ADVERTISEMENT

ಚಾಂಡಿಲ ಮತ್ತೆ 3 ದಿನ ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 19:59 IST
Last Updated 17 ಜೂನ್ 2013, 19:59 IST

ನವದೆಹಲಿ (ಪಿಟಿಐ): ಅಮಾನತುಗೊಂಡಿರುವ ಕ್ರಿಕೆಟಿಗ ಅಜಿತ್ ಚಾಂಡಿಲ ಅವರನ್ನು ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ವಿಚಾರಣೆಗಾಗಿ ದೆಹಲಿ ನ್ಯಾಯಾಲಯ ಮತ್ತೆ ಮೂರು ದಿನ ಪೊಲೀಸ್ ವಶಕ್ಕೆ ಒಪ್ಪಿಸಿದೆ.

ವಿಚಾರಣೆ ವೇಳೆ `ಮೋಕಾ' (ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ) ವಿಧಿಸಿದ ಬಳಿಕ ಇತರ ಆರೋಪಿಗಳಿಂದ ಸಂಗ್ರಹಿಸಿರುವ ಸಾಕ್ಷ್ಯಗಳನ್ನು ದೃಢಪಡಿಸಲು ಚಾಂಡಿಲ ಉಪಸ್ಥಿತಿ ಅಗತ್ಯವಿದೆ. ಮತ್ತು ಭೂಗತ ಲೋಕದ ದಾವೂದ್ ಇಬ್ರಾಹಿಂ ಹಾಗೂ ಆತನ ಆಪ್ತ ಚೋಟಾ ಶಕೀಲ್ ನಿರ್ವಹಿಸುತ್ತಿದ್ದ ಸಂಘಟಿತ ಅಪರಾಧಗಳ ಪಿತೂರಿಯ ಮೂಲ ಶೋಧಿಸಬೇಕಿದೆ. ಆದ್ದರಿಂದ ಆರೋಪಿ ಚಾಂಡಿಲ ಅವರನ್ನು ಐದು ದಿನಗಳ ಪೊಲೀಸ್ ವಶಕ್ಕೆ ನೀಡಿ' ಎಂದು ಸರ್ಕಾರಿ ಹಿರಿಯ ಅಭಿಯೋಜಕ ರಾಜೀವ್ ಮೋಹನ್ ಕೋರಿದರು.

`ಪ್ರಕರಣವನ್ನು ಮೋಕಾ ನಿಬಂಧನೆಗಳ ಅಡಿ ತನಿಖೆ ಮಾಡಲಾಗುತ್ತಿದ್ದು, ಸಂಪೂರ್ಣ ಹಗರಣವನ್ನು ಬಯಲಿಗೆ ಎಳೆಯಲು ಪ್ರಾಸಿಕ್ಯೂಷನ್‌ಗೆ ಎಲ್ಲಾ ಅವಕಾಶ ನೀಡಬೇಕಾಗುತ್ತದೆ' ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಜಯ್ ಕುಮಾರ್ ಜೈನ್ ಅಭಿಪ್ರಾಯ ಪಟ್ಟರು. ಅಲ್ಲದೇ, `ಆರೋಪಿ ಚಾಂಡಿಲ ಅವರನ್ನು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ' ಎಂದು ತೀರ್ಪು ನೀಡಿದರು.

ಚಾಂಡಿಲ ಅವರನ್ನು ಜೂನ್ 20 ರಂದು ಹಾಜರುಪಡಿಸುವಂತೆಯೂ ದೆಹಲಿ ಪೊಲೀಸರ ವಿಶೇಷ ಘಟಕಕ್ಕೆ ನ್ಯಾಯಾಲಯ ಸೂಚಿಸಿದೆ.
ಈ ನಡುವೆ, ಹಲವು ಬುಕ್ಕಿಗಳ ತಪ್ಪೊಪ್ಪಿಗೆಗಳನ್ನು ಇನ್ನು ದಾಖಲಿಸಿಕೊಳ್ಳಬೇಕಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು. ಪರಿಣಾಮವಾಗಿ ಚಾಂಡಿಲ ಹಾಗೂ ಇತರ ಐವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ಜೂನ್ 22ಕ್ಕೆ ಮುಂದೂಡಿತು.

`ರಮೇಶ್ ವ್ಯಾಸ್ ಹಾಗೂ ಮತ್ತೋರ್ವ  ಬುಕ್ಕಿಯ ತಪ್ಪೊಪ್ಪಿಗೆ ಹೇಳಿಕೆಯನ್ನು ಈಗಾಗಲೇ ದಾಖಲಿಸಿಕೊಳ್ಳಲಾಗಿದೆ. ಸುನಿಲ್ ಭಾಟಿಯಾ ಅವರ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ' ಎಂದೂ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ತಿಳಿಸಿದರು. ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಕ್ರಿಕೆಟಿರಾದ ಶ್ರೀಶಾಂತ್, ಅಂಕಿತ್ ಚವಾಣ್ ಹಾಗೂ ಇತರ 19 ಮಂದಿ ಈಗಾಗಲೇ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.