ಬರ್ಮಿಂಗ್ ಹ್ಯಾಂ (ಪಿಟಿಐ): ಆ್ಯಷಸ್ ಸರಣಿಯ ಸಾಂಪ್ರದಾಯಿಕ ಎದುರಾಳಿಗಳಾದ ಆತಿಥೇಯ ಇಂಗ್ಲೆಂಡ್ ಮತ್ತು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡಗಳು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಶನಿವಾರದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಸ್ಫೂರ್ತಿ ತುಂಬಬಲ್ಲ ನಾಯಕ ಮೈಕಲ್ ಕ್ಲಾಕ್ ಬೆನ್ನು ನೋವಿನ ಕಾರಣ ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಇದು ಆಸೀಸ್ ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ. ಈ ತಂಡವನ್ನು ಜಾರ್ಜ್ ಬೇಲಿ ಮುನ್ನಡೆಸಲಿದ್ದಾರೆ. ಈ ತಂಡ 2006-07 ಮತ್ತು 2009-10ರಲ್ಲಿ ಸತತ ಎರಡು ವರ್ಷ ಟ್ರೋಫಿ ಎತ್ತಿ ಹಿಡಿದಿದ್ದು, ಹ್ಯಾಟ್ರಿಕ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದೆ.
ಇಂಗ್ಲೆಂಡ್ ತಂಡ ತವರಿನ ಕ್ರೀಡಾಂಗಣದ ಲಾಭ ಪಡೆಯುವ ಲೆಕ್ಕಾಚಾರದಲ್ಲಿದೆ. ಈ ತಂಡ ಏಕದಿನ ಮಾದರಿಯಲ್ಲಿ ಬಲಿಷ್ಠವಾಗಿದ್ದು, ಆಸೀಸ್‌ಗೆ ಪ್ರಬಲ ಸವಾಲು ಒಡ್ಡುವ ವಿಶ್ವಾಸದಲ್ಲಿದೆ. 2010ರಿಂದ ತವರಿನ ಕ್ರೀಡಾಂಗಣಗಳಲ್ಲಿ 37 ಏಕದಿನ ಪಂದ್ಯಗಳನ್ನಾಡಿರುವ ಇಂಗ್ಲೆಂಡ್ 23ರಲ್ಲಿ ಗೆಲುವು ಪಡೆದಿದೆ. ಆಸೀಸ್ ತಂಡ ಅಭ್ಯಾಸ ಪಂದ್ಯದಲ್ಲಿ ಭಾರತದ ಎದುರು ಅನುಭವಿಸಿದ ಹೀನಾಯ ಸೋಲು ತಂಡವನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಆಸೀಸ್ ಸ್ಥಳೀಯ ವಾತಾವರಣಕ್ಕೆ ಒಗ್ಗಿಕೊಳ್ಳುವ ಉದ್ದೇಶದಿಂದ ಬೇಗನೇ ಇಲ್ಲಿಗೆ ಆಗಮಿಸಿತ್ತು. ಅಭ್ಯಾಸ ಪಂದ್ಯದಲ್ಲಿ ಭಾರತ ಗಳಿಸಿದ್ದ 309 ರನ್‌ಗಳಿಗೆ ಪ್ರತಿಯಾಗಿ ಆಸ್ಟ್ರೇಲಿಯಾ ಕೇವಲ 65 ರನ್‌ಗಳಿಗೆ ಆಲ್‌ಔಟ್ ಆಗಿತ್ತು.
ಐಪಿಎಲ್‌ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಪರ ಆಡಿದ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಪ್ರಮುಖ ಬಲ ಎನಿಸಿದ್ದಾರೆ. ಡೇವಿಡ್ ವಾರ್ನರ್, ಫಿಲಿಪ್ ಹ್ಯೂಗಸ್ ಆಸೀಸ್ ತಂಡದ ಬ್ಯಾಟಿಂಗ್ ಶಕ್ತಿ.
ಆರಂಭ: ಮಧ್ಯಾಹ್ನ 3ಕ್ಕೆ (ಭಾರತೀಯ ಕಾಲಮಾನ).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.