ADVERTISEMENT

ಕ್ರೀಡಾ ಚಟುವಟಿಕೆಗಳಿಗೆ ಅಡ್ಡಗಾಲು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಬೆಂಗಳೂರು: `ಕ್ರೀಡೆಗೆ ಉತ್ತೇಜನ ನೀಡಬೇಕಾದವರು ಸುಖಾಸುಮ್ಮನೇ ಆರೋಪ ಮಾಡುತ್ತಾ ಕ್ರಿಕೆಟ್ ಚಟುವಟಿಕೆಗಳಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಇಷ್ಟು ದಿನ ಸುಮ್ಮನಿದ್ದವರು ಈಗ ತಗಾದೆ ತೆಗೆಯುತ್ತಿದ್ದಾರೆ. ಸಣ್ಣ ವಿಷಯವನ್ನೇ ರಾಷ್ಟ್ರೀಯ ದುರಂತ ಎಂದು ಬಿಂಬಿಸುತ್ತಿದ್ದಾರೆ~ ಎಂದು ರಾಜ್ಯ ಕ್ರಿಕೆಟ್ ಸಂಸ್ಥೆ ಆಕ್ರೋಶ ವ್ಯಕ್ತಪಡಿಸಿದೆ.

`ಆದರೆ ನಮ್ಮಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಯಾವುದೇ ಸದಸ್ಯ ಅಥವಾ ಅಧಿಕಾರಿ ಇದುವರೆಗೆ ಮಾತನಾಡಿಲ್ಲ. ಪತ್ರ ಕೂಡ ಬರೆದಿಲ್ಲ. ಅಕಸ್ಮಾತ್ ಆ ರೀತಿ ಆದಾಗ ನಾವು ಪ್ರತಿಕ್ರಿಯೆ ನೀಡುತ್ತೇವೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಯಿಂದ ಈ ರೀತಿಯ ವಿವಾದ ಸೃಷ್ಟಿಯಾಗಿದೆ ಎಂಬುದಷ್ಟೆ ನಮಗೆ ಗೊತ್ತಾಗಿದೆ~ ಎಂದು ಕೆಎಸ್‌ಸಿಎ ಪದಾಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ಹೇಳಿದ್ದಾರೆ.

ಕಸ ವಿಲೇವಾರಿ ಮಾಡುವ ಲಾರಿಯನ್ನು ಬಿಬಿಎಂಪಿ ವಶಕ್ಕೆ ಪಡೆದಿದೆ ಎಂಬುದಕ್ಕೆ ಪ್ರತಿಕ್ರಿಯಿಸಿರುವ ಕೆಎಸ್‌ಸಿಎ, `ಅದು ಕೆಎಸ್‌ಸಿಎ ಲಾರಿ ಎನ್ನುವುದಕ್ಕೆ ಅವರ ಬಳಿ ಸಾಕ್ಷಿ ಏನಿದೆ? ಇದುವರೆಗೆ ಈ ಸಂಬಂಧ ನಮಗೆ ಮಾಹಿತಿಯೇ ಬಂದಿಲ್ಲ. ಕ್ರೀಡಾಂಗಣದ ಕಸ ವಿಲೇವಾರಿ ಮಾಡಲು ನಾವು ಹೊರಗುತ್ತಿಗೆ ನೀಡಿದ್ದೇವೆ~ ಎಂದು ಸ್ಪಷ್ಟಪಡಿಸಿದೆ.

`ಟಿಕೆಟ್ ಸಮಸ್ಯೆ ಕಾರಣ ಈ ರೀತಿ ಆಗುತ್ತಿದೆ. ಆದರೆ ಇದು ಕೆಎಸ್‌ಸಿಎ ನಡೆಸುತ್ತಿರುವ ಟೂರ್ನಿ ಅಲ್ಲ. ಐಪಿಎಲ್ ಫ್ರಾಂಚೈಸಿಯ ಮಾಲೀಕರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಟೂರ್ನಿ ಆಯೋಜಿಸುತ್ತಿದ್ದಾರೆ. ಆ ಫ್ರಾಂಚೈಸಿಯೇ ನಷ್ಟದಲ್ಲಿದೆ.

ಕೆಎಸ್‌ಸಿಎಗೆ ಶೇ.20ರಷ್ಟು ಟಿಕೆಟ್ ನೀಡಲಾಗಿದೆ. ಅದರೆ ಅದರ ಎರಡರಷ್ಟು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಟಿಕೆಟ್ ಕೋರಿ ರಾಶಿ ಪತ್ರಗಳು ಬಂದಿವೆ. ಸಂಸ್ಥೆಯ ಸದಸ್ಯರುಗಳಿಗೆ ಟಿಕೆಟ್ ಇಲ್ಲದಂತಾಗಿದೆ. ಇದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ~ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪದಾಧಿಕಾರಿಯೊಬ್ಬರು ವಿವರಿಸಿದರು.

`ವಿಶ್ವಕಪ್ ವೇಳೆ ಪಾಲಿಕೆ ಸದಸ್ಯರಿಗಾಗಿ ನಾವು ಮೇಯರ್ ಸ್ಟ್ಯಾಂಡ್ ಸೌಲಭ್ಯ ಕಲ್ಪಿಸಿಕೊಟ್ಟಿದ್ದೆವು. ಐಪಿಎಲ್ ಪಂದ್ಯ ವೀಕ್ಷಿಸಲು ನಾವು ಟಿಕೆಟ್‌ಗಳನ್ನು ಕಳುಹಿಸಿಕೊಟ್ಟಿದ್ದೆವು. ಆದರೆ ಪಾಲಿಕೆ ಸದಸ್ಯರು ಮಾತ್ರ ಹೊಸ ರಾಗ ಎಳೆಯುತ್ತಿದ್ದಾರೆ. ಬೆದರಿಕೆ ಹಾಕುತ್ತಿರುವ ಸುದ್ದಿಯೂ ಬಂದಿದೆ~ ಎಂದು ಅವರು ಹೇಳಿದ್ದಾರೆ.

ರಸ್ತೆ ಮಧ್ಯೆ ಕಸ ವಿಲೇವಾರಿ
ಕ್ರಿಕೆಟ್ ಕ್ರೀಡಾಂಗಣವನ್ನು ರಾಜ್ಯ ಕ್ರಿಕೆಟ್ ಸಂಸ್ಥೆ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದೆ. ತೆರಿಗೆ ನೀಡದೇ ವಂಚಿಸುತ್ತಿದೆ~ ಎಂದು ಬಿಬಿಎಂಪಿ ಉಪ ಮೇಯರ್ ಹರೀಶ್ ಆರೋಪಿಸಿದ್ದಾರೆ. ಕೆಎಸ್‌ಸಿಎಗೆ ಸರ್ಕಾರ ಭೋಗ್ಯಕ್ಕೆ ಕ್ರೀಡಾಂಗಣ ನೀಡಿದೆ. ಆದರೆ ಕೆಎಸ್‌ಸಿಎ ಇದನ್ನು ಮತ್ತೊಬ್ಬರಿಗೆ ಭೋಗ್ಯಕ್ಕೆ ನೀಡಿದೆ. ಇದು ಕಾನೂನು ಬಾಹಿರ. ಮತ್ತೊಬ್ಬರಿಗೆ ಭೋಗ್ಯಕ್ಕೆ ನೀಡುವಂತಿಲ್ಲ. ಇದೇ ತಿಂಗಳ 30ರಂದು ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ನಾವು ಚರ್ಚೆ ನಡೆಸಿ ಸೂಕ್ತ ಕ್ರಮಕೈಗೊಳ್ಳುತ್ತೇವೆ~ ಎಂದು ಹರೀಶ್ ತಿಳಿಸಿದ್ದಾರೆ.

`ಬೊಮ್ಮನಹಳ್ಳಿ ವಿಭಾಗದ ಅಂಜನಾಪುರ ರಸ್ತೆ ಬದಿಯಲ್ಲಿಯೇ ಕ್ರೀಡಾಂಗಣದ ಕಸ ಎಸೆದು ಹೋಗಿದ್ದಾರೆ. ಈ ಮೂಲಕ ಬಿಬಿಎಂಪಿ ನಿಯಮಗಳನ್ನು ಕ್ರಿಕೆಟ್ ಸಂಸ್ಥೆ ಉಲ್ಲಂಘಿಸಿದೆ. ಹಾಗಾಗಿ ಅಲ್ಲಿನ ಅಧಿಕಾರಿಗಳ ಲಾರಿಯನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ~ ಎಂದೂ ಹರೀಶ್ ನುಡಿದರು.

`ಕಸ ವಿಲೇವಾರಿ ಮಾಡಲು ಬಿಬಿಎಂಪಿಯ ಪರವಾನಗಿ ಪಡೆಯಬೇಕು ಅಥವಾ ಪಾಲಿಗೆ ನಿಯೋಜಿಸುವ ಗುತ್ತಿಗೆದಾರರಿಗೆ ನೀಡಬೇಕು. ಸೂಕ್ತ ಸ್ಥಳದಲ್ಲಿ ಕಸ ಹಾಕಬೇಕು. ಅದು ಹೋಟೆಲ್ ಇರಬಹುದು, ದೇವಸ್ಥಾನಗಳಾಗಿರಬಹುದು. ಮದುವೆ ಛತ್ರಗಳಿರಬಹುದು. ಆದರೆ ಕ್ರಿಕೆಟ್ ಸಂಸ್ಥೆಯ ಕಸ ವಿಲೇವಾರಿ ಮಾಡುತ್ತಿರುವ ಸಂಸ್ಥೆ ಅದ್ಯಾವುದನ್ನೂ ಪಡೆಯದೇ ನಿಯಮ ಉಲ್ಲಂಘಿಸಿದೆ~ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.