ADVERTISEMENT

ಕ್ವಾರ್ಟರ್ ಫೈನಲ್‌ಗೆ ಸ್ವರಣ್

​ಪ್ರಜಾವಾಣಿ ವಾರ್ತೆ
Published 29 ಜುಲೈ 2012, 19:30 IST
Last Updated 29 ಜುಲೈ 2012, 19:30 IST
ಕ್ವಾರ್ಟರ್ ಫೈನಲ್‌ಗೆ ಸ್ವರಣ್
ಕ್ವಾರ್ಟರ್ ಫೈನಲ್‌ಗೆ ಸ್ವರಣ್   

ಲಂಡನ್  (ಐಎಎನ್‌ಎಸ್): ಭಾರತದ ಸ್ವರಣ್ ಸಿಂಗ್ ಒಲಿಂಪಿಕ್ಸ್ ರೋಯಿಂಗ್ ಸ್ಪರ್ಧೆಯ ಪುರುಷರ ಸಿಂಗಲ್ ಸ್ಕಲ್ಸ್ ವಿಭಾಗದ ಕ್ವಾರ್ಟರ್ ಫೈನಲ್     ಪ್ರವೇಶಿಸಿದರು. ಶನಿವಾರ ಹೀಟ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಅವರು ಭಾನುವಾರ ನಡೆದ  `ರೆಪೆಚೇಜ್~ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಎಂಟರಘಟ್ಟಕ್ಕೆ ರಹದಾರಿ ಪಡೆದರು.

ಹೀಟ್ಸ್‌ನಲ್ಲಿ ಗೆದ್ದು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ವಿಫಲವಾಗಿದ್ದ ಐವರು ಸ್ಪರ್ಧಿಗಳು ರೆಪೆಚೇಜ್‌ನಲ್ಲಿ ಪಾಲ್ಗೊಂಡಿದ್ದರು. ಸ್ವರಣ್ 7:00.49 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದರು. ಎರಡನೇ ಸ್ಥಾನ ಪಡೆದ ದಕ್ಷಿಣ ಕೊರಿಯಾದ ಡಾಂಗ್‌ಯಾಂಗ್ ಕಿಮ್ ಅವರಿಗಿಂತ 3.42 ಸೆಕೆಂಡ್‌ಗಳಷ್ಟು ವೇಗವಾಗಿ ಸ್ವರಣ್ ಗುರಿ ತಲುಪಿದರು. ಕಿಮ್ ಕೂಡಾ ಎಂಟರಘಟ್ಟ ಪ್ರವೇಶಿಸಿದರು.

`ನನ್ನ ಮೇಲೆ ಯಾರೂ ಪದಕದ ಭರವಸೆ ಇಟ್ಟಿಲ್ಲ. ಆದರೂ ಇಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಸಾಧ್ಯವಾಗಿದೆ. ಮುಂದಿನ ಸ್ಪರ್ಧೆ ಜುಲೈ 31 ರಂದು ನಡೆಯಲಿದೆ. ಅಲ್ಲಿ ಏನಾಗಬಹುದು ಎಂಬುದನ್ನು ಕಾದುನೋಡೋಣ~ ಎಂದು ಸ್ವರಣ್ ಪ್ರತಿಕ್ರಿಯಿಸಿದ್ದಾರೆ. ಭಾರತದ ಸ್ಪರ್ಧಿಯ ಪ್ರದರ್ಶನದ ಬಗ್ಗೆ ಕೋಚ್ ಇಸ್ಮಾಯಿಲ್ ಬೇಗ್ ಸಂತಸ ವ್ಯಕ್ತಪಡಿಸಿದರು. `ಸ್ವರಣ್ 2 ಕಿ.ಮೀ ದೂರವನ್ನು 7:00.49 ಸೆಕೆಂಡ್‌ಗಳಲ್ಲಿ ಕ್ರಮಿಸಿ ರೆಪೆಚೇಜ್ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದದ್ದು ದೊಡ್ಡ ಸಾಧನೆ~ ಎಂದರು.

`ಹೀಟ್ಸ್‌ನಲ್ಲಿ ಸ್ವರಣ್ ವೈಯಕ್ತಿಕ ಶ್ರೇಷ್ಠ ಸಮಯದೊಂದಿಗೆ (6:54.00) ಸ್ಪರ್ಧೆ ಕೊನೆಗೊಳಿಸಿದ್ದರು. ರೆಪೆಚೇಜ್‌ನಲ್ಲಿ ಗೆಲುವು ಪಡೆಯುವ ವಿಶ್ವಾಸವಿತ್ತು. ಆದ್ದರಿಂದ ಸ್ಪರ್ಧೆಯ ವೇಳೆ ಸಂಪೂರ್ಣ ಶಕ್ತಿ ಪ್ರಯೋಗಿಸುವುದು ಬೇಡ ಎಂದು ನಾನು ತಿಳಿಸಿದ್ದೆ. ಏಕೆಂದರೆ ಮಂಗಳವಾರ ಕ್ವಾರ್ಟರ್ ಫೈನಲ್ ನಡೆಯಲಿದ್ದು, ಅಲ್ಲಿ ಪೂರ್ಣ ಸಾಮರ್ಥ್ಯ ತೋರುವುದು ಅಗತ್ಯ~ ಎಂದು ಬೇಗ್ ತಿಳಿಸಿದರು.

ಭಾನುವಾರ ನಡೆದ ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ ಸ್ಪರ್ಧೆಯ ಹೀಟ್ಸ್‌ನಲ್ಲಿ ಭಾರತದ ಸಂದೀಪ್ ಕುಮಾರ್ ಮತ್ತು ಮಂಜೀತ್ ಸಿಂಗ್ ನಾಲ್ಕನೇ ಸ್ಥಾನ ಪಡೆದರು. ಕ್ವಾರ್ಟರ್ ಫೈನಲ್ ಪ್ರವೇಶಿಸಲು ಇವರಿಗೂ ರೆಪೆಚೇಜ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಅನಿವಾರ್ಯ.

ಎಟೊನ್ ಡಾರ್ನಿ ರೋಯಿಂಗ್ ಸೆಂಟರ್‌ನಲ್ಲಿ ಭಾನುವಾರ ಮೊದಲ ಹೀಟ್ಸ್‌ನಲ್ಲಿ ಸ್ಪರ್ಧಿಸಿದ ಭಾರತದ ಜೋಡಿ 6:56.60 ಸೆಕೆಂಡ್‌ಗಳಲ್ಲಿ ಗುರಿ ತಲುಪಿತು. ಹೀಟ್ಸ್‌ನಲ್ಲಿ ಮೊದಲ ಎರಡು ಸ್ಥಾನ ಪಡೆದವರು ನೇರವಾಗಿ ಮುಂದಿನ ಹಂತ ಪ್ರವೇಶಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.