ADVERTISEMENT

ಕ್ವಾರ್ಟರ್ ಫೈನಲ್ ಕನಸು ಕಾಣುತ್ತಿರುವ ಕೆರಿಬಿಯನ್ ಪಡೆಯ ಮುಂದೆ ಸವಾಲಿನ ಹಾದಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST
ಕ್ವಾರ್ಟರ್ ಫೈನಲ್ ಕನಸು ಕಾಣುತ್ತಿರುವ ಕೆರಿಬಿಯನ್ ಪಡೆಯ ಮುಂದೆ ಸವಾಲಿನ ಹಾದಿ
ಕ್ವಾರ್ಟರ್ ಫೈನಲ್ ಕನಸು ಕಾಣುತ್ತಿರುವ ಕೆರಿಬಿಯನ್ ಪಡೆಯ ಮುಂದೆ ಸವಾಲಿನ ಹಾದಿ   


ಚೆನ್ನೈ: ಅದೃಷ್ಟ ಎಂಬುದು ಲಿಫ್ಟ್‌ನಂತೆ, ಪ್ರಯತ್ನ ಎಂಬುದು ಮೆಟ್ಟಿಲಿನಂತೆ. ಲಿಫ್ಟ್ ಒಮ್ಮೊಮ್ಮೆ ಕೈಕೊಡಬಹುದು. ಆದರೆ ಮೆಟ್ಟಿಲಲ್ಲಿ ನಡೆದರೆ ಮಹಡಿ ತಲುಪುವುದು ನಿಖರ! ‘ಕಠಿಣ ಪ್ರಯತ್ನ ನಮ್ಮ ಕೈಬಿಡುವುದಿಲ್ಲ’ ಎಂದು ಇಂಗ್ಲೆಂಡ್ ತಂಡದ ನಾಯಕ ಆ್ಯಂಡ್ರ್ಯೂ ಸ್ಟ್ರಾಸ್ ಇದೇ ಕಾರಣಕ್ಕೆ ಹೇಳಿರಬಹುದು.

ಹಾಗಾಗಿ ‘ಮಾಡು ಇಲ್ಲವೇ ಮಡಿ’ ಪಂದ್ಯಕ್ಕೆ ಸಿದ್ಧರಾಗುತ್ತಿರುವ ಇಂಗ್ಲಿಷ್ ಆಟಗಾರರಿಗೆ ಈಗ ಪ್ರಯತ್ನವೊಂದೇ ಆಸರೆ.ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಬುಧವಾರ ಈ ತಂಡದವರು ನಡೆಸಿದ ತುಂಬಾ ಹೊತ್ತಿನ ಕಠಿಣ ಅಭ್ಯಾಸವೇ ಅದಕ್ಕೆ ಸಾಕ್ಷಿ. ತಮಿಳರ ನಾಡಿನ ಉರಿ ಬಿಸಿಲು ಕೂಡ ಅವರ ಈ ಪ್ರಯತ್ನಕ್ಕೆ ಅಡ್ಡಿಯಾಗಲಿಲ್ಲ.

ಆದರೆ ಮತ್ತೊಮ್ಮೆ ಒಂದು ಸಣ್ಣ ತಪ್ಪು ಎಸಗಿದರೂ ಸ್ಟ್ರಾಸ್ ಬಳಗದವರು ವಿಶ್ವಕಪ್‌ನಿಂದಲೇ ಹೊರಬೀಳಲಿದ್ದಾರೆ ಎಂಬುದು ನಿಜ. ಹಾಗಾಗಿ ಗುರುವಾರ ಇಲ್ಲಿ ನಡೆಯಲಿರುವ ವೆಸ್ಟ್‌ಇಂಡೀಸ್ ಎದುರಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯ ಇಂಗ್ಲೆಂಡ್ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಅದು ವಿಶ್ವಕಪ್‌ನಲ್ಲಿ ಉಳಿಯಲು ಆಂಗ್ಲ ಪಡೆಗೆ ಇರುವ ಏಕೈಕ ಅವಕಾಶ ಕೂಡ.

ಈ ತಂಡದವರು ಚಾಂಪಿಯನ್ ಆಗುವ ಫೇವರಿಟ್ ಎನಿಸಿರುವ ದಕ್ಷಿಣ ಆಫ್ರಿಕಾ ಎದುರು ಗೆದ್ದಿದ್ದಾರೆ, ಭಾರತ ವಿರುದ್ಧ ಟೈ ಮಾಡಿಕೊಂಡಿದ್ದಾರೆ. ಆದರೆ ದುರ್ಬಲ ಐರ್ಲೆಂಡ್ ಹಾಗೂ ಬಾಂಗ್ಲಾದೇಶದ ಮೇಲೆ ಸೋಲು ಕಂಡಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.

ಕೆಲವೊಮ್ಮೆ ಬಲಿಷ್ಠ ತಂಡಗಳಿಗಿಂತ ದುರ್ಬಲ ಎದುರಾಳಿಗಳಿಂದ ಕಲಿಯುವುದು ತುಂಬಾ ಇರುತ್ತದೆ ಎಂಬುದು ಈ ಸೋಲಿನ ಬಳಿಕ ನಾಯಕ ಸ್ಟ್ರಾಸ್ ಅರಿವೆಗೆ ಬಂದಂತಿದೆ. ಈಗ ಇಂಗ್ಲೆಂಡ್ ತನ್ನ ಆ ದೌರ್ಬಲ್ಯಕ್ಕೆ ಸವಾಲು ಎಸೆಯಲು ಸನ್ನದ್ಧವಾಗುತ್ತಿದೆ. ಗೆಲ್ಲಲೇಬೇಕಾದ ಪಂದ್ಯವಾಗಿರುವುದರಿಂದ ಈ ತಂಡದ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಿದೆ. ಆದರೂ ಅದಮ್ಯ ವಿಶ್ವಾಸದಲ್ಲಿದ್ದಾರೆ.

ಅಚ್ಚರಿ ಎಂದರೆ ಕ್ರಿಕೆಟ್‌ಗೆ ಜನ್ಮ ನೀಡಿದ ಇಂಗ್ಲೆಂಡ್ ಒಮ್ಮೆಯೂ ಏಕದಿನ ವಿಶ್ವಕಪ್ ಜಯಿಸಿಲ್ಲ. ಈ ಬಾರಿ ಕೂಡ ಕ್ವಾರ್ಟರ್ ಫೈನಲ್ ತಲುಪದೇ ಟೂರ್ನಿಯಿಂದ ನಿರ್ಗಮಿಸುವ ಹಂತದಲ್ಲಿದೆ. ಆದರೆ ಹಿಂದಿನ ಕಹಿ ಘಟನೆಗಳನ್ನು ನೆನಪಿಸಿಕೊಳ್ಳಲು ಈ ದೇಶದ ಆಟಗಾರರಿಗೆ ಇಷ್ಟವಿಲ್ಲ. ‘ಹಾಲು ಹುಳಿಯಾಗಿದೆ ಎಂದು ಕೊರಗುವುದರಿಂದ ಯಾವುದೇ ಪ್ರಯೋಜನವಿಲ್ಲ. ಕೊರಗುವುದರಿಂದ ಹಾಲು ಮತ್ತೆ ಸರಿಯಾಗುವುದಿಲ್ಲ’ ಎಂದು ಈ ತಂಡದ ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್ ಹೇಳಿರುವುದೇ ಅದಕ್ಕೆ ಸಾಕ್ಷಿ.

ವಿಪರ್ಯಾಸವೆಂದರೆ ಇಂಗ್ಲಿಷ್ ಆಟಗಾರರು ಕಳೆದ ಆರು ತಿಂಗಳಿಂದ ಬಿಡುವಿಲ್ಲದೇ ಕ್ರಿಕೆಟ್ ಆಡುತ್ತಿದ್ದಾರೆ. ಇದು ಈ ಆಟಗಾರರ ದೇಹ ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರಿದಂತಿದೆ. ಆದರೆ ಸೋಲಿಗೆ ಇದೇ ಕಾರಣ ಎಂಬುದನ್ನು ನಾಯಕ ಸ್ಟ್ರಾಸ್ ಒಪ್ಪುವುದಿಲ್ಲ. ‘ನಾವು ಇರುವುದೇ ಕ್ರಿಕೆಟ್ ಆಡಲು’ ಎನ್ನುತ್ತಾರೆ. 

ಏನೇ ಇರಲಿ, ಗುರುವಾರ ಕೆರಿಬಿಯನ್ ನಾಡಿನ ತಂಡದ ಎದುರು ಗೆದ್ದರಷ್ಟೆ ಇಂಗ್ಲೆಂಡ್‌ಗೆ ಉಳಿಗಾಲ. ವಾರದ ಹಿಂದೆ ಇದೇ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿರುವ ಈ ತಂಡದವರು ಈಗ ಮುಂದಿನ ತಡೆಯನ್ನು ಯಶಸ್ವಿಯಾಗಿ ದಾಟುವ ಭರವಸೆ ಹೊಂದಿದ್ದಾರೆ. ಇಲ್ಲಿ ಗೆದ್ದರೆಷ್ಟೇ ಸಾಲದು, ಉಳಿದ ತಂಡಗಳ ಫಲಿತಾಂಶದ ಮೇಲೆ ಈ ತಂಡದ ಮುಂದಿನ ದಾರಿ ಅವಲಂಬಿತವಾಗಿದೆ.

ಆಹಾರದ ವ್ಯತ್ಯಾಸದಿಂದಾಗಿ ಜ್ವರ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ನಾಯಕ ಸ್ಟ್ರಾಸ್,  ಸ್ವಾನ್ ಹಾಗೂ ಜೊನಾಥನ್ ಟ್ರಾಟ್ ಈಗ ಸುಧಾರಿಸಿಕೊಂಡಿದ್ದಾರೆ. ಆದರೆ ವೇಗಿ ಅಜ್ಮಲ್ ಶಹ್ಜಾದ್ ಇನ್ನೂ ಚೇತರಿಸಿಕೊಂಡಿಲ್ಲ. ಹಾಗಾಗಿ ದುಬಾರಿ ಆಗುತ್ತಿರುವ ಮತ್ತೊಬ್ಬ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರನ್ನು ಕಣಕ್ಕಿಳಿಸುವುದು ಅನಿವಾರ್ಯವಾಗಿದೆ.ವೆಸ್ಟ್‌ಇಂಡೀಸ್ ತಂಡದ ಹಾದಿ ಕೂಡ ಅಷ್ಟೇನು ಸುಗಮವಾಗಿಲ್ಲ. 1975, 79ರಲ್ಲಿ ಚಾಂಪಿಯನ್ ಆಗಿದ್ದ ತಂಡ ಈಗ ಪರದಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.

ಈ ವಿಶ್ವಕಪ್‌ನಲ್ಲಿ ವಿಂಡೀಸ್ ಗೆದ್ದಿರುವ ಮೂರು ಪಂದ್ಯಗಳು ಐರ್ಲೆಂಡ್, ಬಾಂಗ್ಲಾದೇಶ ಹಾಗೂ ಹಾಲೆಂಡ್‌ನಂತಹ ದುರ್ಬಲ ದೇಶದ ಎದುರು ಬಂದಿವೆ. ಆದರೆ ಬಲಿಷ್ಠ ದಕ್ಷಿಣ ಆಫ್ರಿಕಾ ಎದುರು ಸೋಲು ಕಂಡಿದೆ. ಹಾಗಾಗಿ ಈ ತಂಡದ ಮುಂದೆ ಕೂಡ ದೊಡ್ಡ ಸವಾಲಿದೆ. ಇದು ಸೇರಿ ಈ ತಂಡಕ್ಕೆ ಎರಡು ಪಂದ್ಯಗಳಿವೆ. ಒಂದು ಪಂದ್ಯದಲ್ಲಿ ಗೆದ್ದರೆ ಕ್ವಾರ್ಟರ್ ಫೈನಲ್ ಸ್ಥಾನ ಖಚಿತ. ಕ್ರಿಸ್ ಗೇಲ್ ಫಿಟ್ ಆಗಿರುವುದು ಈ ತಂಡದ ವಿಶ್ವಾಸ ಹೆಚ್ಚಿಸಿದೆ. ಸ್ಪಿನ್ನರ್ ಸ್ನೇಹಿ ಪಿಚ್ ಇದಾಗಿರುವುದರಿಂದ ಉಭಯ ತಂಡಗಳು ತಲಾ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದರೆ ಅಚ್ಚರಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.