಸ್ `ಎ~: ಮೊದಲ ಇನಿಂಗ್ಸ್ 87.3 ಓವರ್‌ಗಳಲ್ಲಿ 252 (ಜೊನಾಥನ್ ಕಾರ್ಟರ್ 35, ಡೆವೊನ್ ಥಾಮಸ್ 57, ವೀರಸ್ವಾಮಿ ಪೆರುಮಾಳ್ 66, ಶಮಿ ಅಹ್ಮದ್ 43ಕ್ಕೆ 3, ರಾಹುಲ್ ಶರ್ಮ 73ಕ್ಕೆ 3, ಭುವನೇಶ್ವರ್ ಕುಮಾರ್ 42ಕ್ಕೆ 2, ರೋಹಿತ್ ಶರ್ಮ 44ಕ್ಕೆ 1, ಅಶೋಕ್ ದಿಂಡಾ 41ಕ್ಕೆ 1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.