ADVERTISEMENT

ಕ್ರೀಡಾಂಗಣದ ವ್ಯವಸ್ಥೆ ಬಗ್ಗೆ ಮೆಚ್ಚುಗೆ

ಕ್ರಿಕೆಟ್: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಟಿ-20 ಪಂದ್ಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 19:40 IST
Last Updated 3 ಡಿಸೆಂಬರ್ 2012, 19:40 IST

ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಡಿಸೆಂಬರ್ 25ರಂದು ಉದ್ಯಾನನಗರಿಯಲ್ಲಿ ನಡೆಯಲಿರುವ ಟ್ವೆಂಟಿ-20 ಕ್ರಿಕೆಟ್ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣವನ್ನು ಉತ್ತಮ ರೀತಿಯಲ್ಲಿ ಸಜ್ಜುಗೊಳಿಸಲಾಗಿದೆ ಎಂದು ನಾಲ್ವರು ಸದಸ್ಯರನ್ನೊಳಗೊಂಡ ಪಾಕ್ ಅಧಿಕಾರಿಗಳ ತಂಡ ಮೆಚ್ಚುಗೆ ವ್ಯಕ್ತಪಡಿಸಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭದ್ರತಾ ವಿಭಾಗದ ನಿರ್ದೇಶಕ ಐಸಾನ್ ಸಾದಿಕ್, ಪೊಲೀಸ್ ಅಧಿಕಾರಿ ಸೊಹೇಲ್ ಖಾನ್, ಪಾಕಿಸ್ತಾನದಲ್ಲಿರುವ ಐಸಿಸಿ ಉಸ್ತುವಾರಿ ಉಸ್ಮಾನ್ ವಾಲಾ ಅವರು ಚಿನ್ನಸ್ವಾಮಿ ಕ್ರೀಡಾಂಗಣವನ್ನು ಪರಿಶೀಲನೆ ನಡೆಸಿದರು.

ನಂತರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಅವರನ್ನು ಭೇಟಿಯಾಗಿ ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ನಡೆಸಿದರು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಆಡಳಿತಾಧಿಕಾರಿ ರತ್ನಾಕರ್ ಶೆಟ್ಟಿ ಮತ್ತು ಭಾರತ ಕ್ರಿಕೆಟ್ ಮಂಡಳಿಯನ್ನು ಪ್ರತಿನಿಧಿಸುವ ಸುರು ನಾಯಕ್ ಸಹ ಪಾಕ್ ಅಧಿಕಾರಿಗಳ ತಂಡದ ಜೊತೆ ಆಗಮಿಸಿದ್ದರು.

`ಬಿಸಿಸಿಐ ಹಾಗೂ ಸ್ಥಳೀಯ ಕ್ರಿಕೆಟ್ ಸಂಸ್ಥೆ  ಉತ್ತಮವಾಗಿ ಕ್ರೀಡಾಂಗಣ ವ್ಯವಸ್ಥೆ ಮಾಡಿದೆ. ಐಪಿಎಲ್ ಸೇರಿದಂತೆ ಸಾಕಷ್ಟು ಟೂರ್ನಿಗಳನ್ನು ಆಯೋಜಿಸಿದ ಅನುಭವ ಇರುವುದರಿಂದ ಇಲ್ಲಿನ ವ್ಯವಸ್ಥೆಯ ಬಗ್ಗೆ ಆತಂಕವಿಲ್ಲ. ನಾವಿಲ್ಲಿ ಹೋಟೆಲ್ ಹಾಗೂ ಭದ್ರತಾ ವ್ಯವಸ್ಥೆಯ ಬಗ್ಗೆ ತಿಳಿಯಲು ಬಂದಿದ್ದೆವು.' ಎಂದು ಪಾಕಿಸ್ತಾನದ ಮಾಧ್ಯಮ ಮ್ಯಾನೇಜರ್ ನದೀಮ್ ಸರ್ವರ್ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

`ಭಾರತ ಹಾಗೂ ಪಾಕ್ ನಡುವಿನ ಪಂದ್ಯವನ್ನು ಸಮರ್ಥವಾಗಿ ನಡೆಸುವ ಸಾಮರ್ಥ್ಯ ಕೆಎಸ್‌ಸಿಎ ಹೊಂದಿದೆ. ಪಂದ್ಯಗಳನ್ನು ನೋಡಲು ಬರುವ ನಮ್ಮ ದೇಶದ ಅಭಿಮಾನಿಗಳಿಗೆ ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದೇವೆ. ನಮ್ಮ ಮನವಿಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ' ಎಂದೂ ಅವರು ನುಡಿದರು.

`ಟ್ವೆಂಟಿ-20 ಪಂದ್ಯವನ್ನು ನೋಡಲು 500 ಜನ ಪಾಕಿಸ್ತಾನದ ಕ್ರೀಡಾಭಿಮಾನಿಗಳು ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ. ಇಬ್ಬರು ಮಾಜಿ ಆಟಗಾರರು ಸಹ ಬರಲಿದ್ದಾರೆ. ಕೆಲ ಸಚಿವರು ಮತ್ತು ಸಂಸತ್ ಸದಸ್ಯರೂ ಕೂಡಾ ಪಂದ್ಯ ನೋಡಲು ಆಗಮಿಸುವ ಸಾಧ್ಯತೆಯಿದೆ' ಎಂದು ಸರ್ವರ್ ಹೇಳಿದರು.

ಪಾಕ್ ಅಧಿಕಾರಿಗಳ ತಂಡ ಭಾನುವಾರ ಕೋಲ್ಕತ್ತದ ಈಡನ್ ಗಾರ್ಡನ್ಸ್ ಕ್ರೀಡಾಂಗಣವನ್ನೂ ಪರಿಶೀಲನೆ ನಡೆಸಿತ್ತು. ಜನವರಿ ಮೂರರಂದು ಕೋಲ್ಕತ್ತದಲ್ಲಿ ಏಕದಿನ ಪಂದ್ಯ ನಡೆಯಲಿದೆ. ಭಾರತ ಪ್ರವಾಸದಲ್ಲಿ ಪಾಕ್ ತಂಡ ಎರಡು ಟ್ವೆಂಟಿ-20 ಹಾಗೂ ಮೂರು ಏಕದಿನ ಪಂದ್ಯಗಳನ್ನಾಡಲಿದೆ. ಎರಡನೆ ಟಿ-20 ಪಂದ್ಯ ಡಿಸೆಂಬರ್ 27ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.

ಐದು ವರ್ಷಗಳ ಬಳಿಕ ಪಂದ್ಯ: ಉಭಯ ತಂಡಗಳು ಐದು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಮುಖಾಮುಖಿಯಾಗಲಿವೆ. 2007ರ ಡಿಸೆಂಬರ್‌ನಲ್ಲಿ ಭಾರತ ಮತ್ತು ಪಾಕ್ ತಂಡಗಳ ನಡುವೆ ಟೆಸ್ಟ್ ಪಂದ್ಯ ನಡೆದಿತ್ತು. ಈ ಪಂದ್ಯ  ಡ್ರಾದಲ್ಲಿ ಅಂತ್ಯ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.