ಬೆಂಗಳೂರು: ಅನುರಾ ರೋಹನ ಮತ್ತು ಎಸ್‌ಎಸ್‌ಪಿ ಚೌರಾಸಿಯ ತೋರಿದ ಉತ್ತಮ ಪ್ರದರ್ಶನದ ನೆರವಿನಿಂದ ಚೆನ್ನೈ ತಂಡ ಇಲ್ಲಿ ಆರಂಭವಾದ ಲೂಯಿಸ್ ಫಿಲಿಪ್ ಕಪ್ ಗಾಲ್ಫ್ ಚಾಂಪಿಯನ್‌ಷಿಪ್‌ನ ಮೊದಲ ದಿನ ಮುನ್ನಡೆ ಪಡೆದಿದೆ.
ಕರ್ನಾಟಕ ಗಾಲ್ಫ್ ಸಂಸ್ಥೆ ಕೋರ್ಸ್‌ನಲ್ಲಿ ಬುಧವಾರ ಅನುರಾ (68) ನಿಖರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಚೌರಾಸಿಯ ಸ್ಪರ್ಧೆ ಕೊನೆಗೊಳಿಸಲು 70 ಅವಕಾಶಗಳನ್ನು ಬಳಸಿಕೊಂಡರು. ಇದರಿಂದ ಚೆನ್ನೈ ತಂಡ (138) ಮುನ್ನಡೆಯನ್ನು ತನ್ನದಾಗಿಸಿಕೊಂಡಿತು.
ಪುರವಂಕರ ಬೆಂಗಳೂರು, ಚಂಡೀಗಡ ಮತ್ತು ದೆಹಲಿ (139) ತಂಡಗಳು ಬಳಿಕದ ಸ್ಥಾನಗಳಲ್ಲಿವೆ. ಅನಿರ್ಬನ್ ಲಾಹಿರಿ (69) ಹಾಗೂ ಮಾನವ್ ಜೈನ್ (70) ಬೆಂಗಳೂರು ಪರ ಮಿಂಚಿನ ಪ್ರದರ್ಶನ ನೀಡಿದರು.
ಚಂಡೀಗಡ ತಂಡದ ಪ್ರಭಾವಿ ಪ್ರದರ್ಶನಕ್ಕೆ ಕಾರಣರಾದದ್ದು ಹರೇಂದ್ರ ಪಿ ಗುಪ್ತಾ. ಅವರು ಸ್ಪರ್ಧೆ ಕೊನೆಗೊಳಿಸಲು 68 ಸ್ಟ್ರೋಕ್‌ಗಳನ್ನು ಬಳಸಿಕೊಂಡರು. ಈ ತಂಡದ ಇನ್ನೊಬ್ಬ ಸ್ಪರ್ಧಿ ಗಗನ್‌ಜೀತ್ ಭುಲ್ಲರ್ 71 ಅವಕಾಶಗಳಲ್ಲಿ ಸ್ಪರ್ಧೆ ಕೊನೆಗೊಳಿಸಿದರು.
ಜೀವ್ ಮಿಲ್ಖಾ ಸಿಂಗ್ ಪ್ರತಿನಿಧಿಸುತ್ತಿರುವ ಶುಭ್‌ಕಾಮನ್ ನೋಯ್ಡಾ ತಂಡ (144) ಕೊನೆಯ ಸ್ಥಾನದಲ್ಲಿದೆ. ಜೀವ್ (71) ನಿಖರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ನಾಲ್ಕರಘಟ್ಟದಲ್ಲಿ ಸ್ಥಾನ ಪಡೆಯಬೇಕಾದರೆ ನೋಯ್ಡಾ ತಂಡಕ್ಕೆ ಗುರುವಾರ ಕಠಿಣ ಪ್ರಯತ್ನ ನಡೆಸುವುದು ಅಗತ್ಯ.
ಡಿಎಲ್‌ಎಫ್ ಗುಡಗಾಂವ್ ತಂಡ (142) ಕೂಡಾ ನಿರೀಕ್ಷಿತ ಹೋರಾಟ ತೋರಲಿಲ್ಲ. ಜ್ಯೋತಿ ರಾಂಧವ (70) ಹಾಗೂ ಹಿಮ್ಮತ್ ಸಿಂಗ್ ರಾಯ್ (72) ಲಯ ಕಂಡುಕೊಳ್ಳುವಲ್ಲಿ ವಿಫಲರಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.