ADVERTISEMENT

ಗೆಲುವಿನತ್ತ ರಾಯಲ್ಸ್ ಚಿತ್ತ

ಬ್ಯಾಟಿಂಗ್ ವೈಫಲ್ಯದಿಂದ ಹೊರಬರುವ ಸವಾಲಿನಲ್ಲಿ ವಾರಿಯರ್ಸ್

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ಪುಣೆ (ಪಿಟಿಐ): ಮೊದಲ ಗೆಲುವಿಗಾಗಿ ಪರದಾಡುತ್ತಿರುವ ಪುಣೆ ವಾರಿಯರ್ಸ್ ತಂಡಕ್ಕೆ ಪಾಯಿಂಟ್ ಪಟ್ಟಿಯಲ್ಲಿ ಖಾತೆ ತೆಗೆಯಲು ಮತ್ತೊಂದು ಅವಕಾಶ ಲಭಿಸಿದೆ. ಆದರೆ, ಸತತ ಎರಡು ಗೆಲುವು ಪಡೆದಿರುವ ರಾಜಸ್ತಾನ ರಾಯಲ್ಸ್ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ.

ಐಪಿಎಲ್ ಆರನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ನಡೆಯಲಿರುವ ಉಭಯ ತಂಡಗಳ ನಡುವಿನ ಹಣಾಹಣಿಗೆ ಇಲ್ಲಿನ ಸುಬ್ರತೊ ರಾಯ್ ಸಹಾರಾ ಕ್ರೀಡಾಂಗಣ ಸಜ್ಜುಗೊಂಡಿದೆ. ರಾಹುಲ್ ದ್ರಾವಿಡ್ ಸಾರಥ್ಯದ ರಾಯಲ್ಸ್ ತಂಡ ನಾಲ್ಕು ಅಂಕಗಳನ್ನು ಪಡೆದು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ರಾಯಲ್ಸ್ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಗೆಲುವು ಪಡೆದಿತ್ತು. ಸೋಮವಾರ ನಡೆದ ಪಂದ್ಯದಲ್ಲಿ ದ್ರಾವಿಡ್ ಪಡೆ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು 19 ರನ್‌ಗಳಿಂದ ಮಣಿಸಿತ್ತು. ಹಾಲಿ ಚಾಂಪಿಯನ್ನರನ್ನು ಮಣಿಸಿದ್ದು ರಾಯಲ್ಸ್ ತಂಡದ ವಿಶ್ವಾಸವನ್ನು ಉತ್ತುಂಗಕ್ಕೆ ಕೊಂಡೊಯ್ದಿದೆ.

ಭಾರತ ತಂಡದ ಮಾಜಿ ನಾಯಕ ದ್ರಾವಿಡ್, ಸ್ಟುವರ್ಟ್ ಬಿನ್ನಿ, ಅಜಿಂಕ್ಯ ರಹಾನೆ, ಬ್ರಾಡ್ ಹಾಡ್ಜ್, ಶೇನ್ ವಾಟ್ಸನ್ ರಾಯಲ್ಸ್ ತಂಡದ ಬಲಿಷ್ಠ ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ. ನೈಟ್ ರೈಡರ್ಸ್ ವಿರುದ್ಧ ಹಾಡ್ಜ್ ಔಟಾಗದೆ 46 ರನ್ ಗಳಿಸಿ ಫಾರ್ಮ್‌ಗೆ ಮರಳಿದ್ದಾರೆ. ರಾಯಲ್ಸ್ ಬೌಲಿಂಗ್ ವಿಭಾಗದಲ್ಲೂ ಬಲಿಷ್ಠವಾಗಿದೆ. ವೇಗಿಗಳಾದ ಎಸ್. ಶ್ರೀಶಾಂತ್, ಶಾನ್ ಟೈಟ್ ಪ್ರಮುಖ ಅಸ್ತ್ರ ಎನಿಸಿದ್ದಾರೆ.

ವೈಫಲ್ಯ ತುಂಬಿಕೊಳ್ಳುವ ಸವಾಲು: ಯುವರಾಜ್ ಸಿಂಗ್, ರಾಸ್ ಟೇಲರ್, ಮರ್ಲಾನ್ ಸ್ಯಾಮುಯೆಲ್ಸ್ ಅವರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳು ವಾರಿಯರ್ಸ್ ತಂಡದಲ್ಲಿದ್ದಾರೆ. ಆದರೂ ಈ ತಂಡಕ್ಕೆ ಬ್ಯಾಟಿಂಗ್ ವೈಫಲ್ಯದಿಂದ ಹೊರಬರಲು ಸಾಧ್ಯವಾಗಿಲ್ಲ. ಆರಂಭಿಕ ಜೋಡಿ ರಾಬಿನ್ ಉತ್ತಪ್ಪ, ಐಪಿಎಲ್‌ನಲ್ಲಿ ಮೊದಲ ಶತಕ ಗಳಿಸಿದ ದಾಖಲೆ ಹೊಂದಿರುವ ಮನೀಷ್ ಪಾಂಡೆ ಉತ್ತಮ ಆರಂಭ ನೀಡುವಲ್ಲಿ ವಿಫಲರಾಗಿದ್ದಾರೆ.

ಮೊದಲ ಪಂದ್ಯದಲ್ಲಿ ಎರಡು ರನ್ ಮಾತ್ರ ಗಳಿಸಿದ್ದ ಯುವರಾಜ್, ಎರಡನೇ ಪಂದ್ಯದಲ್ಲಿ ಆಡಿರಲಿಲ್ಲ. ಈಗ ಪೂರ್ಣವಾಗಿ ಫಿಟ್ ಆಗಿದ್ದು, ರಾಯಲ್ಸ್ ಎದುರಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

`ಯುವರಾಜ್ ಪೂರ್ಣವಾಗಿ ಫಿಟ್ ಆಗಿದ್ದು, ಗುರುವಾರದ ಪಂದ್ಯದಲ್ಲಿ ಆಡಲಿದ್ದಾರೆ. ತೊಡೆ ಸಂಧು ನೋವಿನಿಂದ ಬಳಲುತ್ತಿದ್ದ ಸ್ಯಾಮುಯೆಲ್ಸ್ ಸಹ ಚೇತರಿಸಿಕೊಂಡಿದ್ದಾರೆ' ಎಂದು ವಾರಿಯರ್ಸ್ ತಂಡದ ಕೋಚ್ ಆ್ಯಲನ್ ಡೂನಾಲ್ಡ್ ತಿಳಿಸಿದ್ದಾರೆ.

ವಾರಿಯರ್ಸ್ ತನ್ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿತ್ತು. ಎರಡನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಎದುರು ನಿರಾಸೆ ಕಂಡಿತ್ತು. ಕಿಂಗ್ಸ್ ಇಲೆವೆನ್ ವಿರುದ್ಧ ವಾರಿಯರ್ಸ್ ಕೇವಲ 99 ರನ್ ಕಲೆ ಹಾಕಿತ್ತು. ಆದ್ದರಿಂದ ಆ್ಯಂಜಲೊ ಮ್ಯಾಥ್ಯೂಸ್ ನೇತೃತ್ವದ ವಾರಿಯರ್ಸ್ ತಂಡ ಬ್ಯಾಟಿಂಗ್ ವಿಭಾಗ ಬಲಗೊಳ್ಳಬೇಕಿದೆ. ಇಲ್ಲವಾದರೆ ಇನ್ನೊಂದು ನಿರಾಸೆ ತಪ್ಪಿದ್ದಲ್ಲ.

ಪಂದ್ಯ ಆರಂಭ: ರಾತ್ರಿ 8ಕ್ಕೆ.
ಸ್ಥಳ: ಸುಬ್ರತೊ ರಾಯ್ ಸಹಾರಾ ಕ್ರೀಡಾಂಗಣ, ಪುಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.