ADVERTISEMENT

ಗೆಲುವಿನ ಮೂಲಕವೇ ನಮ್ಮ ಸಂದೇಶ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2011, 19:30 IST
Last Updated 26 ಮಾರ್ಚ್ 2011, 19:30 IST
ಗೆಲುವಿನ ಮೂಲಕವೇ ನಮ್ಮ ಸಂದೇಶ
ಗೆಲುವಿನ ಮೂಲಕವೇ ನಮ್ಮ ಸಂದೇಶ   

ಮೊಹಾಲಿ (ಚಂಡೀಗಡ): ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ಎಂದರೆ ಜನರಷ್ಟೇ ಅಲ್ಲ ಆಟಗಾರರೂ ಉದ್ವೇಗಕ್ಕೊಳಗಾಗುತ್ತಾರೆ. ಪಂದ್ಯ ಸೋತರೆ ಏನಾಗುತ್ತದೆ ಎಂಬ ಅರಿವು ಎರಡೂ ತಂಡಗಳ ಆಟಗಾರರಿಗೆ ಇದೆ. ವಿಶ್ವ ಕಪ್ ಕ್ರಿಕೆಟ್ ಆತಿಥ್ಯದಿಂದ ತಮ್ಮನ್ನು ಹೊರಗಿಟ್ಟದ್ದಕ್ಕಾಗಿ ಇಡೀ ಪಾಕಿಸ್ತಾನದ ಜನತೆಗೆ ಸಿಟ್ಟು ಬಂದಿದೆ. ಆ ಸಿಟ್ಟನ್ನು ವಿಶ್ವ ಕಪ್ ಗೆಲ್ಲುವ ಮೂಲಕ ವ್ಯಕ್ತಪಡಿಸಿ, ಕ್ರಿಕೆಟ್ ಜಗತ್ತಿಗೆ ಪಾಕಿಸ್ತಾನ ಬಲಿಷ್ಠ ರಾಷ್ಟ್ರ ಎಂದು ತೋರಿಸಿಕೊಡುವುದು ಆ ತಂಡದ ಗುರಿಯಾಗಿದೆ.

ಶುಕ್ರವಾರವೇ ಚಂಡೀಗಡಕ್ಕೆ ಬಂದಿಳಿದಿರುವ ಪಾಕಿಸ್ತಾನ ತಂಡದವರು, ಶನಿವಾರ ಮಧ್ಯಾಹ್ನ ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಅಭ್ಯಾಸ ನಡೆಸಿದರು. ಅದಕ್ಕೆ ಮೊದಲು ಆಲ್‌ರೌಂಡರ್ ಮಹಮ್ಮದ್ ಹಫೀಜ್ ಶನಿವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಮಹಮ್ಮದ್ ಹಫೀಜ್ ಬಹಳ ಹಾರ್ದಿಕವಾಗಿ, ಸ್ಪಷ್ಟವಾಗಿ ಭಾರತದ ಪತ್ರಕರ್ತರ ಜೊತೆ ಮಾತನಾಡಿದರು. ಸಚಿನ್ ತೆಂಡೂಲ್ಕರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಅವರು, ‘ಸಚಿನ್ ಅವರ ಸಾಧನೆಯನ್ನು ನಾವೆಲ್ಲ ಅಭಿನಂದಿಸಲೇಬೇಕು’ ಎಂದು ಹೇಳಿದರು.

‘ಕಾರಣಾಂತರಗಳಿಂದ ಪಾಕಿಸ್ತಾನಕ್ಕೆ ವಿಶ್ವ ಕಪ್ ಆತಿಥ್ಯದಲ್ಲಿ ಭಾಗಿಯಾಗಲು ಆಗಲಿಲ್ಲ. ಆದರೆ ನಮ್ಮ ದೇಶ ಗಟ್ಟಿಯಾಗಿದೆ. ಈ ವಿಶ್ವ ಕಪ್‌ನಲ್ಲಿ ನಾವು ಸ್ಪಷ್ಟ ಗುರಿಯೊಂದಿಗೆ ಬಂದಿದ್ದೇವೆ. ನಾವು ಇತಿಹಾಸದ ಪುಟಗಳನ್ನು ತಿರುವಿ ನೋಡುವುದಿಲ್ಲ.
ಎಂದು ಪಂದ್ಯ ಆಡುತ್ತೇವೆಯೋ ಅಂದಿನ ಪಂದ್ಯದಲ್ಲಿ ಗೆಲುವಿನ ಕಡೆ ಮಾತ್ರ ನಮ್ಮ ಗಮನ. ಭಾರತ ವಿರುದ್ಧ ವಿಶ್ವ ಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಗೆದ್ದಿಲ್ಲ ಎಂಬುದು ಇತಿಹಾಸ. ಅದರ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಆಸ್ಟ್ರೇಲಿಯವೂ ಸತತ 34 ಪಂದ್ಯಗಳಲ್ಲಿ ಒಂದನ್ನೂ ಸೋತಿರಲಿಲ್ಲ. ನಾವು ಅವರನ್ನು ಸೋಲಿಸಿದೆವು. ಭಾರತವೂ ಅವರನ್ನು ಸೋಲಿಸಿತು’ ಎಂದರು.

‘ನಮ್ಮ ತಂಡದಲ್ಲಿ ಈಗ ಒಗ್ಗಟ್ಟಿದೆ. ನಾಯಕ ಶಾಹಿದ್ ಅಫ್ರಿದಿ ಎಲ್ಲ ಆಟಗಾರರನ್ನು ಚೆನ್ನಾಗಿ ನಿಯಂತ್ರಿಸುತ್ತಿದ್ದಾರೆ, ಬೆಂಬಲಿಸುತ್ತಿದ್ದಾರೆ. ಉತ್ತಮ ಬೌಲಿಂಗ್ ನಮ್ಮ ಶಕ್ತಿ. ಬ್ಯಾಟಿಂಗ್‌ನಲ್ಲೂ ನಾವು ಹಿಂದೆ ಬಿದ್ದಿಲ್ಲ. ಒಬ್ಬ ಶತಕ ಹೊಡೆಯುವುದಕ್ಕಿಂತ ಹೆಚ್ಚಾಗಿ, ಎಲ್ಲ ಬ್ಯಾಟ್ಸಮನ್ನರು ಉಪಯುಕ್ತ ಕಾಣಿಕೆ ನೀಡಿದರೆ ಅದು ಗೆಲುವಿಗೆ ಸಾಕು. ಭಾರತ ವಿರುದ್ಧ ಉತ್ತಮ ಕ್ರಿಕೆಟ್ ಆಡುವುದೇ ನಮ್ಮ ಗುರಿ. ಬೇರೆ ಭಾವನೆಗಳಿಗೆ ಇಲ್ಲಿ ಅವಕಾಶ ಇಲ್ಲ. ಪಾಕಿಸ್ತಾನ ಒಂದು ಉತ್ತಮ ದೇಶ ಮತ್ತು ತಂಡ ಎಂಬ ಸಂದೇಶವನ್ನು ಈ ವಿಶ್ವ ಕಪ್‌ನಲ್ಲಿ ಕೊಡುವುದೇ ನಮ್ಮ ಉದ್ದೇಶ’ ಎಂದು ಅವರು ಹೇಳಿದರು.

‘ಸಚಿನ್ ತೆಂಡೂಲ್ಕರ್ ಒಬ್ಬ ಮಹಾನ್ ಆಟಗಾರ. ಅವರ ಬಗ್ಗೆ ನಮಗೆಲ್ಲ ಬಹಳ ಗೌರವ ಇದೆ. ಅವರ ಎದುರು ಆಡುವುದು ನಮಗೂ ಒಂದು ಒಳ್ಳೆಯ ಅನುಭವ’ ಎಂದೂ ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.