ADVERTISEMENT

ಚಾಂಪಿಯನ್ಸ್‌ಲೀಗ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 19:30 IST
Last Updated 22 ಸೆಪ್ಟೆಂಬರ್ 2011, 19:30 IST
ಚಾಂಪಿಯನ್ಸ್‌ಲೀಗ್‌ಗೆ ಚಾಲನೆ
ಚಾಂಪಿಯನ್ಸ್‌ಲೀಗ್‌ಗೆ ಚಾಲನೆ   

ಬೆಂಗಳೂರು: ಅಲ್ಲಿ ಬಣ್ಣದ ಲೋಕವೇ ಸೃಷ್ಟಿಯಾಗಿತ್ತು. ಯುವಕ-ಯುವತಿಯರೆನ್ನುವ ಯಾವ ಭೇದವಿಲ್ಲದೆ ಇಂಗ್ಲೆಂಡ್‌ನ ಗಾಯಕ ಜೆ ಶಾನ್ ಗಾನದ ಮೋಡಿಗೆ ಅವರ ಕಾಲುಗಳು ಹೆಜ್ಜೆ ಹಾಕುತ್ತಿದ್ದರೆ, ಕೈ ಚಪ್ಪಾಳೆ ತಟ್ಟುತ್ತಿದ್ದವು. ಸಂಗೀತದ ಮೂಲಕ ನೆರದವರ ಮನಗೆದ್ದ ಆ ಗಾಯಕನ ಮೋಡಿಗೆ ಕ್ರಿಕೆಟಿಗರು ಕೂಡಾ ಹೆಜ್ಜೆ ಹಾಕಿ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದರು. 

ಈ ಎಲ್ಲಾ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರಿನ ಅರಮನೆ ಮೈದಾನ. ಇಲ್ಲಿ ಗುರುವಾರ ನಡೆದ ಚಾಂಪಿಯ ನ್ಸ್ ಲೀಗ್ ಕ್ರಿಕೆಟ್ ಟೂರ್ನಿ ಉದ್ಘಾಟನಾ ಸಮಾರಂಭದ ವೇಳೆ ಕಂಡು ಬಂದ ದೃಶ್ಯಗಳಿವು. ಈ ಸಂದರ್ಭದಲ್ಲಿ ಚಾಂಪಿಯನ್ಸ್ ಲೀಗ್‌ನಲ್ಲಿ ಪಾಲ್ಗೊಳ್ಳಲಿರುವ ಹತ್ತು ತಂಡಗಳು ನಾಯಕರು ವೇದಿಕೆ ಮೇಲೆ ಕಾಣಿಸಿಕೊಂಡರು. ಹಾಗೆಯೇ ಟ್ರೋಫಿಯನ್ನು ಅನಾವರಣಗೊಳಿಸಲಾಯಿತು.

ಪ್ರತಿ ತಂಡದ ನಾಯಕರು ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿದ್ದಂತೆ ಬಾಣ ಬಿರುಸುಗಳ ಚಿತ್ತಾರ ಆಗಸದತ್ತ ಮುಖ ಮಾಡಿದವು. ಅದರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ವೇದಿಕೆ ಮೇಲೆ ಬಂದಾಗ `ಚಕ್ ದೇ ಇಂಡಿಯಾ~ ಎಂದು ಅಭಿಮಾನಿಗಳು ಕುಣಿದು ಸಂಭ್ರಮಿಸಿದರು. ಅದೇ ರೀತಿ ಡೇನಿಯಲ್ ವೆಟೋರಿ ಸಹ ವೇದಿಕೆಗೆ ಆಗಮಿಸಿದಾಗ `ಆರ್‌ಸಿಬಿ, ಆರ್‌ಸಿಬಿ~ ಎನ್ನುವ ಘೋಷಣೆಗಳು ಕೇಳಿ ಬಂದವು.

ವೇದಿಕೆಯ ಬಲಭಾಗದಲ್ಲಿ ನಿಂತಿದ್ದ ಕ್ರಿಸ್ ಗೇಲ್ ಅವರ ಬಳಿ ಆಟೋ ಗ್ರಾಫ್ ಪಡೆಯಲು ಯುವತಿಯರಂತೂ ಮುಗಿ ಬಿದ್ದಿದ್ದರು. ಈ ಗುಂಪಿನಿಂದ ತಪ್ಪಿಸಿಕೊಳ್ಳಲು ಗೇಲ್ ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ.
ನಿಧನರಾದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಠೋಡಿ ಅವರಿಗೆ ಇದೇ ಸಂದರ್ಭದಲ್ಲಿ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.

 




 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT