ADVERTISEMENT

ಚಾಂಪಿಯನ್ಸ್ ಲೀಗ್ ಕ್ರಿಕೆಟ್: ರುಹುನಾ ಇಲೆವೆನ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಹೈದರಾಬಾದ್: ದಿನೇಶ್ ಚಂಡಿಮಲ್ (ಔಟಾಗದೆ 62; 51 ಎಸೆತ, 6 ಬೌ, 2 ಸಿ.) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾದ ರುಹುನಾ ಇಲೆವೆನ್ ತಂಡದವರು ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ.

ಉಪ್ಪಳದಲ್ಲಿರುವ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರುಹುನಾ ಇಲೆವೆನ್‌ನ 160 ರನ್‌ಗಳಿಗೆ ಉತ್ತರವಾಗಿ ಲೀಸ್ಟರ್‌ಷೈರ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಇದರೊಂದಿಗೆ ಪ್ರಧಾನ ಹಂತಕ್ಕೆ ತೆರಳಲು ಈ ತಂಡ ಕೂಡ ಸ್ಪರ್ಧೆಯಲ್ಲಿ ಉಳಿದಿದೆ.

ಸವಾಲಿನ ಗುರಿ ಎದುರು ಲೀಸ್ಟರ್‌ಷೈರ್ ಅತ್ಯುತ್ತಮ ಆರಂಭ ಪಡೆಯಿತು. ಈ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಜೋಶುವಾ ಕಾಬ್ ಹಾಗೂ ಅಬ್ದುಲ್ ರಜಾಕ್ 15 ಎಸೆತಗಳಲ್ಲಿ 31 ರನ್ ಸೇರಿಸಿದರು.

ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ರಜಾಕ್ 46 ಎಸೆತಗಳಲ್ಲಿ 68 ರನ್ ಗಳಿಸಿದರು. ಆದರೆ ಉಳಿದ  ಬ್ಯಾಟ್ಸ್‌ಮನ್‌ಗಳಿಂದ ಹೇಳಿಕೊಳ್ಳುವ ಆಟ ಮೂಡಿಬರಲಿಲ್ಲ. ಇದರಿಂದ ಕೊನೆಯ ಹಂತದಲ್ಲಿ ಈ ತಂಡ ಎಡವಿತು.

ರುಹುನಾ ತಂಡದ ಜನಕಾ ಗುಣರತ್ನೆ (27ಕ್ಕೆ3) ಹಾಗೂ ಅಸಂಕಾ (ಸಿಲ್ವಾ 29ಕ್ಕೆ3) ಪರಿಣಾಮಕಾರಿ ಬೌಲಿಂಗ್ ಪ್ರದರ್ಶನ ತೋರಿದರು. ಇದು ತಂಡಕ್ಕೆ ಎರಡು ಅಮೂಲ್ಯ ಪಾಯಿಂಟ್ ತಂದುಕೊಟ್ಟಿತು.

ಇದಕ್ಕೂ ಮೊದಲು ಆರಂಭಿಕ ಆಘಾತ ಕಂಡ ರುಹುನಾ ತಂಡಕ್ಕೆ ಆಸರೆಯಾಗಿ ನಿಂತಿದ್ದು ಚಂಡಿಮಲ್. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಅನುಭವಿ ಸನತ್ ಜಯಸೂರ್ಯ ಹಾಗೂ ಮಾಹೇಲ ಉದುವತ್ತೆ ಅವರ ವಿಕೆಟ್ ಪಡೆಯುವಲ್ಲಿ ಲೀಸ್ಟರ್‌ಷೈರ್ ಬೌಲರ್‌ಗಳು ಬೇಗ ಯಶಸ್ವಿಯಾದರು. ಆದರೆ ಚಂಡಿಮಾಲ್ ತಂಡದ ರಕ್ಷಣೆಗೆ ನಿಂತರು.

ಟ್ರಿನಿಡಾಡ್ ಅಂಡ್ ಟೊಬಾಗೊ ಎದುರಿನ ಪಂದ್ಯದಲ್ಲೂ ಚಂದಿಮಲ್ ಅರ್ಧ ಶತಕ ಗಳಿಸಿದ್ದರು. ಆದರೆ ಆ ಪಂದ್ಯದಲ್ಲಿ ರುಹುನಾ ಸೋಲು ಕಂಡಿತ್ತು.

ಸಂಕ್ಷಿಪ್ತ ಸ್ಕೋರ್: ರುಹುನಾ ಇಲೆವೆನ್ (ಶ್ರೀಲಂಕಾ): 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 (ದಿನೇಶ್ ಚಂಡಿಮಲ್ ಔಟಾಗದೆ 62, ಜನಿತ್ ಪೆರೇರಾ 19, ಶಲಿಕಾ ಕರುಣಾನಾಯಕೆ 28; ಹ್ಯಾರಿ ಗುರ್ನಿ 33ಕ್ಕೆ3, ಅಬ್ದುಲ್ ರಜಾಕ್ 30ಕ್ಕೆ2);

ಲೀಸ್ಟರ್‌ಷೈರ್: 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 156 (ಜೋಶುವಾ ಕಾಬ್ 15, ಅಬ್ದುಲ್ ರಜಾಕ್ 68, ಆ್ಯಂಡ್ರ್ಯೂ ಮೆಕ್‌ಡೊನಾಲ್ಡ್ 24; ಜನಕಾ ಗುಣರತ್ನೆ 27ಕ್ಕೆ3, ಅಸಂಕಾ ಸಿಲ್ವಾ 29ಕ್ಕೆ3):
ಫಲಿತಾಂಶ: ರುಹುನಾ ತಂಡಕ್ಕೆ ನಾಲ್ಕು ರನ್ ಜಯ. ಪಂದ್ಯ ಶ್ರೇಷ್ಠ: ದಿನೇಶ್ ಚಂಡಿಮಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT