ADVERTISEMENT

ಚಾಂಪಿಯನ್‌ ಜರ್ಮನಿಗೆ ಆಘಾತ

ಗೆದ್ದ ಮೆಕ್ಸಿಕೊ; ಜಯದ ಗೋಲು ದಾಖಲಿಸಿದ ಲೊಜಾನೊ

ರಾಯಿಟರ್ಸ್
Published 17 ಜೂನ್ 2018, 18:07 IST
Last Updated 17 ಜೂನ್ 2018, 18:07 IST
ಮೆಕ್ಸಿಕೊದ ಹಿರ್ವಿಂಗ್‌ ಲೊಜಾನೊ ಅವರು ಗೋಲು ಗಳಿಸಿದ ಕ್ಷಣ. -ಎಎಫ್‌ಪಿ ಚಿತ್ರ
ಮೆಕ್ಸಿಕೊದ ಹಿರ್ವಿಂಗ್‌ ಲೊಜಾನೊ ಅವರು ಗೋಲು ಗಳಿಸಿದ ಕ್ಷಣ. -ಎಎಫ್‌ಪಿ ಚಿತ್ರ   

ಮಾಸ್ಕೋ: ಹಾಲಿ ಚಾಂಪಿಯನ್ ಜರ್ಮನಿ ತಂಡವು ಭಾನುವಾರ ರಾತ್ರಿ ಲುಜ್‌ನಿಕಿ ಕ್ರೀಡಾಂಗಣದಲ್ಲಿ ಮೆಕ್ಸಿಕೊ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭಿಕ ಆಘಾತ ಕಂಡಿದೆ.

‘ಎಫ್‌’ ಗುಂಪಿನ ಪಂದ್ಯದಲ್ಲಿ ಮೆಕ್ಸಿಕೊ ತಂಡವು 1–0 ಗೋಲಿನಿಂದ ಬಲಿಷ್ಠ ಜರ್ಮನಿ ತಂಡವನ್ನು ಮಣಿಸಿತು. ಪಂದ್ಯದ ಆರಂಭದಿಂದಲೂ ಸಂಘಟಿತ ಹೋರಾಟ ನಡೆಸಿದ ಮೆಕ್ಸಿಕೊ, ಜರ್ಮನಿ ತಂಡದ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತು. ಈ ಮೂಲಕ 33 ವರ್ಷಗಳ ನಂತರ ಜರ್ಮನಿ ತಂಡದ ವಿರುದ್ಧ ಗೆಲುವು ದಾಖಲಿಸಿತು.

ಪಂದ್ಯದ 35ನೇ ನಿಮಿಷದಲ್ಲಿ ಮೆಕ್ಸಿಕೊದ ಹಿರ್ವಿಂಗ್‌ ಲೊಜಾನೊ ಅವರು ಗೋಲು ಗಳಿಸಿದರು. ಜರ್ಮನಿಯ ಬಲಿಷ್ಠ  ರಕ್ಷಣಾ  ಆಟಗಾರರನ್ನು ವಂಚಿಸಿದ ಲೊಜಾನೊ ಅವರು ಅಮೋಘ ಗೋಲು ಹೊಡೆದು ಮಿಂಚಿದರು. ಅವರ ಚುರುಕಿನ ಆಟಕ್ಕೆ ಹಿಂದಿನ ವಿಶ್ವಕಪ್‌ನಲ್ಲಿ ಚಿನ್ನದ ಕೈಗವಸು ಗೆದ್ದಿದ್ದ ಜರ್ಮನಿಯ ಗೋಲ್‌ಕೀಪರ್‌ ಮ್ಯಾನುಯಲ್‌ ನುಯರ್‌ ಅವರು ಅರೆ ಕ್ಷಣ ಅವಾಕ್ಕಾದರು.

ADVERTISEMENT

ದ್ವಿತಿಯಾರ್ಧದ ಆರಂಭದಿಂದಲೂ ಜರ್ಮನಿ ತಂಡದ ಆಟಗಾರರು ಗೋಲು ಗಳಿಸಲು ಮಾಡಿದ ಹಲವು ಪ್ರಯತ್ನಗಳನ್ನು ಮೆಕ್ಸಿಕೊದ ರಕ್ಷಣಾ ವಿಭಾಗದ ಆಟಗಾರರು ಹಾಗೂ ಗೋಲ್‌ಕೀಪರ್‌ ವಿಫಲಗೊಳಿಸಿದರು.

ಕಳೆದ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿದಿದ್ದ ಜರ್ಮನಿ ತಂಡದ ಸೋಲು, ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಆ ದೇಶದ ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.