ADVERTISEMENT

`ಖಾಸಗಿ ಅಕಾಡೆಮಿ ನಡೆಸುವಂತಿಲ್ಲ'

ಗೋಪಿಚಂದ್ ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಮುಂಬೈ (ಪಿಟಿಐ): ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಪುಲ್ಲೇಲ ಗೋಪಿಚಂದ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಬಾಂಬೆ ಹೈಕೋಟ್, ಕೋಚ್ ಆಗಿದ್ದುಕೊಂಡು ಖಾಸಗಿ ಅಕಾಡೆಮಿ ನಡೆಸುತ್ತಿರುವುದು `ನೈತಿಕ'ವಾಗಿ ತಪ್ಪು ಎಂದು ಆಭಿಪ್ರಾಯಪಟ್ಟಿದೆ.

`ಕೋಚ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥರು ಖಾಸಗಿ ಅಕಾಡೆಮಿ ನಡೆಸಬಾರದು. ಅವರೊಬ್ಬರು ಶ್ರೇಷ್ಠ ಕೋಚ್ ಆಗಿರಬಹುದು. ಅದರೆ ನ್ಯಾಯದ ದೃಷ್ಟಿಯಿಂದ ಇದು ಸರಿಯಲ್ಲ. ಆಯ್ಕೆ ಸಮಿತಿಯ ಭಾಗವಾಗಿರುವ ರಾಷ್ಟ್ರೀಯ ತಂಡದ ಕೋಚ್ ಖಾಸಗಿ ಅಕಾಡೆಮಿ ನಡೆಸಬಾರದು' ಎಂದು ಮುಖ್ಯ ನ್ಯಾಯಮೂರ್ತಿ ಮೋಹಿತ್ ಶಾ ಮತ್ತು ನ್ಯಾಯಮೂರ್ತಿ ಎ.ವಿ. ಮೊಹ್ತಾ ಸೋಮವಾರ ಹೇಳಿದರು.

ಬ್ಯಾಡ್ಮಿಂಟನ್ ಆಟಗಾರ್ತಿ ಪ್ರಜಕ್ತಾ ಸಾವಂತ್ ನೀಡಿದ್ದ ದೂರಿನ ವಿಚಾರಣೆ ನಡೆಸುವ ಸಂದರ್ಭ ಬಾಂಬೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಹೈದರಾಬಾದ್‌ನಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಪ್ರಜಕ್ತಾ ಅವರಿಗೆ ಗೋಪಿಚಂದ್ ಅವಕಾಶ ನೀಡಿರಲಿಲ್ಲ. ಇದರಿಂದ ಹೈಕೋರ್ಟ್ ಮೊರೆಹೋಗಿದ್ದ ಪ್ರಜಕ್ತಾ ಅವರು `ಗೋಪಿಚಂದ್ ಮಾನಸಿಕ ಕಿರುಕುಳ ನೀಡಿದ್ದಾರೆ' ಎಂದು ಆರೋಪಿಸಿದ್ದರು.

ಪ್ರಜಕ್ತಾ ಅಕ್ಟೋಬರ್ 4 ರಿಂದ ಡಿಸೆಂಬರ್ 12ರ ವರೆಗೆ ನಡೆಯುವ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ತಾನು ಬಯಸಿದ ಜೊತೆಗಾರರೊಂದಿಗೆ ಆಡಲು ಅವಕಾಶ ನೀಡಬೇಕೆಂದು ಪ್ರಜಕ್ತಾ ಕೋರಿದ್ದರು. ಇದಕ್ಕೆ ಗೋಪಿಚಂದ್ ಒಪ್ಪಿರಲಿಲ್ಲ. ಆ ಬಳಿಕ ಇಬ್ಬರ ನಡುವೆ `ವೈರತ್ವ' ಬೆಳೆದಿತ್ತು. ಬಾಂಬೆ ಹೈಕೋರ್ಟ್ ನವೆಂಬರ್ 6 ರಂದು ನೀಡಿದ್ದ ತೀರ್ಪಿನಲ್ಲಿ ಪ್ರಜಕ್ತಾ ಅವರನ್ನು ಶಿಬಿರಕ್ಕೆ ಸೇರಿಸಿಕೊಳ್ಳುವಂತೆ ಭಾರತ ಬ್ಯಾಡ್ಮಿಂಟನ್ ಸಂಸ್ಥೆಗೆ ಆದೇಶಿಸಿತ್ತು. ಹೈಕೋರ್ಟ್‌ನ ತೀರ್ಮಾನವನ್ನು ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಸ್ವಾಗತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.