ADVERTISEMENT

ಕ್ರೀಡಾಪಟುಗಳ ಮೇಲೆ ಆಟದ ಸಾಧನಗಳ ಖರೀದಿಯ ಹೊರೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಬೆಂಗಳೂರು:  `ಊಟ-ವಸತಿ ಸೌಕರ್ಯ ಉತ್ತಮ. ಆದರೆ, ಕ್ರೀಡಾಪಟುಗಳ ಮೂಲ ಅಗತ್ಯವಾದ `ಕಿಟ್~ ಮಾತ್ರ ಇನ್ನೂ ಸಿಕ್ಕಿಲ್ಲ. ಅಭ್ಯಾಸ ಮಾಡುವುದಾದರೂ ಹೇಗೆ? ಎರಡು ವರ್ಷವಾದರೂ ಈ ಕೊರತೆ ನೀಗಿಲ್ಲ. ನಮ್ಮ ಗೋಳು ಕೇಳುವವರು ಯಾರೂ ಇಲ್ಲ...~

-ಹೀಗೆ ಅಸಹಾಯಕತೆ ತೋಡಿಕೊಂಡಿದ್ದು, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಹಿರಿಯರ ವಸತಿ ನಿಲಯದ ಕ್ರೀಡಾಪಟುಗಳು. ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಬೆಳಸಬೇಕಾದ ಸರ್ಕಾರದ ವಸತಿ ನಿಲಯದೊಳಗೆ ಇರುವವರ ಕಂಠದಿಂದ ಹೊರಟ ನೋವಿನ ಧ್ವನಿಯಿದು.

ನಗರದ ಕಂಠೀರವ ಕ್ರೀಡಾಂಗಣದಲ್ಲಿರುವ ವಸತಿ ನಿಲಯದಲ್ಲಿ ಶುಚಿತ್ವವಿದೆ. ಆದರೆ, ಕ್ರೀಡಾ ಸಾಧನಗಳ ಕಿಟ್ ಮಾತ್ರ ಇಲಾಖೆಯಿಂದ ಬರುತ್ತದೆಂದು ಕಾಯುವ ಕಾಲ ಮುಗಿದಿಲ್ಲ. ಸ್ವಂತ ಹಣದಿಂದಲೇ ಕ್ರೀಡಾಪಟುಗಳು ಕಿಟ್ ಖರೀದಿ ಮಾಡಬೇಕಾದ ಸಂಕಷ್ಟ. ಪದವಿ ಪೂರ್ವ ತರಗತಿಯಿಂದ ಪದವಿವರೆಗೂ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಓದಿನ ಜೊತೆಗೆ ಕ್ರೀಡಾ ಸಾಮಾಗ್ರಿಗಳನ್ನು ಖರೀದಿಸುವ ಹೊರೆ ಅವರ ಮೇಲೆ ಬಿದ್ದಿದೆ.

ಅಥ್ಲೆಟಿಕ್ಸ್ (21 ಪುರುಷ, 6 ಮಹಿಳೆ), ಬ್ಯಾಸ್ಕೆಟ್‌ಬಾಲ್ (16 ಪುರುಷ), ಫುಟ್‌ಬಾಲ್ (25 ಪುರುಷ), ಹಾಕಿ (28 ಪುರುಷ), ವಾಲಿಬಾಲ್ (19 ಪುರುಷ) ಕ್ರೀಡಾಪಟುಗಳು ಇಲ್ಲಿ ವಾಸವಿದ್ದಾರೆ. ಕಳೆದ ಒಂದು ವರ್ಷದಿಂದ ಮಹಿಳಾ ವಸತಿ ನಿಲಯದಲ್ಲಿ ಬಳಕೆ ಮಾಡುವ ನೀರಿನ ಸಮಸ್ಯೆ ಇದ್ದರೂ ಕ್ರೀಡಾ ಇಲಾಖೆ ಇದನ್ನು ಪರಿಹರಿಸಲು ಮುಂದಾಗಿಲ್ಲ ಎನ್ನುವುದನ್ನು ಅಲ್ಲಿನ ಕೆಲ ವಿದ್ಯಾರ್ಥಿಗಳು ಗಮನಕ್ಕೆ ತಂದರು.
 
ಆದರೆ ಅವರಿಗೆ ಅದು ದೊಡ್ಡ ತೊಂದರೆ ಅಲ್ಲ. ಕ್ರೀಡಾ ಸಾಧನಗಳನ್ನು ಕೊಡುತ್ತಿಲ್ಲ ಎನ್ನುವುದೇ `ಮಹಾಸಮಸ್ಯೆ~!
`ಈ ವಸತಿ ನಿಲಯಕ್ಕೆ ಬಂದು ನಾಲ್ಕು ವರ್ಷವಾಯಿತು. ಇದುವರೆಗೆ ಕಿಟ್ ಪಡೆದದ್ದು ಕೇವಲ ಒಂದು ಸಲ.

ಸರ್ಕಾರದಿಂದ ನೀಡುವ ಶೂನಿಂದ ಅಭ್ಯಾಸ ನಡೆಸಿದರೆ, ಆಸ್ಪತ್ರೆ ಸೇರಬೇಕಾಗುತ್ತದೆ. ಅಷ್ಟೊಂದು ಕಳಪೆಯಾಗಿವೆ~ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಹಾಕಿ ಆಟಗಾರರೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ಸರ್ಕಾರ ಗುಣಮಟ್ಟದ ಶೂ ನೀಡಬೇಕು. ಕನಿಷ್ಠ ಒಂದು ವರ್ಷವಾದರೂ ಬಾಳಿಕೆ ಬರುವಂತಿರಬೇಕು. ಇಲ್ಲವಾದರೆ, ನಾವು ಆಡುವುದು ಹೇಗೆ. ಅಭ್ಯಾಸ ನಡೆಸಲು ಆಗುವುದಿಲ್ಲ. ಒಳ್ಳೆಯ ಹಾಕಿ ಸ್ಟಿಕ್‌ಗೆ ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಸರ್ಕಾರ ನೀಡುವ ಸ್ಟಿಕ್‌ನಿಂದ ಶಾಲಾ ಮಟ್ಟದಲ್ಲಿಯೂ ಆಡಲು ಸಾಧ್ಯವಾಗುವುದಿಲ್ಲ~ ಎಂದು ಕೆಲವರು ಅಳಲು ತೋಡಿಕೊಂಡರು.

`ದಿನಕ್ಕೆ 100 ರೂಪಾಯಿಯಂತೆ ಪ್ರತಿ ವಿದ್ಯಾರ್ಥಿಯ ಊಟದ ಖರ್ಚಿಗೆ ವೆಚ್ಚ ಮಾಡಲಾಗುತ್ತಿದೆ. ಇದನ್ನು ರೂ. 200ಗೆ ಹೆಚ್ಚಿಸಬೇಕು. ವರ್ಷಕ್ಕೆ ಎರಡು ಸಲ ಕ್ರೀಡಾ ಪೋಷಾಕು ಹಾಗೂ ಶೂ ಕೊಡಬೇಕು. ವರ್ಷಕ್ಕೊಂದು ಹೊಸ ಕಿಟ್ ಕಡ್ಡಾಯವಾಗಿ ನೀಡಬೇಕು~ ಎಂದು ಕ್ರೀಡಾಪಟುಗಳು ಕೇಳಿಕೊಂಡರು.

`ಕ್ರೀಡಾಪಟುಗಳಿಗೆ ಕಿಟ್ ಇಲ್ಲ ಎನ್ನುವ ಬಗ್ಗೆ ನಮಗೆ ಗೊತ್ತಿದೆ. ಕಳೆದ ವರ್ಷ ಕೆಲ ತಾಂತ್ರಿಕ ತೊಂದರೆಯಿಂದ ನೀಡಲು ಸಾಧ್ಯವಾಗಿಲ್ಲ. ಈಗಾಗಲೇ ಕಾರ್ಯ ಆರಂಭಿಸಿದ್ದೇವೆ. ಈ ವರ್ಷ ಸಮಸ್ಯೆ ಉಂಟಾಗುವುದಿಲ್ಲ~ ಎಂದು ಯುವಜನ ಸೇವಾ ಇಲಾಖೆಯ ಜಂಟಿ ನಿರ್ದೇಶಕ ವೈ.ಆರ್. ಕಾಂತರಾಜೇಂದ್ರ ತಿಳಿಸಿದರು.

`ಸರ್ಕಾರ ಪ್ರತಿ ವಿದ್ಯಾರ್ಥಿಗೆ ದಿನಕ್ಕೆ 100 ರೂ. ನೀಡುತ್ತಿರುವುದು ಸಾಕಾಗುವುದಿಲ್ಲ ಎನ್ನುವ ಬಗ್ಗೆಯೂ ತಿಳಿದಿದೆ. ಆದ್ದರಿಂದ ಈ ಮೊತ್ತವನ್ನು 175 ರೂ.ಗೆ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ~ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.