ADVERTISEMENT

‘ಗೆಲ್ಲಬೇಕೆಂಬ ಛಲವಿರಲಿಲ್ಲ’

ಪಿಟಿಐ
Published 8 ಮೇ 2018, 19:30 IST
Last Updated 8 ಮೇ 2018, 19:30 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ಹೈದರಾಬಾದ್‌: ‘ಸನ್‌ರೈಸರ್ಸ್‌ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಕಳಪೆ ಆಟವಾಡಿದೆವು. ಸೋಲಲು ನಾವು ಅರ್ಹರು’ ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದರು.

ಸೋಮವಾರ ನಡೆದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದ ನಂತರ ನಡೆದ ಸುದ್ದಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಪಂದ್ಯದಲ್ಲಿ ಆರ್‌ಸಿಬಿಯು ಐದು ರನ್‌ಗಳಿಂದ ಸೋತಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ರೈಸರ್ಸ್‌, 146 ರನ್‌ಗಳಿಗೆ ಆಲೌಟಾಗಿತ್ತು. ಗುರಿ ಬೆನ್ನತ್ತಿದ ಆರ್‌ಸಿಬಿಯು 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 141 ರನ್‌ ಗಳಿಸಿತು.

ADVERTISEMENT

‘ನಾವು ತೋರಿದ ಸಾಮರ್ಥ್ಯ ಉತ್ತಮವಾಗಿರಲಿಲ್ಲ. ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಲು ಬೇಕಾದ ಛಲ ನಮ್ಮ ಆಟದಲ್ಲಿ ಕಾಣಿಸಲಿಲ್ಲ. ತಂಡದ ಶಕ್ತಿಗೆ ಅನುಗುಣವಾಗಿ ಈ ಆವೃತ್ತಿಯಲ್ಲಿ ನಾವು ಸಾಧನೆ ತೋರಲಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಕೊನೆಯ ಮೂರು ಓವರ್‌ಗಳಲ್ಲಿ ಪಂದ್ಯದ ಗತಿ ಬದಲಿಸಿದ ಸನ್‌ರೈಸರ್ಸ್‌ನ ಬೌಲಿಂಗ್‌ ಅದ್ಬುತವಾಗಿತ್ತು. ಅಂತಹ ಒತ್ತಡದಲ್ಲಿಯೂ ಸ್ಥಿರತೆ ಕಳೆದುಕೊಳ್ಳದೇ ಪಂದ್ಯ ಗೆಲ್ಲಿಸಿದ ಸಿದ್ಧಾರ್ಥ್‌ ಕೌಲ್‌ ಹಾಗೂ ಭುವನೇಶ್ವರ್‌ ಕುಮಾರ್‌ ಅವರು ಶ್ಲಾಘನೆಗೆ ಅರ್ಹರು’ ಎಂದು ಭಾರತ ತಂಡದ ನಾಯಕ ಹೇಳಿದರು.

‘ಬೌಲಿಂಗ್ ವಿಭಾಗದಲ್ಲಿ ಸನ್‌ರೈಸರ್ಸ್‌ ತಂಡವು ಅತ್ಯಂತ ಬಲಿಷ್ಠವಾಗಿದೆ. ಆದರೆ, ಎಲ್ಲ ವಿಭಾಗಗಳನ್ನೂ ಪರಿಗಣಿಸಿದರೆ ಕಿಂಗ್ಸ್‌ ಇಲೆವನ್‌ ಪಂಜಾಬ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಶಕ್ತಿಯುತವಾಗಿವೆ’ ಎಂದು ಅವರು ತಿಳಿಸಿದರು.

‘ಗುರಿಯು ಸವಾಲಿನಿಂದ ಕೂಡಿತ್ತು’: ‘ಬೌಲಿಂಗ್‌ಗೆ ಹೆಚ್ಚು ಅನುಕೂಲಕರವಾಗಿದ್ದ ಆ ಪಿಚ್‌ನಲ್ಲಿ 150 ರನ್‌ಗಳ ಗುರಿಯು ಹೆಚ್ಚು ಸವಾಲಿನಿಂದ ಕೂಡಿ
ರುತ್ತದೆ’ ಎಂದು ಸನ್‌ರೈಸರ್ಸ್‌ ತಂಡದ ಕೇನ್‌ ವಿಲಿಯಮ್ಸನ್‌ ಹೇಳಿದರು.

‘ಬ್ಯಾಟಿಂಗ್‌ ಮಾಡಲು ಅಂಗಳಕ್ಕಿಳಿಯುವ ಮುಂಚೆಯೇ 150 ರನ್‌ಗಳನ್ನು ಗಳಿಸಿದರೆ ಎದುರಾಳಿಗಳನ್ನು ಕಟ್ಟಿಹಾಕಬಹುದು ಎಂಬ ಯೋಜನೆ ಸಿದ್ಧಪಡಿಸಿಕೊಂಡಿದ್ದೆವು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.