ADVERTISEMENT

ಗೆಲುವಿನ ಹಾದಿಯಲ್ಲಿ ನಡೆದ ನಡಾಲ್

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST
ಗೆಲುವಿನ ಹಾದಿಯಲ್ಲಿ ನಡೆದ ನಡಾಲ್
ಗೆಲುವಿನ ಹಾದಿಯಲ್ಲಿ ನಡೆದ ನಡಾಲ್   

ಮೆಲ್ಬರ್ನ್ (ಎಪಿ): ವಿಶ್ವಾಸಪೂರ್ಣ ಆಟವಾಡಿದ ಸ್ಪೇನ್‌ನ ಅಗ್ರ ಶ್ರೇಯಾಂಕದ ಆಟಗಾರ ರಫೆಲ್ ನಡಾಲ್ ಅವರು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದರು.

ಸೋಮವಾರ ನಡೆದ ಪಂದ್ಯದಲ್ಲಿ ನಡಾಲ್ 6-2, 6-4, 6-3ರಲ್ಲಿ ಕ್ರೊಯೇಷಿಯಾದ ಮರಿನ್ ಸಿಲಿಕ್ ಅವರನ್ನು ಮಣಿಸಿದರು. ಮೂರು ಸೆಟ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ನಡಾಲ್ ಸುಲಭವಾಗಿ ಗೆಲುವನ್ನು ತಮ್ಮದಾಗಿಸಿಕೊಂಡರು. ಆದರೆ ಎರಡನೇ ಸೆಟ್‌ನಲ್ಲಿ ಮಾತ್ರ ಎದುರಾಳಿ ಆಟಗಾರನಿಂದ ಕೊಂಚ ಪೈಪೋಟಿ ಎದುರಿಸಬೇಕಾಯಿತು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ನಾಲ್ಕನೇ ಶ್ರೇಯಾಂಕದ ಸ್ವೀಡನ್‌ನ ರಾಬಿನ್ ಸೊಡೆರ್‌ಲಿಂಗ್ 6-1, 3-6, 1-6, 6-4, 2-6ರಲ್ಲಿ ಉಕ್ರೇನ್‌ನ ಅಲೆಕ್ಸಾಂಡರ್ ಡೊಲೊಪೊಲೊವಾ ಎದುರೂ, ಇಂಗ್ಲೆಂಡ್‌ನ ಆ್ಯಂಡಿ ಮರ್ರೆ 6-3, 6-1, 6-1ರಲ್ಲಿ ಆಸ್ಟ್ರೇಲಿಯಾದ ಜರ್ಗಿನ್ ಮೆಲ್ಜರ್ ಮೇಲೂ, ಸ್ಪೇನ್‌ನ ಡೆವಿಡ್ ಫೆರರ್ 4-6, 6-2, 6-3, 6-4ರಲ್ಲಿ ಕೆನಡಾದ ಮಿಲೋಸ್ ರಾಯಿನಿಕ್ ವಿರುದ್ಧವೂ ಗೆಲುವು ಸಾಧಿಸಿದರು.

ಎರಡನೇ ಶ್ರೇಯಾಂಕದ ಆಟಗಾರ್ತಿ ರಷ್ಯಾದ ವೆರಾ ಜೊನಾರೇವಾ ಮಹಿಳೆಯರ ಸಿಂಗಲ್ಸ್ ವಿಭಾಗದ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಗೆಲುವು ಪಡೆದರು. ಇವರು 6-4, 6-1ರಲ್ಲಿ ಜೆಕ್ ಗಣರಾಜ್ಯದ ಇವೆಟಾ ಬೆನೆಸೊವಾ ಅವರನ್ನು ಪರಾಭವಗೊಳಿಸಿದರು.

ಇದೇ ವಿಭಾಗದ ಇತರ ಪಂದ್ಯದಲ್ಲಿ ಸ್ವಿಜ್ಜರ್‌ಲೆಂಡ್‌ನ ಪೆಟ್ರಾ ಕ್ವಿತೊವಾ 3-6, 6-3, 6-3ರಲ್ಲಿ ಇಟಲಿಯ ಫ್ಲೆವಿಯಾ ಪೆನ್ನಟ್ಟಾ ವಿರುದ್ಧವೂ ಜಯ ಸಾಧಿಸಿದರು. ಆತಿಥೇಯ ಆಸ್ಟ್ರೇಲಿಯಾದ ಕಸ್ಟೆನ್ ಬಾಲ್ ಹಾಗೂ ಸಲ್ಲೆ ಪೀರ್ಸ್‌ ಜೋಡಿ ಮಿಶ್ರ ಡಬಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಅಮೆರಿಕಾದ ಅಗ್ರ ಶ್ರೇಯಾಂಕದ ಲೆಜಿಯಲ್ ಹಬರ್ ಹಾಗೂ ಬಾಬ್ ಬ್ರಯಾನ್ ಜೋಡಿಯಿಂದ ವಾಕ್ ಓವರ್ ಪಡೆದು ಮೂರನೇ ಸುತ್ತಿಗ ಪ್ರವೇಶ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.