ADVERTISEMENT

ಕ್ಷಮೆಯಾಚಿಸಿದ ರೈನಾ, ಜಡೇಜ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 19:59 IST
Last Updated 9 ಜುಲೈ 2013, 19:59 IST

ನವದೆಹಲಿ (ಪಿಟಿಐ): ಕೆರಿಬಿಯನ್ ನಾಡಿನಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ವಿಂಡೀಸ್ ವಿರುದ್ಧದ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಮಾತಿನ ಚಕಮಕಿ ನಡೆಸ್ದ್ದಿದ ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜ ಕೊನೆಗೂ ಕ್ಷಮೆಯಾಚಿಸಿದ್ದಾರೆ.

ಇಬ್ಬರೂ ಆಟಗಾರರು ತಂಡದ ಮ್ಯಾನೇಜರ್ ಎಂ.ವಿ.ಶ್ರೀಧರ್ ಅವರೊಂದಿಗೆ ಚರ್ಚಿಸಿದ್ದು, ಕ್ರೀಡಾಂಗಣದಲ್ಲಿನ ನಡವಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

`ತಂಡದ ಮ್ಯಾನೇಜರ್ ಜೊತೆಗೆ ರೈನಾ ಹಾಗೂ ಜಡೇಜ ಮಾತನಾಡಿದ್ದಾರೆ. ಕ್ರೀಡಾಂಗಣದಲ್ಲಿನ ತಮ್ಮ ವರ್ತನೆಗೆ ಉಭಯ ಆಟಗಾರರು ಷರತ್ತುರಹಿತ ಕ್ಷಮೆಯಾಚಿಸಿದ್ದಾರೆ. ಇಂತಹ ಘಟನೆ ಮತ್ತೊಮ್ಮೆ ಪುನರಾವರ್ತನೆಯಾಗುವುದಿಲ್ಲ ಎಂಬ ಭರವಸೆ ನೀಡಿದ್ದಾರೆ' ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ನಡುವೆ `ಘಟನೆ ಸಂಬಂಧ ವರದಿ ನೀಡುವಂತೆ ತಂಡದ ಮ್ಯಾನೇಜರ್ ಅವರನ್ನು ಕೋರಲಾಗಿದೆ' ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಸೋಮವಾರವಷ್ಟೇ ತಿಳಿಸಿದ್ದರು. ಶುಕ್ರವಾರ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ರೈನಾ ಅವರು ಸುನಿಲ್ ನಾರಾಯಣ್ ಬಾರಿಸಿದ ಚೆಂಡನ್ನು ಎರಡು ಬಾರಿ ಕೈ ಚೆಲ್ಲಿದ್ದರು.

ಇದಾದ ಬಳಿಕ 34 ಓವರ್‌ನ 5ನೇ ಎಸೆತದಲ್ಲಿ ಜಡೇಜ, ನಾರಾಯಣ್ ಅವರ ವಿಕೆಟ್‌ದಾಗ ರೈನಾ ಬಳಿ ತೆರಳಿ ಏನನ್ನೊ ಹೇಳಿದ್ದರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ನಾಯಕ ವಿರಾಟ್ ಕೊಹ್ಲಿ ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದರು. ಈ ಘಟನೆ ಭಾರತ ತಂಡದ ಡ್ರೇಸಿಂಗ್ ಕೋಣೆಯಲ್ಲಿ ಹೊಂದಾಣಿಕೆಯ ಕೊರತೆ ಇದೆ ಎಂಬ ಚರ್ಚೆಗೆ ನಾಂದಿ ಹಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT