ADVERTISEMENT

ಗೆಲ್ಲುವುದು ಹೆಮ್ಮೆಯ ಸಂಗತಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ಗ್ರೇಟರ್ ನೊಯಿಡಾ (ಐಎಎನ್‌ಎಸ್): ಚೊಚ್ಚಲ ಇಂಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ-1 ರೇಸ್‌ನಲ್ಲಿ ಗೆಲುವು ಪಡೆಯುವುದು `ಹೆಮ್ಮೆಯ ಸಂಗತಿ~ ಎಂದು ರೆಡ್‌ಬುಲ್ ತಂಡದ ಸೆಬಾಸ್ಟಿಯನ್ ವೆಟೆಲ್ ನುಡಿದಿದ್ದಾರೆ.

ಪ್ರಸಕ್ತ ಋತುವಿನ ಚಾಂಪಿಯನ್ ಎನಿಸಿರುವ ವೆಟೆಲ್ ಶನಿವಾರ ಅರ್ಹತಾ ಹಂತದಲ್ಲಿ ಅತ್ಯುತ್ತಮ ಪ್ರದರ್ಶ ನೀಡಿ `ಪೋಲ್ ಪೊಸಿಷನ್~ ಪಡೆದಿದ್ದಾರೆ. ಭಾನುವಾರ ಅವರು ಮೊದಲಿಗರಾಗಿ ಸ್ಪರ್ಧೆ ಆರಂಭಿಸುವರು. ಬುದ್ಧ ಇಂಟರ್‌ನ್ಯಾಷನಲ್ ಸರ್ಕೀಟ್ `ಸವಾಲಿನಿಂದ ಕೂಡಿದೆ~ ಎಂದು ತಿಳಿಸಿದ ವೆಟೆಲ್, ಎಚ್ಚರಿಕೆಯಿಂದ ಕಾರು ಚಾಲನೆ ಮಾಡುವುದು ಅಗತ್ಯ ಎಂದಿದ್ದಾರೆ.

ಟ್ರ್ಯಾಕ್‌ನಲ್ಲಿ ದೂಳು ತುಂಬಿರುವ ಕಾರಣ ಯಾವುದೇ ಕ್ಷಣದಲ್ಲಿ ಅಪಾಯ ಎದುರಾಗಬಹುದು ಎಂಬುದು ಅವರ ಹೇಳಿಕೆ. `ಕಳೆದ ಎರಡು ದಿನಗಳ ಕಾಲ ಈ ಟ್ರ್ಯಾಕ್‌ನಲ್ಲಿ ಕಾರು ಓಡಿಸಿದ್ದೇವೆ. ಟ್ರ್ಯಾಕ್‌ನ ಹೊರಭಾಗ ದೂಳಿನಿಂದ ಕೂಡಿದೆ. ಈ ಕಾರಣ ಕಾರು ಟ್ರ್ಯಾಕ್ ಬಿಟ್ಟು ಅಲ್ಪ ಹೊರಗೆ ಚಲಿಸಿದರೆ ನಿಯಂತ್ರಣ ಸಾಧಿಸುವುದು ಕಷ್ಟ. ಈ ವೇಳೆ ಸಾಕಷ್ಟು ಸಮಯ ವ್ಯರ್ಥವಾಗಲಿದೆ~ ಎಂದಿದ್ದಾರೆ.

`ಮೊದಲ ಕೆಲವು ಲ್ಯಾಪ್‌ಗಳ ಬಳಿಕ ಹೆಚ್ಚಿನ ಗ್ರಿಪ್ ಲಭಿಸಲಿದೆ. ಆಗ ಕಾರಿನ ಮೇಲೆ ಸುಲಭದಲ್ಲಿ ನಿಯಂತ್ರಣ ಸಾಧಿಸಬಹುದು. 60 ಲ್ಯಾಪ್‌ಗಳ ರೇಸ್ ಇದಾಗಿದೆ. ಸಮಯ ಕಳೆದಂತೆ ದೂಳಿನ ಸಮಸ್ಯೆ ಇಲ್ಲವಾಗಬಹುದು. ಇದೊಂದು ಅತ್ಯುತ್ತಮ ಟ್ರ್ಯಾಕ್. ಇಂತಹ ಟ್ರ್ಯಾಕ್ ನಿರ್ಮಿಸುವುದು ಸುಲಭವಲ್ಲ~ ಎಂದು ವೆಟೆಲ್ ಶನಿವಾರ ತಿಳಿಸಿದರು.

ಇದೇ ತಂಡದ ಇನ್ನೊಬ್ಬ ಚಾಲಕ ಮಾರ್ಕ್ ವೆಬರ್ ಕೂಡಾ ಗೆಲುವಿನ ವಿಶ್ವಾಸ ಹೊಂದಿದ್ದಾರೆ. ವೆಟೆಲ್ ಬಳಿಕ ವೆಬರ್ ಎರಡನೆಯವರಾಗಿ ಸ್ಪರ್ಧೆ ಆರಂಭಿಸುವರು. ವೆಬರ್ ಪ್ರಸಕ್ತ ಋತುವಿನಲ್ಲಿ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಆದ್ದರಿಂದಭಾನುವಾರ ವೆಟೆಲ್ ಉದ್ದೇಶಪೂರ್ವಕ ತನ್ನದೇ ತಂಡದ ವೆಬರ್‌ಗೆ ಮೊದಲ ಸ್ಥಾನ ಬಿಟ್ಟುಕೊಡುವರು ಎಂಬ ಮಾತು ಕೇಳಿಬರುತ್ತಿದೆ. ರೆಡ್‌ಬುಲ್ ತಂಡ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ವೆಬರ್ ಟರ್ಕಿ ಮತ್ತು ಬೆಲ್ಜಿಯಂನಲ್ಲಿ ನಡೆದ ರೇಸ್‌ಗಳಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಪ್ರಸಕ್ತ ಋತುವಿನಲ್ಲಿ ಅವರು ಒಟ್ಟು ಒಂಬತ್ತು ಸಲ ಅಗ್ರ ಮೂರು ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಚಾಂಪಿಯನ್ ಆಗುವ ಅದೃಷ್ಟ ಒದಗಿ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.