ADVERTISEMENT

ಗರಿಷ್ಠ ಮೊತ್ತದ ದಾಖಲೆ ಬರೆದು ತ್ರಿಕೋನ ಕ್ರಿಕೆಟ್‌ ಸರಣಿ ಗೆದ್ದ ಆಸ್ಟ್ರೇಲಿಯಾ

ಏಜೆನ್ಸೀಸ್
Published 31 ಮಾರ್ಚ್ 2018, 13:17 IST
Last Updated 31 ಮಾರ್ಚ್ 2018, 13:17 IST
ಸರಣಿ ಜಯದ ಸಂಭ್ರಮದಲ್ಲಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡ
ಸರಣಿ ಜಯದ ಸಂಭ್ರಮದಲ್ಲಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡ   

ಮುಂಬೈ: ಮಹಿಳಾ ಟಿ20 ಕ್ರಿಕೆಟ್‌ ಮಾದರಿಯಲ್ಲಿ ಗರಿಷ್ಠ ರನ್‌ ದಾಖಲೆ ಬರೆದ ಆಸ್ಟ್ರೇಲಿಯಾ, ಇಂಗ್ಲೆಂಡ್‌ ತಂಡದೆದುರು ಇಲ್ಲಿ ನಡೆದ ತ್ರಿಕೋನ ಕ್ರಿಕೆಟ್‌ ಸರಣಿಯ ಫೈನಲ್‌ ಪಂದ್ಯದಲ್ಲಿ 57ರನ್‌ ಅಂತರದ ಜಯ ಸಾಧಿಸಿತು.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ ತಂಡ ನಾಯಕಿ ಮೆಗ್‌ ಲ್ಯಾನಿಂಗ್‌ ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ 209 ರನ್‌ ಕಲೆ ಹಾಕಿತು. ಇದು ಮಹಿಳಾ ಟಿ20 ಕ್ರಿಕೆಟ್‌ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ದಾಖಲಾದ ಗರಿಷ್ಠ ಮೊತ್ತವಾಯಿತು. 2010ರಲ್ಲಿ ದಕ್ಷಿಣ ಆಫ್ರಿಕಾ ತಂಡ ನೆದರ್‌ಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ 1 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿದ್ದುದು ಈವರೆಗಿನ ಗರಿಷ್ಠ ಮೊತ್ತವಾಗಿತ್ತು.

45 ಎಸೆತಗಳಲ್ಲಿ 16 ಬೌಂಡರಿ 1 ಸಿಕ್ಸರ್‌ ನೆರವಿನಿಂದ 88 ರನ್‌ಗಳಿಸಿ ಅಜೇಯವಾಗಿ ಉಳಿದ ಲ್ಯಾನಿಂಗ್‌ ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಜತೆ ಅಬ್ಬರಿಸಿದ ಎಲಿಸಾ ವಿಲ್ಲಾನಿ ಕೇವಲ 30 ಎಸೆತಗಳಲ್ಲಿ 51ರನ್‌ ಗಳಿಸಿ ಸಂಭ್ರಮಿಸಿದರು.

ADVERTISEMENT

ಬೃಹತ್‌ ಮೊತ್ತದ ಬೆನ್ನುಹತ್ತಿದ ಇಂಗ್ಲೆಂಡ್‌ ಕೇವಲ 14ರನ್‌ ಗಳಿಸುವಷ್ಟರಲ್ಲಿ 2 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಈ ವೇಳೆ ಆರಂಭಿಕ ಆಟಗಾರ್ತಿ ಡೆನಿಯಲ್‌ ವ್ಯಾಟ್‌(34) ಜತೆ ಸೇರಿದ ನಟಾಲಿಯಾ ಸ್ಕೀವರ್‌(50) ಅರ್ಧ ಶತಕ ಗಳಿಸಿದರು. ಇದರಿಂದಾಗಿ ಇಂಗ್ಲೆಂಡ್ ತಂಡ ಅಲ್ಪ ಮೊತ್ತಕ್ಕೆ ಕುಸಿಯುವ ಆತಂಕದಿಂದ ಪಾರಾಯಿತು.

ಅಂತಿಮವಾಗಿ ಇಂಗ್ಲೆಂಡ್‌ ನಿಗದಿತ 20ಓವರ್‌ಗಳ ಮುಕ್ತಾಯಕ್ಕೆ 9 ವಿಕೆಟ್‌ ಕಳೆದುಕೊಂಡು 152 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್‌

ಆಸ್ಟ್ರೇಲಿಯಾ: ನಿಗದಿತ 20ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 209

ಮೆಗ್‌ ಲ್ಯಾನಿಂಗ್‌ ಅಜೇಯ 88ರನ್‌, ಎಲಿಸಾ ವಿಲ್ಲಾನಿ 51ರನ್‌, ಅಲಿಸ್ಸಾ ಹೀಲಿ 33ರನ್‌

ಜೆನ್ನಿ ಗನ್‌ 38ಕ್ಕೆ 2 ವಿಕೆಟ್‌

ಇಂಗ್ಲೆಂಡ್‌: ನಿಗದಿತ 20ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 152

ಡೆನಿಯಲ್‌ ವ್ಯಾಟ್‌ 34 ರನ್‌, ನಟಾಲಿಯಾ ಸ್ಕೀವರ್‌ 50 ರನ್‌, ಆ್ಯಮಿ ಎಲೆನ್‌ ಜೋನ್ಸ್‌ 30

ಮೆಗನ್‌ ಸ್ಕಟ್‌ 14ಕ್ಕೆ 3 ವಿಕೆಟ್‌, ಡೆಲಿಸ್ಸಾ ಕಿಮ್ಮಿನ್ಸ್‌ 35ಕ್ಕೆ 2 ವಿಕೆಟ್‌, ಆಶ್ಲೇ ಗ್ರಾಂಡರ್‌ 20ಕ್ಕೆ 2 ವಿಕೆಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.