ADVERTISEMENT

ಗುರಿ ಸ್ಪಷ್ಟ; ಭಯಗೊಳಿಸುವುದಿಲ್ಲ ಕಷ್ಟ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2011, 18:30 IST
Last Updated 9 ಮಾರ್ಚ್ 2011, 18:30 IST

ಬೆಂಗಳೂರು: ಉಪಖಂಡದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನು ಆಡಲು ಬಂದಾಗಿನಿಂದ ಕಳೆದ ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾದವರಿಗೆ ವಿಚಿತ್ರ ಅನುಭವ. ಅದರಲ್ಲಿಯೂ ಭಾರತದಲ್ಲಿ ಮಾಧ್ಯಮಗಳ ಗಮನ ತಮ್ಮ ಮೇಲೆ ನಿರೀಕ್ಷಿಸಿದಷ್ಟು ಇಲ್ಲ ಎನ್ನುವುದೂ ಆಸೀಸ್ ಪಡೆಯ ಆಟಗಾರರನ್ನು ಅಚ್ಚರಿಗೊಳಿಸಿದೆ.

ಕಳೆದ ವರ್ಷದ ಅಂತ್ಯದಲ್ಲಿ ಭಾರತಕ್ಕೆ ಬಂದಿದ್ದಾಗ ರಿಕಿ ಪಾಂಟಿಂಗ್ ಬಳಗವನ್ನು ಬೆನ್ನಟ್ಟಿದ್ದ ಹಾಗೂ ಸಂದರ್ಶನಕ್ಕಾಗಿ ಮುಗಿಬಿದ್ದಿದ್ದ ಮಾಧ್ಯಮ ವರದಿಗಾರರು ಹಾಗೂ ಕ್ರೀಡಾ ಪತ್ರಕರ್ತರ ಸಂಖ್ಯೆ ಅಪಾರ. ಆದರೆ ವಿಶ್ವಕಪ್ ಕ್ರಿಕೆಟ್ ಪಂದ್ಯಗಳನ್ನು ಆಡಲು ಬಂದಿರುವಾಗ ಇರುವ ಸ್ಥಿತಿಯೇ ಬೇರೆ. ಬುಧವಾರ ಉದ್ಯಾನನಗರಿಯಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಯಲ್ಲಿ ಬೆಳಿಗ್ಗೆಯಿಂದಲೇ ಅಭ್ಯಾಸ ನಡೆಸಿದ ಕಾಂಗರೂಗಳ ನಾಡಿನ ಆಟಗಾರರತ್ತ ಫೋಕಸ್ ಆದ ಕ್ಯಾಮೆರಾಗಳ ಸಂಖ್ಯೆಯೂ ತೀರ ಕಡಿಮೆ. ಇಂಥ ವಾತಾವರಣವನ್ನು ಆಸ್ಟ್ರೇಲಿಯಾದಂಥ ದೊಡ್ಡ ತಂಡದವರು ಭಾರತದಲ್ಲಿ ಹಿಂದೆಂದೂ ಕಂಡಿದ್ದೇ ಇಲ್ಲ.

ಈ ವಿಷಯವಾಗಿ ಆಸೀಸ್ ಪಡೆಯ ಆಟಗಾರರನ್ನು ಕೇಳಿದರೆ ‘ಒಳ್ಳೆಯದು...’ ಎಂದು ವ್ಯಂಗ್ಯವಾಗಿ ನಕ್ಕು ಸುಮ್ಮನಾಗುತ್ತಾರೆ. ಆದರೆ ಅವರಿಗೂ ಗೊತ್ತು; ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ಜಂಟಿ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ತಮ್ಮ ತಂಡವನ್ನು ಚಾಂಪಿಯನ್ ಪಟ್ಟ ಪಡೆಯುವ ನೆಚ್ಚಿನ ತಂಡವಾಗಿ ಪರಿಗಣಿಸಿಲ್ಲ ಎನ್ನುವುದು. ಈ ಅಂಶವು ‘ಪಂಟರ್’ ಪಡೆಯ ಕ್ರಿಕೆಟಿಗರು ಬೇಸರಗೊಳ್ಳುವಂತೆ ಮಾಡಿಯೇ ಇಲ್ಲ!

ಸತತ ನಾಲ್ಕನೇ ಬಾರಿಗೆ ಚಾಂಪಿಯನ್ ಪಟ್ಟವನ್ನು ಪಡೆಯುವ ಕನಸು ಕಾಣುತ್ತಿರುವ ಆಸ್ಟ್ರೇಲಿಯಾ ತನ್ನ ಗುರಿಯತ್ತ ಮಾತ್ರ ಗಮನ ಕೇಂದ್ರೀಕರಿಸಿದೆ. ಆದ್ದರಿಂದಲೇ ಸ್ಪಷ್ಟವಾದ ಗುರಿಯ ಕಡೆಗೆ ದಿಟ್ಟ ಹೆಜ್ಜೆಯಿಟ್ಟು ಸಾಗುವತ್ತ ಮಾತ್ರ ಅವರು ಪ್ರಯತ್ನ ನಡೆಸಿದ್ದಾರೆ. ಮಾಧ್ಯಮದವರು ಎಷ್ಟು ಮಹತ್ವ ನೀಡುತ್ತಾರೆ ಎನ್ನುವುದು ತಂಡದ ಸಾಮರ್ಥ್ಯವನ್ನು ಅಳೆಯುವ ಮಾನದಂಡವಲ್ಲ ಎನ್ನುವುದಂತೂ ‘ಪಂಟರ್’ ಸ್ಪಷ್ಟ ನುಡಿ.

1987ರಲ್ಲಿ ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ ಆಗಿ ಮೆರೆದಿದ್ದ ಆಸ್ಟ್ರೇಲಿಯಾ ಕಳೆದ ಮೂರು ವಿಶ್ವಕಪ್‌ಗಳಲ್ಲಿ (1999, 2003 ಹಾಗೂ 2007) ಅಗ್ರಪಟ್ಟವನ್ನು ಬಿಟ್ಟುಕೊಟ್ಟಿಲ್ಲ. ಈ ಬಾರಿಯೂ ಅಂಥ ಸಾಧನೆ ಮಾಡುವ ವಿಶ್ವಾಸವನ್ನು ಕಾಂಗರೂಗಳ ನಾಡಿನ ಕ್ರಿಕೆಟ್ ಪಡೆ ಹೊಂದಿದೆ. ಆದರೆ ಕ್ರಿಕೆಟ್ ಪ್ರೇಮಿಗಳು ಹಾಗೂ ಪಂಡಿತರ ಯೋಚನೆ ಮತ್ತು ವಿಶ್ಲೇಷಣೆಯಲ್ಲಿ ಆಸ್ಟ್ರೇಲಿಯಾ ‘ಫೇವರಿಟ್’ ಎನ್ನುವ ಅಭಿಪ್ರಾಯ ಹೊರಹೊಮ್ಮಿಲ್ಲ.

ಇದೂ ಮಾಧ್ಯಮಗಳನ್ನು ತನ್ನತ್ತ ಸೆಳೆಯುವಲ್ಲಿ ಆಸ್ಟ್ರೇಲಿಯಾ ಈ ಬಾರಿ ವಿಫಲವಾಗಿರುವುದಕ್ಕೆ ಕಾರಣವೆಂದು ಸ್ಪಷ್ಟವಾಗಿ ಹೇಳಬಹುದು. ಇಂಥ ಅಭಿಪ್ರಾಯಗಳು ಹಾಗೂ ಕಾರಣಗಳು ಏನೇ ಇರಲಿ ಪಾಂಟಿಂಗ್ ಬಳಗದವರು ‘ಎ’ ಗುಂಪಿನಿಂದ ಕ್ವಾರ್ಟರ್‌ಫೈನಲ್‌ಗೆ ಏರುವ ಛಲದೊಂದಿಗೆ ಆಟವಾಡುತ್ತಿದ್ದಾರೆ. ಕೊಲಂಬೊದಲ್ಲಿ ಮಳೆಯ ಕಾರಣ ಶ್ರೀಲಂಕಾ ವಿರುದ್ಧದ ಪಂದ್ಯವು ರದ್ದಾಯಿತು. ಆದ್ದರಿಂದ ಅಲ್ಲಿಯೇ ‘ಎ’ ಗುಂಪಿನ ಮೂರನೇ ಪಂದ್ಯ ಗೆದ್ದು, ಎಂಟರ ಘಟ್ಟಕ್ಕೆ ಪ್ರವೇಶ ಪಡೆಯುವ ಅವಕಾಶ ತಪ್ಪಿತು. ಆದರೂ ನಿರಾಸೆಗೊಂಡಿಲ್ಲ. ಬಾಕಿ ಮೂರು ಪಂದ್ಯಗಳಲ್ಲಿ ವಿಜಯ ಯಾತ್ರೆ ಮುಂದುವರಿಸುವ ಸತ್ವವಂತೂ ಈ ತಂಡದಲ್ಲಿದೆ.

ನೆಚ್ಚಿನ ತಂಡವೆಂದು ಪರಿಗಣಿಸದಿರುವುದನ್ನು ಆಸ್ಟ್ರೇಲಿಯಾದವರು ಸಕಾರಾತ್ಮಕ ಅಂಶವಾಗಿ ಸ್ವೀಕರಿಸಿದ್ದಾರೆ. ಒತ್ತಡದಿಂದ ಮುಕ್ತವಾಗಿ ಆಡುವುದಕ್ಕೆ ಇಂಥ ವಾತಾವರಣ ಇರುವುದೇ ಒಳಿತು ಎನ್ನುತ್ತಾರೆ ಆಲ್‌ರೌಂಡರ್ ಶೇನ್ ವ್ಯಾಟ್ಸನ್. ‘ಮಾಧ್ಯಮಗಳ ಗಮನ ನಮ್ಮ ಮೇಲೆ ಇಲ್ಲದಿರುವುದಕ್ಕೆ ಬೇಸರವಿಲ್ಲ’ ಎಂದು ಕೂಡ ಅವರು ಸ್ಪಷ್ಟವಾಗಿ ಹೇಳಿದರು.ರಿಕಿ ಪಾಂಟಿಂಗ್ ನಾಯಕತ್ವದಲ್ಲಿ ‘ಹ್ಯಾಟ್ರಿಕ್’ ವಿಶ್ವಕಪ್ ವಿಜಯದ ಸಂಭ್ರಮ ಪಡೆಯುವ ಭರವಸೆಯೊಂದಿಗೆ ಮುನ್ನುಗ್ಗಿರುವ ಆಸ್ಟ್ರೇಲಿಯಾ ತಾನಿರುವ ‘ಎ’ ಗುಂಪಿನಲ್ಲಿ ಸದ್ಯ ನಾಲ್ಕನೇ ಸ್ಥಾನದಲ್ಲಿದೆ. ಲೀಗ್ ಹಣಾಹಣಿಗಳು ಮುಗಿಯುವ ಹೊತ್ತಿಗೆ ಎತ್ತರಕ್ಕೆ ಏರಿ ನಿಲ್ಲುವುದು ‘ಪಂಟರ್’ ಪಡೆಯ ಆಶಯ.

ಜಿಂಬಾಬ್ವೆ ಎದುರು ಆಡಿದ ಮೊದಲ ಲೀಗ್ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ಭಾರಿ ಬಲ ತೋರಲು ಸಾಧ್ಯವಾಗದಿದ್ದರೂ, 91 ರನ್‌ಗಳ ಅಂತರದ ವಿಜಯ ಸಾಧಿಸಿ ಸಮಾಧಾನಪಟ್ಟ ಆಸೀಸ್‌ಗೆ ಆ ಪಂದ್ಯದಲ್ಲಿ ಶೇನ್ ವ್ಯಾಟ್ಸನ್ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಅಷ್ಟೇ ಅಲ್ಲ ಮೊದಲ ಪಂದ್ಯದಲ್ಲಿಯೇ ‘ಪಂದ್ಯ ಶ್ರೇಷ್ಠ’ ಎನಿಸಿದ್ದರು. ನ್ಯೂಜಿಲೆಂಡ್ ವಿರುದ್ಧವೂ ಅರ್ಧ ಶತಕದ ಗಡಿದಾಟಿ ಬೆಳೆದು ಗಮನ ಸೆಳೆದಿದ್ದು ವಿಶೇಷ.

ಈ ಆರಂಭಿಕ ಬ್ಯಾಟ್ಸ್‌ಮನ್ ಪ್ರದರ್ಶನ ಮಟ್ಟವನ್ನು ಕಾಯ್ದುಕೊಂಡು ಸಾಗಿರುವುದು ಆಸ್ಟ್ರೇಲಿಯಾ ಒತ್ತಡದಿಂದ ಮುಕ್ತವಾಗುವಂತೆ ಮಾಡಿದೆ. ಸಾಂದರ್ಭಿಕ ಬೌಲರ್ ರೂಪದಲ್ಲಿಯೂ ವ್ಯಾಟ್ಸನ್ ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ನೆರವು ನೀಡಬಲ್ಲರು. ಆದ್ದರಿಂದಲೇ ಆಸ್ಟ್ರೇಲಿಯಾದ ಯಶಸ್ಸಿನಲ್ಲಿ ಅವರ ಪಾತ್ರ ಮಹತ್ವದ್ದಾಗಲಿದೆ ಎಂದು ಸ್ಪಷ್ಟವಾಗಿ ಹೇಳಬಹುದು.‘ಉಪಖಂಡದಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಆಡುವುದು ಕಷ್ಟ ಎನಿಸಿಲ್ಲ’ ಎಂದ ವ್ಯಾಟ್ಸನ್ ‘ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೀನ್ಯಾ ವಿರುದ್ಧ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಬ್ಯಾಟಿಂಗ್ ಸತ್ವವನ್ನು ಕಾಯ್ದುಕೊಂಡು ಹೋಗಬೇಕು. ಬ್ಯಾಟಿಂಗ್ ಬಲವೇ ಈ ಬಾರಿಯ ವಿಶ್ವಕಪ್‌ನಲ್ಲಿ ಮಹತ್ವದ್ದಾಗಲಿದೆ’ ಎಂದು ಹೇಳಿದರು.

‘ಇಲ್ಲಿ ನಡೆದ ಮೂರು ಲೀಗ್ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಕಷ್ಟವೆನಿಸಿಲ್ಲ. ಚೆಂಡು ಸುಲಭವಾಗಿ ಬ್ಯಾಟ್‌ಗೆ ಬರುತ್ತದೆ. ಆದ್ದರಿಂದ ಮೊದಲು ಬ್ಯಾಟಿಂಗ್ ಮಾಡಿದರೆ ದೊಡ್ಡ ಮೊತ್ತ ಪೇರಿಸುವುದು, ಗುರಿಯನ್ನು ಬೆನ್ನಟ್ಟಬೇಕಾದರೆ ಆರಂಭದಲ್ಲಿಯೇ ತಂಡದ ಖಾತೆಗೆ ದೊಡ್ಡ ಮೊತ್ತದ ಕೊಡುಗೆ ನೀಡುವುದು ನನ್ನ ಉದ್ದೇಶ. ಆ ನಿಟ್ಟಿನಲ್ಲಿ ತಕ್ಕ ಪ್ರಯತ್ನ ಮಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.