ADVERTISEMENT

ಕ್ವಾರ್ಟರ್‌ ಫೈನಲ್‌ಗೆ ಸೈನಾ, ಸಿಂಧು

ಪಿಟಿಐ
Published 12 ಏಪ್ರಿಲ್ 2018, 19:39 IST
Last Updated 12 ಏಪ್ರಿಲ್ 2018, 19:39 IST
ಪಿ.ವಿ.ಸಿಂಧು
ಪಿ.ವಿ.ಸಿಂಧು   

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಸ್ಪರ್ಧಿಗಳ ಗೆಲುವಿನ ಓಟ ಮುಂದುವರಿದಿದೆ.

ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿ ರುವ ಸೈನಾ ನೆಹ್ವಾಲ್‌, ಪಿ.ವಿ.ಸಿಂಧು, ಕೆ.ಶ್ರೀಕಾಂತ್ ಮತ್ತು ಎಚ್‌.ಎಸ್‌.ಪ್ರಣಯ್‌ ಅವರು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಕ್ಯಾರರಾ ಕ್ರೀಡಾ ಸಂಕೀರ್ಣದಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧು 21–15, 21–9ರ ನೇರ ಗೇಮ್‌ಗಳಿಂದ ಆಸ್ಟ್ರೇಲಿಯಾದ ಸುವಾನ್‌ ಯು ವೆಂಡಿ ಚೆನ್‌ ಅವರನ್ನು ಪರಾಭವಗೊಳಿಸಿದರು. ಈ ಹೋರಾಟ 34 ನಿಮಿಷ ನಡೆಯಿತು.

ADVERTISEMENT

ಸಿಂಧು ಅವರು ಮೊದಲ ಗೇಮ್‌ ನಲ್ಲಿ ಎದುರಾಳಿಯಿಂದ ಕಠಿಣ ಪೈಪೋಟಿ ಎದುರಿಸಿದರು. ದ್ವಿತೀಯಾರ್ಧದಲ್ಲಿ ಪ್ರಾಬಲ್ಯ ಮೆರೆದ ಸಿಂಧು ಗೇಮ್‌ ಜಯಿಸಿ 1–0ರ ಮುನ್ನಡೆ ಗಳಿಸಿದರು.

ಎರಡನೆ ಗೇಮ್‌ನಲ್ಲಿ ಸಿಂಧು ಅಬ್ಬರಿಸಿದರು. ಭಾರತದ ಆಟಗಾರ್ತಿ ಬಾರಿಸುತ್ತಿದ್ದ ಷಟಲ್‌ ಹಿಂತಿರುಗಿಸಲು ಪ್ರಯಾಸಪಟ್ಟ ವೆಂಡಿ ಹಿನ್ನಡೆ  ಅನು ಭವಿಸಿದರು. ಇದರಿಂದ ಒತ್ತಡಕ್ಕೆ ಒಳಗಾದಂತೆ ಕಂಡ ಅವರು ಹಲವು ತಪ್ಪುಗಳನ್ನು ಮಾಡಿ ಸೋಲೊಪ್ಪಿಕೊಂಡರು.

ಇನ್ನೊಂದು ಪಂದ್ಯದಲ್ಲಿ ಸೈನಾ ನೆಹ್ವಾಲ್‌ 21–4, 2–0ರಲ್ಲಿ ಜೆಸ್ಸಿಕಾ ಲಿ ವಿರುದ್ಧ ಗೆದ್ದರು.

ಮೊದಲ ಗೇಮ್‌ನಲ್ಲಿ ಅಮೋಘ ಆಟ ಆಡಿದ ಸೈನಾ, ಎರಡನೆ ಗೇಮ್‌ನಲ್ಲಿ 2–0ಯಿಂದ ಮುನ್ನಡೆಯಲ್ಲಿದ್ದರು. ಆಗ ಜೆಸ್ಸಿಕಾ ಗಾಯಗೊಂಡು ಅಂಗಳ ತೊರೆದರು.

ಋತ್ವಿಕಾ ಶಿವಾನಿ ಕೂಡ ಸಿಂಗಲ್ಸ್‌ ವಿಭಾಗದಲ್ಲಿ ಎಂಟರ ಘಟ್ಟ ಪ್ರವೇಶಿಸಿದರು.

ಪ್ರೀ ಕ್ವಾರ್ಟರ್‌ನಲ್ಲಿ ಋತ್ವಿಕಾ 21–10, 21–23, 21–10ರಲ್ಲಿ ಸಿಂಗಪುರದ ಜಿಯಾನ್‌ ಮಿನ್‌ ಯಿಯೊ ವಿರುದ್ಧ ಗೆದ್ದರು.

ಶ್ರೀಕಾಂತ್‌ಗೆ ಸುಲಭ ಜಯ: ಪುರುಷರ ಸಿಂಗಲ್ಸ್‌ನಲ್ಲಿ ಚಿನ್ನ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿರುವ ಕೆ.ಶ್ರೀಕಾಂತ್‌, ಕ್ವಾರ್ಟರ್‌ ಫೈನಲ್‌ ತಲುಪಿದರು.

16ರ ಘಟ್ಟದ ಹೋರಾಟದಲ್ಲಿ ಶ್ರೀಕಾಂತ್‌ 21–10, 21–10ರಿಂದ ಶ್ರೀಲಂಕಾದ ನಿಲುಕಾ ಕರುಣಾರತ್ನೆ ಅವರನ್ನು ಸೋಲಿಸಿದರು. ಈ ಹೋರಾಟ 33 ನಿಮಿಷ ನಡೆಯಿತು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿರುವ ಶ್ರೀಕಾಂತ್‌ ಎರಡೂ ಗೇಮ್‌ಗಳಲ್ಲಿ ಮೋಡಿ ಮಾಡಿದರು.

ಮತ್ತೊಂದು ಪ್ರೀ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಎಚ್‌.ಎಸ್‌.ಪ್ರಣಯ್ 21–18, 21–11ರ ನೇರ ಗೇಮ್‌ಗಳಿಂದ ಆಸ್ಟ್ರೇಲಿಯಾದ ಅಂಥೋಣಿ ಜೊಯೆ ವಿರುದ್ಧ ಗೆದ್ದರು.

ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಪ್ರೀ ಕ್ವಾರ್ಟರ್‌ನಲ್ಲಿ ಅಶ್ವಿನಿ ಮತ್ತು ಸಾತ್ವಿಕ್‌ 21–10, 21–7ರಲ್ಲಿ ಕೆನಡಾದ ಕ್ರಿಸ್ಟನ್‌ ಸೇಯಿ ಮತ್ತು ನೀಲ್‌ ಯಕುರಾ ಅವರನ್ನು ಪರಾಭವಗೊಳಿಸಿದರು.

ಇನ್ನೊಂದು ಪಂದ್ಯದಲ್ಲಿ ಪ್ರಣವ್‌ ಜೆರಿ ಚೋಪ್ರಾ ಮತ್ತು ಎನ್‌.ಸಿಕ್ಕಿ ರೆಡ್ಡಿ 21–19, 21–13ರಿಂದ ಸಿಂಗಪುರದ ಡ್ಯಾನಿ ಕ್ರಿಸ್‌ನಾಂಟ ಮತ್ತು ಜಿಯಾ ಯಿಂಗ್‌ ವಾಂಗ್‌ ವಿರುದ್ಧ ಗೆದ್ದರು.

ಮಹಿಳೆಯರ ಡಬಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ 21–18, 21–13ರಲ್ಲಿ ಸಿಂಗಪುರದ ರೆನ್‌ ನೆಯಾಂಗ್‌ ಮತ್ತು ಜಿಯಾ ಯಿಂಗ್‌ ವಾಂಗ್‌ ಅವರನ್ನು ಸೋಲಿಸಿದರು.

ಪುರುಷರ ಡಬಲ್ಸ್‌ ವಿಭಾಗದ ಪಂದ್ಯದಲ್ಲಿ ಸಾತ್ವಿಕ್‌ ಸಾಯಿರಾಜ್‌ ಮತ್ತು ಚಿರಾಗ್‌ ಶೆಟ್ಟಿ 21–8, 21–12ರಿಂದ ಮಾರಿಷಸ್‌ನ ಆತೀಶ್‌ ಲುಬಾಹ್‌ ಮತ್ತು ಜೀನ್‌ ಪಾಲ್‌ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.